Thursday, August 15, 2013

ದ.ಕ. 67ನೇ ಸ್ವಾತಂತ್ರೋತ್ಸವದ ಸಂಭ್ರಮ

ಮಂಗಳೂರು, ಆಗಸ್ಟ್.15:  67ನೇ ಸ್ವಾತಂತ್ರೋತ್ಸವ ಮಂಗಳೂರಿನಲ್ಲಿಂದು ಸಂಭ್ರಮ ಸಡಗರಗಳಿಂದ ಆಚರಿಸಲಾಯಿತು.ನಗರದ ನೆಹರು ಮೈದಾನಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ. ರಮಾನಾಥ ಅವರು ಧ್ವಜಾರೋಹಣ ನೆರವೇರಿಸಿ ,ಗೌರವ ವಂದನೆ ಸ್ವೀಕರಿಸಿದರು.
 ಬಳಿಕ ಸ್ವಾತಂತ್ರೋತ್ಸವ ಸಂದೇಶ ನೀಡಿದ ಉಸ್ತುವಾರಿ ಸಚಿವರು, 2014-15ರ ಬಜೆಟ್ ಮಂಡಿಸುವ  ವೇಳೆ ರಾಜ್ಯ ಸರಕಾರವು ನೂತನ ಕೈಗಾರಿಕಾ ನೀತಿ-2013 ಅನ್ನು ಜಾರಿಗೆ ತರಲಿದೆ ಎಂದರು.
ಈ ಬಾರಿಯ ಬಜೆಟ್ನಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ತಿಳಿಸಿದ ಅವರು, ಬಜೆಟ್ ನಲ್ಲಿ ತಿಳಿಸಿರುವಂತೆ ಮಂಗಳೂರಿನಲ್ಲಿ ಅಬ್ದುಲ್ ನಜೀರ್ ಸಾಬ್ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಪ್ರಾದೇಶಿಕ ತರಬೇತಿ ಕೇಂದ್ರ ಸ್ಥಾಪನೆ ಹಾಗೂ ಮಂಗಳೂರು ಕೇಂದ್ರ ಸ್ಥಾನದಲ್ಲಿ ಪೊಲೀಸ್ ಸಾರ್ವಜನಿಕ ಶಾಲೆಯ ಮಾದರಿಯ ಶಾಲೆಯನ್ನು ಪ್ರಾರಂಭಿಸಲಾಗುವುದು ಎಂದರು.
ಸಮಾಜ ಸುಧಾರಕ ಬ್ರಹ್ಮಶ್ರೀ ನಾರಾಯಣ ಗುರುಗಳ ಹೆಸರಿನಲ್ಲಿ ಪೀಠ ಸ್ಥಾಪಿಸುವ ಹಿನ್ನಲೆಯಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಅಧ್ಯಯನ ಕೇಂದ್ರ ಸ್ಥಾಪಿಸಲು ಎರಡು ಕೋಟಿ ರೂ. ಅನುದಾನ ಮೀಸಲಿರಿಸಲಾಗಿದೆ. ಮಂಗಳೂರು ವಿಶ್ವವಿದ್ಯಾಲಯದಲ್ಲಿ ಜೈನ ಕವಿ ರತ್ನಾಕರವರ್ಣಿ ಅಧ್ಯಯನ ಪೀಠ ಆರಂಭ ಹಾಗೂ ಮೂಡಬಿದರೆಯಲ್ಲಿ ಜೈನ ಕವಿ ರತ್ನಾಕರ ವಣರ್ಿ ಜಯಂತಿ ಆಚರಣೆಗೆ ಆರ್ಥಿಕ ನೆರವನ್ನು ಸಹ ಈ ಬಾರಿಯ ಬಜೆಟ್ನಲ್ಲಿ ಘೋಷಿಸಲಾಗಿದೆ.  ತುಳು ಮತ್ತು ಬಿಲ್ಲವ ಸಮಾಜದ ಆರಾಧ್ಯ ದೈವವಾದ ಕೋಟಿ ಚನ್ನಯ್ಯನವರ ಜನ್ಮಸ್ಥಳವಾದ ಪುತ್ತೂರು ತಾಲೂಕಿನ ಪಡುಮಲೆಯಲ್ಲಿ ಅವರು ಹುಟ್ಟಿ ಬೆಳೆದ ಕುರುಹುಗಳನ್ನು ಅಭಿವೃದ್ಧಿಪಡಿಸಲು 5 ಕೋಟಿ ರೂ. ನೀಡಲಾಗಿದೆ. ಕರಾವಳಿ ಮೀನುಗಾರಿಕೆಗೆ ಅತೀ ಅಗತ್ಯವಿರುವ ಮೀನುಗಾರಿಕೆ ಬಂದರನ್ನು ಮಂಗಳೂರಿನ ಕುಳಾಯಿಯಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದೆ. ರಾಜ್ಯದ ಮೀನುಗರಿಕಾ ಇಲಾಖಾ ಕಾರ್ಯಕ್ರಮಕ್ಕಾಗಿ 2013-14ನೇ ಸಾಲಿಗೆ 229 ಕೋಟಿ ರೂ.ಗಳನ್ನು ಒದಗಿಸಲಾಗಿದೆ ಎಂದು ಹೇಳಿದರು. 
ಅನ್ನ ಭಾಗ್ಯ, ಕ್ಷೀರ ಭಾಗ್ಯ, ಹಾಲಿಗೆ ಪೋತ್ಸಾಹ ಧನ, ಅಲ್ಪಸಂಖ್ಯಾತರ ಕಲ್ಯಾಣ ಕೋಶ, ವಿದ್ಯುತ್ ಬಾಕಿ ಮನ್ನಾ, ಸೇರಿದಂತೆ ರೈತರು, ಬಡವರು, ಅಲ್ಪಸಂಖ್ಯಾತರು ಸೇರಿದಂತೆ ಜನಪರ ಯೋಜನೆಗಳು, ಸಹಕಾರಗಳ ಮೂಲಕ ರಾಜ್ಯ ಸರಕಾರ ರಾಜ್ಯವನ್ನು ಗುಡಿಸಲು ರಹಿತ ರಾಜ್ಯವನ್ನಾಗಿ ರೂಪಿಸುವ ಗುರಿಯನ್ನು ಹೊಂದಿದೆ. 2017ರ ಅವಧಿಗೆ ವಿದ್ಯುತ್ ವಲಯದಲ್ಲಿ ಸಂಪೂರ್ಣ ಸ್ವಾವಲಂಬನೆಯನ್ನು ಸಾಧಿಸುವ ಬದ್ಧತೆಯನ್ನು ಸರಕಾರ ಹೊಂದಿದೆ ಎಂದರು. 
ಜನಪರ ನೀತಿ ಮತ್ತು ಜನೋಪಯೋಗಿ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುವ ಮೂಲಕ ಕನರ್ಾಟಕವನ್ನು  ಪ್ರಗತಿಯ ಪಥಕ್ಕೆ ಕೊಂಡೊಯ್ಯುವ ವಿಶ್ವಾಸ ಸರಕಾರದ್ದಾಗಿದ್ದು, ಕಳೆದ ಎರಡು ತಿಂಗಳ ಅವಧಿಯಲ್ಲಿ ನಾವು ಜಾರಿಗೊಳಿಸಿರುವ ಹಲವಾರು ಜನಪರ ಕಾರ್ಯಕ್ರಮಗಳು ಜನತೆಯ ಸಮಸ್ಯೆಗಳನ್ನು ನಿವಾರಿಸುವಲ್ಲಿ ಸರಕಾರದ ಕಾಳಜಿ ಮತ್ತು ಬದ್ಧತೆಗೆ ದಿಕ್ಸೂಚಿ ಎಂದು ಉಸ್ತುವಾರಿ ಸಚಿವರು ನುಡಿದರು. ದೇಶ ಹಾಗೂ ರಾಜ್ಯದ ಸಾಂಸ್ಕೃತಿಕ ಹಾಗೂ ಪಾರಂಪರಿಕ ಜನಜೀವನದಲ್ಲಿ ಕೊರಗ ಸಮುದಾಯದ ಪಾತ್ರ ಅಮೂಲವಾಗಿರುವ ಹಿನ್ನೆಲೆಯಲ್ಲಿ ಮೂಲ ನಿವಾಸಿಗಳಿಗೆ ಸೂಕ್ತ ಮೂಲಭೂತ ಸೌಲಭ್ಯ ಒದಗಿಸುವುದರೊಂದಿಗೆ ಅವರನ್ನು ರಾಷ್ಟ್ರೀಯ ಮುಖ್ಯವಾಹಿನಿಗೆ ತರುವ ಉದ್ದೇಶದೊಂದಿಗೆ ದ.ಕ. ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ವೆಬ್ ಸೈಟ್ www.itdpdk.com  ನ ಅನಾವರಣ ಹಾಗೂ ಕೊರಗ ಸಮುದಾಯದ ನಾಲ್ವರಿಗೆ ಸಾಂಕೇತಿಕವಾಗಿ ಗುರುತಿನ ಚೀಟಿಯನ್ನು ರಾಜ್ಯ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ಬಿ. ರಮಾನಾಥ ರೈ ವಿತರಿಸಿದರು
ಕಾರ್ಯಕ್ರಮದಲ್ಲಿ ಯೆನೆಪೊಯ ಶಾಲೆಯ 3ನೆ ತರಗತಿಯ ಪ್ರತಿಭಾನ್ವಿತ ವಿದ್ಯಾರ್ಥಿ, ರಾಜ್ಯ ಹಾಗೂ ರಾಷ್ಟ್ರ ಮಟ್ಟಗಳಲ್ಲಿ ಹಲವಾರು ಪ್ರಶಸ್ತಿ ಪುರಸ್ಕಾರಗಳನ್ನು ಪಡೆದಿರುವ  ನೇಸರ ಆರ್. ಪೂಜಾರಿ ಅವರನ್ನು ಸಚಿವರು ಸನ್ಮಾನಿಸಿದರು.
ಇದೇ ವೇಳೆ ಪಥಸಂಚಲನದಲ್ಲಿ ಅತ್ಯುತ್ತಮ ನಿರ್ವಹಣೆ ತೋರಿದಕ್ಕಾಗಿ ಎನ್ ಸಿ ಸಿ ಏರ್ ವಿಂಗ್ ಸೀನಿಯರ್ ವಿಭಾಗಕ್ಕೆ ಪ್ರಥಮ ಹಾಗೂ ಅಳಿಕೆ ಶ್ರೀ ಸತ್ಯಸಾಯಿ ಬ್ಯಾಂಡ್ ತಂಡಕ್ಕೆ ದ್ವಿತೀಯ ಬಹುಮಾನ ನೀಡಿ ಗೌರವಿಸಲಾಯಿತು.
ಕಾರ್ಕಳದ ಇಂಡಿಯನ್ ಏರೋ ಮಾಡಲಿಂಗ್ ಸೊಸೈಟಿಯ ರತ್ನಾಕರ ನಾಯಕ್ ಅವರ ಪುಟಾಣಿ ಮಾದರಿ ಹೆಲಿಕಾಪ್ಟರ್ ಗ ಳು ನೆಹರೂ ಮೈದಾನದಲ್ಲಿ ಹಾರಾಟ ನಡೆಸುತ್ತಾ ಅಲ್ಲಿ ಸೇರಿದ್ದ ಶಾಲಾ ಮಕ್ಕಳು ಹಾಗೂ ಪ್ರೇಕ್ಷಕರನ್ನು ರಂಜಿಸಿತು. 
ಬಿಷಪ್ ಡಾ. ಅಲೋಶಿಯಸ್ ಪಾವ್ಲ್ ಡಿಸೋಜಾ, ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕರಾದ ಮೋನಪ್ಪ ಭಂಡಾರಿ, ಜೆ.ಆರ್. ಲೋಬೋ, ಜಿ.ಪಂ. ಅಧ್ಯಕ್ಷ ಕೊರಗಪ್ಪ ನಾಯ್ಕ, ತಾಲೂಕು ಪಂಚಾಯತ್ ಅಧ್ಯಕ್ಷ ಹರೀಶ್ ಕುಮಾರ್, ಜಿ.ಪಂ. ಜಿಲ್ಲಾಧಿಕಾರಿ ಎನ್. ಪ್ರಕಾಶ್, ಅಪರ ಜಿಲ್ಲಾಧಿಕಾರಿ ದಯಾನಂದ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ತುಳಸಿ ಮದ್ದಿನೇನಿ, ಪಶ್ಚಿಮ ವಲಯ ಐಜಿಪಿ ಪ್ರತಾಪ್ ರೆಡ್ಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿಷೇಕ್ ಗೋಯಲ್, ಪೊಲೀಸ್ ಆಯುಕ್ತ ಮನೀಶ್ ಕರ್ಬೀಕರ್ ಮೊದಲಾದವರು ಉಪಸ್ಥಿತರಿದ್ದರು.