Friday, August 16, 2013

ಆರು ತಿಂಗಳೊಳಗೆ ಕಸವಿಭಜನೆ ಮನೆಗಳಿಂದ ಆರಂಭವಾಗಲಿ: ಭರತ್ ಲಾಲ್ ಮೀನ

ಮಂಗಳೂರು, ಆಗಸ್ಟ್.16:- ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ತ್ಯಾಜ್ಯ ವಿಲೇಯನ್ನು ಯಶಸ್ವಿಯಾಗಿಸಲು ಮುಂದಿನ ಆರು ತಿಂಗಳೊಳಗಾಗಿ ಪ್ರತಿಯೊಂದು ಮನೆಯಿಂದ ಕಸವಿಭಜಿಸಿ ಸಂಗ್ರಹ ಆರಂಭವಾಗಬೇಕೆಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾದ ಭರತ್ ಲಾಲ್ ಮೀನಾ ಅವರು ಸೂಚಿಸಿದರು.
ಆರು ತಿಂಗಳೊಳಗೆ ಶೇ 80 ಪ್ರಗತಿ ದಾಖಲಿಸಬೇಕೆಂದ ಉಸ್ತುವಾರಿ ಕಾರ್ಯದರ್ಶಿಗಳು, ಈ ಸಂಬಂಧ ಪ್ರತೀ ವಾರಕ್ಕೊಮ್ಮೆ ಪ್ರಗತಿಯನ್ನು ತಮಗೆ ಕಳುಹಿಸಿಕೊಡಬೇಕೆಂದು ಮಹಾನಗರಪಾಲಿಕೆ ಆಯುಕ್ತರಿಗೆ ಸೂಚಿಸಿದರು.
ಮೂಡಬಿದ್ರೆಯಲ್ಲಿ ಕಸವಿಭಜಿಸಿ ಸಂಗ್ರಹಿಸುವ ಕಾರ್ಯ ಯಶಸ್ವಿಯಾಗಿದ್ದು, ಈ ಯಶೋಗಾಥೆ ಉಳಿದವರಿಗೆ ಪ್ರೇರಪಣೆ ನೀಡುವಂತೆ ಇಂತಹ ಮಾದರಿಗಳ ಬಗ್ಗೆ ವ್ಯಾಪಕ ಪ್ರಚಾರ ನೀಡಬೇಕೆಂದು ಉಸ್ತುವಾರಿ ಕಾರ್ಯದರ್ಶಿ ಹಾಗೂ ಕೃಷಿ ಇಲಾಖೆ ಪ್ರಧಾನ ಕಾರ್ಯದರ್ಶಿಗಳಾದ ಮೀನಾ ಅವರು ಹೇಳಿದರು.
ಪಾಲಿಕೆ ವ್ಯಾಪ್ತಿಯಲ್ಲಿ ಉತ್ತಮ ರಸ್ತೆಗಳಾಗಿದ್ದು, ಒಳಚರಂಡಿ ಮತ್ತು ರಸ್ತೆ ಬದಿಗೆ ಇಂಟರ್ ಲಾಕ್ ಹಾಕುವ ಬಗ್ಗೆ, ಏರ್ಪೋರ್ಟವರೆಗಿನ ರಸ್ತೆಗೆ ಕಾಂಕ್ರೀಟ್ ಹಾಕುವ ಅನುದಾನ ಕುರಿತು ಉಸ್ತುವಾರಿ ಕಾರ್ಯದರ್ಶಿಗಳ ಗಮನಕ್ಕೆ ತರಲಾಯಿತು.
ಅನ್ನಭಾಗ್ಯ ಯೋಜನೆಯಡಿ ಅಕ್ಕಿ ವಿತರಣೆಗೆ ತೊಂದರೆ ಇಲ್ಲ ಎಂದು ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆ ಉಪನಿರ್ದೇಶಕರು ಸ್ಪಷ್ಟಪಡಿಸಿದರು. ಬಿಪಿಎಲ್ ಕಾರ್ಡ್ ದಾರರು ಅಕ್ಕಿ ಪಡೆದುಕೊಂಡು ಹೊರಗಡೆ ಮಾರಾಟವಾದ ಪ್ರಕರಣಗಳು ಬಂದರೆ ಅಂತಹವರ ಕಾರ್ಡ್ ಗಳನ್ನು ರದ್ದುಪಡಿಸುವುದಲ್ಲದೆ ಕಾನೂನಿನಡಿ ಕ್ರಮಕೈಗೊಳ್ಳಲು ಕಾರ್ಯದರ್ಶಿಗಳು ಸೂಚನೆ ನೀಡಿದರು.  ಹಾಸ್ಟೆಲ್ ಗಳಿಗೆ 381 ಟನ್ ಅಕ್ಕಿ ಪೂರೈಕೆ ಮಾಡಲಾಗಿದೆ ಎಂದು ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.
ಮುಂದಿನ ಎರಡು ವಾರಗಳೊಳಗಾಗಿ ಕಾರ್ಮಿಕ ಇಲಾಖೆ ಅಧಿಕಾರಿಗಳು ಮಹಾನಗರಪಾಲಿಕೆ ಆಯುಕ್ತರು ಮತ್ತು ಉಪವಿಭಾಗಾಧಿಕಾರಿಗಳ ನೆರವಿನೊಂದಿಗೆ ನಗರದ ಬಹುಮಹಡಿಗಳ ಕಾರ್ಮಿಕರಲ್ಲಿ ಗುರುತು ಪತ್ರ ಇರುವ ಕುರಿತು ಪರಿಶೀಲನೆ ಮತ್ತು ಇಲ್ಲದವರಿಗೆ ಗುರುತುಪತ್ರ ನೀಡುವ ಬಗ್ಗೆ ಆಂದೋಲನ ಮಾದರಿಯಲ್ಲಿ ಕ್ರಮಕೈಗೊಂಡು ಗುರುತುಪತ್ರ ಪೂರೈಸಬೇಕೆಂದು ಸೂಚನೆ ನೀಡಿದರು.
ನೆರೆಹಾವಳಿಯಡಿ ಜಿಲ್ಲೆಗೆ 1.60 ಕೋಟಿ ರೂ.ಅನುದಾನ ಬಿಡುಗಡೆಯಾಗಿದ್ದು ಅರ್ಹರಿಗೆ ಪರಿಹಾರ ತಕ್ಷಣವೇ ನೀಡಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಶ್ರೀ ಕೆ ಎ ದಯಾನಂದ ಅವರು ಮಾಹಿತಿ ನೀಡಿದರು. ಇದಲ್ಲದೆ ವಿಕೋಪ ಪರಿಹಾರವನ್ನು ಹೆಚ್ಚಿಸಲಾಗಿದ್ದು, ಪಕ್ಕಾ ಮನೆಗೆ 70,000 ರೂ. ಹಾಗೂ ಕೃಷಿ ಬೆಳೆ ಹಾನಿಗೆ ಹೆಕ್ಟೇರ್ ಗೆ 4,500 ರೂ.ಗಳನ್ನು ನೀಡುವ ಸಂಬಂಧ ಹೊಸ ಆದೇಶ ಬಂದಿದೆ ಎಂದು ವಿವರಿಸಿದರು.
ಸಾಮಾಜಿಕ ಭದ್ರತಾ ಯೋಜನೆಯಡಿ 72,110 ಫಲಾನುಭವಿಗಳಿದ್ದಾರೆ ಎಂದು ಅಪರ ಜಿಲ್ಲಾಧಿಕಾರಿಗಳು ನುಡಿದರು. ಜಿಲ್ಲೆಯಲ್ಲಿ ಶೇಕಡ 91 ಬಿತ್ತನೆಯಾಗಿದ್ದು, ರಸಗೊಬ್ಬರ ಪೂರೈಕೆಯಲ್ಲಿ ತೊಂದರೆ ಇಲ್ಲ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕರು ತಿಳಿಸಿದರು.  ಬೆಳೆ ಹಾನಿ ಬಗ್ಗೆ ಸವಿವರ ವರದಿ ಸಿದ್ಧಪಡಿಸಿ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಸೂಚನೆ ನೀಡಿದರು.
ಜಿಲ್ಲಾ ಪಂಚಾಯತ್ ವ್ಯಾಪ್ತಿಯಡಿ ಬರುವ ಯೋಜನೆಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಸಿಇಒ ಶ್ರೀಮತಿ ತುಳಸಿ ಮದ್ದಿನೇನಿ ಅವರು ಮಾಹಿತಿ ನೀಡಿ ವಸತಿ ಯೋಜನೆ ಅನುಷ್ಠಾನಕ್ಕೆ ಕ್ರಮಕೈಗೊಳ್ಳಲಾಗುವುದು ಎಂದರು. ಸುವರ್ಣ ಗ್ರಾಮಕ್ಕೆ ಸಂಬಂಧಿಸಿದಂತೆ ಯೋಜನೆ ರೂಪಿಸಲಾಗಿದೆ. ಪಿಎಂಜಿಎಸ್ವೈಯಡಿ 200 ಕಿ.ಮೀ ಒಟ್ಟು ಜಿಲ್ಲೆಗೆ ತಾಲೂಕಿಗೆ 40 ಕಿ.ಮೀ ಹಾಗೆ ರಸ್ತೆ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. ಮಹಾತ್ಮಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಕಾಯಿದೆಯಡಿ ರೈತರ ಅನುಕೂಲಕ್ಕೆ ವೈಯಕ್ತಿಕ ಮತ್ತು ಸಾಮೂಹಿಕ ಕಾಮಗಾರಿಗಳ ಸೇರ್ಪಡೆ ಬಗ್ಗೆ ಕಾರ್ಯದರ್ಶಿಗಳು ಸಲಹೆಗಳನ್ನು ನೀಡಿದರು.
ಕ್ಷೀರಭಾಗ್ಯ ಯೋಜನೆಯಡಿ ಹಾಲಿನಪುಡಿಗೆ 3,800 ಕೆ.ಜಿ.ಬೇಡಿಕೆ ಇಡಲಾಗಿದ್ದು, 2345 ಕೆ. ಜಿ  ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖಾಧಿಕಾರಿಗಳು ಹೇಳಿದರು ಸಭೆಯಲ್ಲಿ ಜಿಲ್ಲಾಧಿಕಾರಿ ಎನ್ ಪ್ರಕಾಶ್, ಉಪಸ್ಥಿತರಿದ್ದರು.