Saturday, July 6, 2013

ಸಂಸದರಿಂದ ಪ್ರಗತಿ ಪರಿಶೀಲನಾ ಸಭೆ

ಮಂಗಳೂರು, ಜುಲೈ.06:- ದಕ್ಷಿಣ ಕನ್ನಡ  ಜಿಲ್ಲೆಯಲ್ಲಿ ನೆರೆಹಾವಳಿಯಿಂದ ಸಂಭವಿಸಿದ ಸಾವು ನೋವು, ಆಸ್ತಿಪಾಸ್ತಿ ನಷ್ಟಕ್ಕೆ ಸಂಬಂಧಿಸಿ ತುರ್ತು ಪರಿಹಾರ ನೀಡಲು ಪ್ರಾಕೃತಿಕ ವಿಕೋಪ ಪರಿಹಾರದಡಿ ಐದು ಕೋಟಿ ರೂ.ಗಳನ್ನು ತಕ್ಷಣ ಒದಗಿಸುವಂತೆ ಕೋರಿ ರಾಜ್ಯ ಸರಕಾರಕ್ಕೆ ಪತ್ರ ಬರೆಯಲಾಗಿದೆ ಎಂದು ಜಿಲ್ಲಾಧಿಕಾರಿ  ಎನ್. ಪ್ರಕಾಶ್ ಹೇಳಿದ್ದಾರೆ.
ಅವರಿಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ನ ನೇತ್ರಾವತಿ ಸಭಾಂಗಣದಲ್ಲಿ ಇಂದು ಸಂಸದ ನಳಿನ್ ಕುಮಾರ್ ಕಟೀಲ್ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ನೆರೆ ಹಾವಳಿ ಕುರಿತು ಕೈಗೊಂಡ ಪರಿಹಾರ ಕ್ರಮಗಳ ಬಗ್ಗೆ ಜಿಲ್ಲಾಧಿಕಾರಿಗಳು ಈ ಮಾಹಿತಿ ನೀಡಿದರು.
ನೆರೆ ಬಂದ ಸಂದರ್ಭದಲ್ಲೇ ಅಣೆಕಟ್ಟುಗಳಿಂದ ನೀರು ಬಿಡಲಾಗಿರುವುದಲ್ಲದೆ ಹಲವೆಡೆಗಳಲ್ಲಿ ದೋಣಿ ಅಲಭ್ಯತೆ ಕುರಿತು ಜನರಿಂದ ಅಸಮಾಧಾನ ವ್ಯಕ್ತವಾಗಿರುವ ಬಗ್ಗೆ ಸಂಸದ  ನಳಿನ್ ಕುಮಾರ್ ಕಟೀಲ್ ಅವರು ಅಧಿಕಾರಿಗಳಲ್ಲಿ ನೆರೆ ಬಗ್ಗೆ ಮುಂಜಾಗ್ರತಾ ಕ್ರಮಗಳ ಬಗ್ಗೆ ವಿವರ ಕೋರಿದರು.
ಜಿಲ್ಲೆಯಲ್ಲಿ ನೆರೆ ಪರಿಸ್ಥಿತಿಯನ್ನು ಎದುರಿಸಲು ಅಧಿಕಾರಿಗಳು ಪರಸ್ಪರ ಸಮನ್ವಯತೆಯಿಂದ ಕಾರ್ಯ ನಿರ್ವಹಿಸಲು ಈಗಾಗಲೇ ಸೂಚನೆ ನೀಡಲಾಗಿದೆ. ನೆರೆಯ ಸಂದರ್ಭ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ತಲಾ 10 ಲಕ್ಷ ರೂ.ಗಳ ಎರಡು ಬೋಟುಗಳನ್ನು ತರಿಸಿ ಪೊಲೀಸ್ ಇಲಾಖೆಗೆ ನೀಡಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಇನ್ನೂ  ಅಗತ್ಯ ಕಂಡು ಬಂದರೆ ಮತ್ತೆ ಬೋಟುಗಳನ್ನು ತರಿಸಲು ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು.
ಆಯಾ ತಾಲೂಕು ಪಂಚಾಯತ್ಗಳ ಕಾರ್ಯ ನಿರ್ವಹಣಾಧಿಕಾರಿಗಳು ಮಳೆ ಹಾಗೂ ನೆರೆಯಿಂದ ಸಂಭವಿಸಿದ ಪ್ರಾಣಹಾನಿ, ಆಸ್ತಿ ಪಾಸ್ತಿ ನಷ್ಟಗಳ ಬಗ್ಗೆ ಸಭೆಯಲ್ಲಿ ಮಾಹಿತಿ ಒದಗಿಸಿದರು. ಆದರೆ ಅಂದಾಜು ನಷ್ಟದ ಬಗ್ಗೆ ನಿಖರವಾಗಿ ಕಂದಾಯ ಇಲಾಖೆಯಿಂದಷ್ಟೇ ಮಾಹಿತಿ ದೊರೆಯಬೇಕಿದ್ದು, ಇನ್ನಷ್ಟೇ ಮಾಹಿತಿಗಳನ್ನು ಕಲೆ ಹಾಕುತ್ತಿರುವುದಾಗಿ ಸಭೆಯಲ್ಲಿ ಅಧಿಕಾರಿಗಳು ತಿಳಿಸಿದರು.
ಜಿಲ್ಲೆಯಾದ್ಯಂತ ನೆರೆ ಹಾಗೂ ಮಳೆಯಿಂದಾಗಿ 332.2 ಕಿ.ಮೀ. ರಸ್ತೆಗಳು ಹಾನಿಗೊಳಗಾಗಿದ್ದು, ಅವುಗಳ ತಾತ್ಕಾಲಿಕ ದುರಸ್ತಿಗೆ 2 ಕೋಟಿ ರೂ.ಗಳ ಅಗತ್ಯವಿದೆ ಎಂದು ಜಿಲ್ಲಾ ಪಂಚಾಯತ್ ನ ಎಕ್ಸಿಕ್ಯೂಟಿವ್ ಇಂಜಿನಿಯರ್   ಸತ್ಯನಾರಾಯಣ ಸಭೆಯಲ್ಲಿ ತಿಳಿಸಿದರು.ನೆರೆಯಿಂದಾಗಿ ರಸ್ತೆಗಳು ಹಾಳಾಗಿ ಜಿಲ್ಲೆಯಲ್ಲಿ ಎಲ್ಲಿಯೂ ಜನಸಂಪರ್ಕಕ್ಕೆ ತೊಂದರೆಯಾಗುವ ಪರಿಸ್ಥಿತಿ ನಿರ್ಮಾಣವಾಗಿಲ್ಲ ಎಂದೂ ಅವರು ಹೇಳಿದರು.
ಮೈಸೂರು- ಬಂಟ್ವಾಳ ರಾಜ್ಯ ಹೆದ್ದಾರಿಯ ಸಂಪಾಜೆಯಿಂದ ಮಾಣಿವರೆಗಿನ ಕಾಮಗಾರಿ ಕಳಪೆಯಾಗಿದ್ದು, ಪ್ರಸ್ತುತ ಜನಸಂಚಾರಕ್ಕೆ ಅಯೋಗ್ಯವಾಗಿದೆ. ಈ ಬಗ್ಗೆ ಗುತ್ತಿಗೆದಾರರಿಂದಲೇ ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳುವಂತೆ ಸಂಸದರು ಅಧಿಕಾರಿಗಳಿಗೆ ಸೂಚಿಸಿದರು.
ಗಣಿಗಾರಿಕೆಯಿಂದ ಗ್ರಾಮೀಣ ಪ್ರದೇಶದ ಹೊಸ ರಸ್ತೆಗಳು ಹಾಳಾಗುತ್ತಿದ್ದರೆ, ಅಧಿಕಾರಿಗಳು ಅಂತಹ ಗಣಿಗಾರಿಕೆ ನಡೆಸುವವರ ಪರವಾನಿಗೆಯನ್ನು ರದ್ದುಪಡಿಸುವಂತೆ ಸಂಸದರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಬಡವರಿಗೆ ಸೂರು ಒದಗಿಸುವ ಸಕರ್ಾರದ ಮಹತ್ವಾಕಾಂಕ್ಷಿ ಯೋಜನೆಗಳಾದ ಆಶ್ರಯ,ಅಂಬೇಡ್ಕರ್, ಇಂದಿರಾ ಅವಾಸ್ ಹಾಗೂ ಬಸವ ವಸತಿ ಯೋಜನೆಗಳಲ್ಲಿ ಇಲ್ಲಿಯವರೆಗೆ 7227 ಮನೆಗಳನ್ನು ಪೂರ್ಣಗೊಳಿಸಿ ಬೆಳ್ತಂಗಡಿ ತಾಲೂಕು ಮುಂಚೂಣಿಯಲ್ಲಿದೆ ಎಂದು ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ ನರೇಂದ್ರ ಮಾಹಿತಿ ನೀಡಿದರು.
ಆಶ್ರಯ ಯೋಜನೆಯಲ್ಲಿ 2005-06ರಿಂದ 2008-09 ರ ಸಾಲಿನಲ್ಲಿ 647 ಮನೆಗಳನ್ನು  ರೂ.1312.73 ಲಕ್ಷ ವೆಚ್ಚದಲ್ಲಿ ಪೂರ್ಣಗೊಳಿಸಲಾಗಿದೆ. ಅಂಬೇಡ್ಕರ್ ವಸತಿ ಯೋಜನೆಯಡಿಯಲ್ಲಿ 2007-08 ನೇ ಸಾಲಿನಿಂದ 2011-12 ನೇ ಸಾಲಿನ ವರೆಗೆ ರೂ.39.20 ಲಕ್ಷ ವೆಚ್ಚದಲ್ಲಿ 118 ಮನೆಗಳನ್ನು ಪೂರ್ಣಗೊಳಿಸಲಾಗಿದೆ.
ಇಂದಿರಾ ಅವಾಸ್ ಯೋಜನೆಯಡಿ 2005-06ನೇ ಸಾಲಿನಿಂದ 2012-13 ನೇ ಸಾಲಿನ ತನಕ ಒಟ್ಟು 1571 ಮನೆಗಳನ್ನು ನಿರ್ಮಿಸಲಾಗುತ್ತಿದ್ದು ಇಲ್ಲಿಯ ವರೆಗೆ ಒಟ್ಟು 31.07 ಲಕ್ಷ ವೆಚ್ಚವಾಗಿದೆ.
ಬಸವ ವಸತಿ ಯೋಜನೆಯಡಿ 1159 ಮನೆಗಳು ಪೂರ್ಣವಾಗಿದ್ದು, 959.86 ಲಕ್ಷ ರೂ.ಗಳು ಬಿಡುಗಡೆಯಾಗಿ ವೆಚ್ಚವಾಗಿದೆ ಎಂಬ ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ ಡೆಂಗ್ಯು ಜ್ವರದಿಂದ 5 ಜನರು ಮೃತಪಟ್ಟಿದ್ದು, ಇಲಿಜ್ವರದಿಂದ ಒಬ್ಬರು ಮೃತಪಟ್ಟಿದ್ದಾರೆ. ಡೆಂಗ್ಯುವಿನಿಂದ ಬಳಲಿದವರು 153 ಜನರು. ಮಂಗಳೂರಿನಲ್ಲಿ 45, ಬಂಟ್ವಾಳದಲ್ಲಿ 47, ಪುತ್ತೂರಿನಲ್ಲಿ 23, ಬೆಳ್ತಂಗಡಿಯಲ್ಲಿ 25, ಸುಳ್ಯದಲ್ಲಿ 13 ಜನರು ಡೆಂಗ್ಯುವಿನಿಂದ ಬಳಲಿದ್ದಾರೆ. ಇವರಿಗೆ ಸೂಕ್ತ ಚಿಕಿತ್ಸೆ ನೀಡಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ ಓ ಆರ್ ಶ್ರೀರಂಗಪ್ಪ ಅವರು ತಿಳಿಸಿದರು.
ಮಲೇರಿಯಾ ಕಳೆದ ಸಾಲಿಗೆ ಹೋಲಿಸಿದರೆ ಪ್ರಸಕ್ತ ಸಾಲಿನಲ್ಲಿ ಕಡಿಮೆಯಾಗಿದ್ದು, ಈ ಸಾಲಿನಲ್ಲಿ 20435 ಜನರು ಜಿಲ್ಲೆಯಲ್ಲಿ ಮಲೇರಿಯಾ ಪೀಡಿತರಾಗಿದ್ದಾರೆ ಎಂದರು.
ನೆರೆ ಬಳಿಕ ಸಾಂಕ್ರಾಮಿಕ ರೋಗ ಹರಡದಂತೆ ತಡೆಯಲು ಮುನ್ನೆಚ್ಚರಿಕೆ ಕ್ರಮಕೈಗೊಳ್ಳಲಾಗಿದೆ. ಬಾವಿಗಳ ನೀರು ಪರೀಕ್ಷೆಗೂ ಸೂಚನೆ ನೀಡಲಾಗಿದೆ ಎಂದರು.  ವಾಜಪೇಯಿ ಆರೋಗ್ಯ ಶ್ರೀ ಬಗ್ಗೆ ಸದಸ್ಯರ ಕೋರಿಕೆಗೆ ಮಾಹಿತಿ ನೀಡಿದ ಅಧಿಕಾರಿಗಳು, ಒಂದು ಕುಟುಂಬದ ಐದು ಸದಸ್ಯರಿಗೆ ಒಂದರಿಂದ ಒಂದೂವರೆ ಲಕ್ಷ ರೂ.ಗಳ ಮೆಡಿಕಲ್ ಇನ್ಷೂರೆನ್ಸ್ ನೀಡಲಾಗುವುದು. ನಗರದ ನಾಲ್ಕು ಆಸ್ಪತ್ರೆಗಳಾದ ಫಾದರ್ ಮುಲ್ಲರ್ಸ್, ಎ.ಜೆ ಆಸ್ಪತ್ರೆ, ಯೆನಪೋಯ, ಕ್ಷೇಮದಲ್ಲಿ ಏಳು ಗಂಭೀರ ಕಾಯಿಲೆಗಳಿಗೆ ಈ ಯೋಜನೆಯಡಿ ಬಿಪಿಎಲ್ ಕಾಡ್ರ್  ಹೊಂದಿದವರಿಗೆ ಚಿಕಿತ್ಸೆ ನೀಡಲಾಗುವುದು. ಈ ಆಸ್ಪತ್ರೆಗಳಲ್ಲಿರುವ ಆರೋಗ್ಯ ಮಿತ್ರರು ರೋಗಿಗಳಿಗೆ ಚಿಕಿತ್ಸೆ ನೀಡುವರು. ಇದುವರೆಗ 60 ಜನರು ಯೋಜನೆಯ ಪ್ರಯೋಜನ ಪಡೆದುಕೊಂಡಿದ್ದಾರೆ ಹಾಗೂ 37,80,000 ರೂ. ವೆಚ್ಚ ಮಾಡಲಾಗಿದೆ.
ರಾಜೀವ್ ಗಾಂಧಿ ವಿದ್ಯುದ್ದೀಕರಣ ಯೋಜನೆಯಡಿ ಎಲ್ ಅಂಡ್ ಟಿ ಕಂಪೆನಿಯು 353 ಹಳ್ಳಿಗಳಿಗೆ ವಿದ್ಯುತ್ ನೀಡಲಿದ್ದು, ಪುತ್ತೂರು ಹೊರತುಪಡಿಸಿ ಕಾಮಗಾರಿಗಳನ್ನು ಆರಂಭಿಸಲಾಗಿದೆ. 18 ತಿಂಗಳು ಯೋಜನೆ ಸಂಪೂರ್ಣಗೊಳಿಸಲು ಸಮಯಮಿತಿ ನಿಗದಿಪಡಿಸಲಾಗಿದೆ ಎಂದು ಮೆಸ್ಕಾಂ ಅಧಿಕಾರಿಗಳು  ಮಾಹಿತಿ ನೀಡಿದರು. ಮೂಡಬಿದ್ರೆಯ ಎಂಟು ಹಳ್ಳಿಗಳಲ್ಲಿ ಯೋಜನೆ ಸಂಪೂರ್ಣಗೊಂಡಿದೆ. ಮಳೆಗಾಲದಲ್ಲಿ 2.200 ಲೈಟ್ ಕಂಬಗಳು ಉರುಳಿದೆ. ಆದರೆ ವಿದ್ಯುತ್ ಪ್ರಸರಣದಲ್ಲಿ ಲೋಪವಾಗದಂತೆ ಒಂದು ಉಪವಿಭಾಗಕ್ಕೆ 15 ಜನ ಗ್ಯಾಂಗ್ ಮನ್ ಗಳ ತಂಡದೊಂದಿಗೆ ಸಮಸ್ಯೆ ಇರುವೆಡೆ ಸ್ಪಂದಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದರು.
ತೋಟಗಾರಿಕಾ ಇಲಾಖಾ ಉಪನಿದರ್ೇಶಕರು ಮಾಹಿತಿ ನೀಡಿ, ಇಲಾಖೆಗೆ ಕಳೆದ ಸಾಲಿನಲ್ಲಿ ರಾಷ್ಟ್ರೀಯ ತೋಟಗಾರಿಕಾ ಮಿಷನ್ ಯೋಜನೆಯಡಿ 158.72 ಲಕ್ಷ ರೂ. ಒಟ್ಟು ಅನುದಾನ ಬಂದಿದು, 147.67 ಲಕ್ಷ ವ್ಯಯಿಸಿ ಶೇ. 93 ಪ್ರಗತಿ ದಾಖಲಿಸಿದೆ. ರೈತರಿಗೆ ಇಲಾಖೆ ನೇರವಾಗಿ ಔಷಧಿಗಳನ್ನು ನೀಡದೆ ಸಹಾಯಧನ ನೀಡುತ್ತಿದೆ ಎಂದರು.
ಸಂಸದರು ದಕ್ಷಿಣ ಕನ್ನಡ ಜಿಲ್ಲೆಯ ಗಡಿ ಪ್ರದೇಶದ ಬಳಿ ಎಂಡೋಸಲ್ಫಾನ್ ಬಾವಿಗೆ ಸುರಿದ ಸಂಬಂಧ ಕೇಳಿದಕ್ಕೆ ಉತ್ತರಿಸಿದ ಜಿಲ್ಲಾಧಿಕಾರಿಗಳು ಇದು ಕನರ್ಾಟಕದ ಗಡಿಪ್ರದೇಶದಿಂದ ಒಂದೂವರೆ ಕಿ.ಮೀ ದೂರವಿದ್ದು, ರಾಜ್ಯ ಮುಖ್ಯ ಕಾರ್ಯದರ್ಶಿಗಳಿಗೆ ಈ ಬಗ್ಗೆ ಪತ್ರಿಸಿದ್ದು, ಅವರು ಇನ್ಸಿಟ್ಯೂಟ್ ಆಫ್ ಆಕ್ಯುಪೇಷನಲ್ ಹೆಲ್ತ್ ನವರು ಪರಿಶೀಲಿಸಲಿರುವರು ಎಂದರು.
ಅಕ್ಷರ ದಾಸೋಹ ಯೋಜನೆಯಲ್ಲಿ ತೂಕ ವ್ಯತ್ಯಾಸ ತಡೆಯಲು ಎಲ್ಲ ಶಾಲೆಗಳಿಗೆ ತೂಕದ ಯಂತ್ರ ನೀಡಲು ಜಿಲ್ಲಾ ಪಂಚಾಯತ್ ನಲ್ಲಿ ನಿರ್ಧರಿಸಲಾಗಿದೆ ಸಿಇಒ ಡಾ ಕೆ ಎನ್ ವಿಜಯಪ್ರಕಾಶ್ ಅವರು ಹೇಳಿದರು.
ಶಿರಾಡಿ ಘಾಟಿಯಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಅನುಕೂಲವಾಗುವಂತೆ ನೆಲ್ಯಾಡಿ ಬಳಿ ಸಾರ್ವಜನಿಕ ಶೌಚಾಲಯ ಜುಲೈ ಅಂತ್ಯಕ್ಕೆ ಕಾಮಗಾರಿ ಪೂರ್ಣಗೊಳ್ಳಲಿದೆ. ಆದರೆ ಗುಂಡ್ಯ ಬಳಿ ಜಾಗದ ಲಭ್ಯತೆ ಇಲ್ಲ ಎಂದು ಅಧಿಕಾರಿಗಳು ಸಭೆಯಲ್ಲಿ ವಿಷಯ ಸೂಚಿಗೆ ಸಂಬಂಧಿಸಿ ಮಾಹಿತಿ ನೀಡಿದರು.
ಈ ಸಂದರ್ಭ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ಮಾನವೀಯತೆಯ ನೆಲೆಯಲ್ಲಿ ಅರಣ್ಯ ಅಧಿಕಾರಿಗಳು ಈ ಬಗ್ಗೆ ಆಲೋಚಿಸಿ ಕಾರ್ಯಪ್ರವೃತ್ತರಾಗಬೇಕು. ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿ ಸಮತಟ್ಟಾದ ಸ್ವಲ್ಪ ಜಾಗದಲ್ಲಿ ಸಾರ್ವಜನಿಕರಿಗೆ ಶೌಚಾಲಯ ನಿರ್ಮಾಣಕ್ಕೆ ಜಾಗ ಇದೆಯೇ ಎಂಬುದನ್ನು ಸಹಾಯಕ ಆಯುಕ್ತರ ಜೊತೆ ಸೇರಿ ಪರಿಶೀಲಿಸುವಂತೆ ಅವರು ಅರಣ್ಯ ಅಧಿಕಾರಿಗಳಿಗೆ ಸಲಹೆ ನೀಡಿದರು.
ಉದ್ಯೋಗ ಖಾತ್ರಿ ಯೋಜನೆಯಲ್ಲಿ ನಮ್ಮ ಜಿಲ್ಲೆ ಪ್ರಥಮವಾಗಲು ಏನು ಹೊಸ ಪ್ರಯೋಗಗಳನ್ನು ಕೈಗೊಳ್ಳಲಾಗಿದೆ ಎಂದು ಸಂಸದರು ಅಧಿಕಾರಿಗಳನ್ನು ಪ್ರಶ್ನಿಸಿದಾಗ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ಎನ್. ವಿಜಯಪ್ರಕಾಶ್ ಮಾತನಾಡಿ, ಉಳಿದ ಜಿಲ್ಲೆಗಳಿಗೆ ಹೋಲಿಸಿದರೆ ದ.ಕ. ಜಿಲ್ಲೆಯಲ್ಲಿ ಈ ಯೋಜನೆಯಡಿ ಶೇ. 93ರಷ್ಟು ಪ್ರಗತಿ ಮಾಡಲಾಗಿದೆ ಎಂದರು.
ಸಾಮೂಹಿಕ ಕೆಲಸ ಕಾರ್ಯಗಳ ಅವಕಾಶ ಜಿಲ್ಲೆಯಲ್ಲಿ ಕಡಿಮೆಯಾಗಿದ್ದು, ಈ ಬಾರಿ ತೋಟಗಳ ಬುಡ ಬಿಡಿಸುವ ಕೆಲಸಗಳಿಗೆ ಉದ್ಯೋಗ ಖಾತ್ರಿ ಯೋಜನೆಯನ್ನು ಉಪಯೋಗಿಸಲು ಅವಕಾಶ ಕೋರಲಾಗಿದೆ. ಮಾತ್ರವಲ್ಲದೆ, ಇಲ್ಲಿ 49,000ಕ್ಕೂ ಅಧಿಕ ಮಂದಿ ಜಾಬ್ ಕಾರ್ಡ್ ಹೊಂದಿರುವವರು ಇದ್ದರೂ ಕೆಲಸ ಪಡೆಯಲು ಬರುವವರು ಕೇವಲ 10,000 ಮಂದಿ ಮಾತ್ರ. ಹಾಗಾಗಿ ಈ ಬಾರಿ ಕೆಲಸ ಕೇಳದವರ ಜಾಬ್ ಕಾರ್ಡ್ ಅನರ್ಹಗೊಳಿಸುವ ಮೂಲಕ ಅರ್ಹರಿಗೆ ಕೆಲಸ ಸಿಗುವ ವ್ಯವಸ್ಥೆ ಮಾಡುವಂತಾಗಬೇಕು ಎಂದು ವಿಜಯ ಪ್ರಕಾಶ್ ಸಲಹೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್  ಅಧ್ಯಕ್ಷ ಕೊರಗಪ್ಪ ನಾಯ್ಕ, ಉಪಾಧ್ಯಕ್ಷ ರಿತೇಶ್ ಶೆಟ್ಟಿ ಉಪಸ್ಥಿತರಿದ್ದರು.