Thursday, July 11, 2013

ರಸಗೊಬ್ಬರ ಖರೀದಿ: ರೈತರಿಗೆ ಸೂಚನೆ

ಮಂಗಳೂರು, ಜುಲೈ.11:- ಜಿಲ್ಲೆಯ ರೈತರು ಕ್ರಿಪ್ಕೊ ಡಿಎಪಿ ರಸಗೊಬ್ಬರ ಚೀಲವನ್ನು ಖರೀದಿಸುವ ವೇಳೆ ತೂಕವನ್ನು ಎಚ್ಚರಿಕೆಯಿಂದ ಗಮನಿಸಬೇಕೆಂದು ಜಂಟಿ ಕೃಷಿ ನಿರ್ದೇಶಕರಾದ ಹೊನ್ನಪ್ಪ ಗೌಡ ಅವರು ರೈತರನ್ನು ವಿನಂತಿಸಿದ್ದಾರೆ.
ರಸಗೊಬ್ಬರ ಪ್ರಮಾಣಕ್ಕೆ ತಕ್ಕಂತೆ ರೈತರು ಬೆಲೆಯನ್ನು ಪಾವತಿಸಬೇಕೆಂದೂ ವಿನಂತಿಸಿರುವ ಅವರು, ಬೆಲೆ ಮತ್ತು ಪ್ರಮಾಣವನ್ನು ಖರೀದಿವೇಳೆ ಖಾತರಿಪಡಿಸಿಕೊಳ್ಳಿ ಎಂದು ಕೋರಿದ್ದಾರೆ. ರಸಗೊಬ್ಬರವನ್ನು ರೈತರು ಕೊಳ್ಳುವಾಗ ಗಮನಿಸಬೇಕಾದ ಅಂಶಗಳು ಇಂತಿವೆ. ರಸಗೊಬ್ಬರದ ಚೀಲದಲ್ಲಿ ಗೊಬ್ಬರದ ಹೆಸರು ಮುದ್ರಿತವಾಗಿದ್ದು,ತಯಾರಕರ ಹೆಸರು ಮತ್ತು ವಿಳಾಸ,ಬ್ರ್ಯಾಂಡ್ ಪೋಷಕಾಂಶಗಳ ವಿವರ,ಗರಿಷ್ಠ ಮಾರಾಟ ಬೆಲೆ,ತೂಕ,ರಸಗೊಬ್ಬರಗಳ ಮಿಶ್ರಣ,ಸಿಂಗಲ್ ಸೂಪರ್ ಫಾಸ್ಫೇಟ್,ಲಘು ಪೋಷಕಾಂಶಗಳು ಮತ್ತು ಮಿಶ್ರಣಗಳ ಚೀಲ/ಡಬ್ಬಗಳ ಮೇಲೆ ಬ್ಯಾಚ್ ಸಂಖ್ಯೆ, ರಿಜಿಸ್ಟ್ರೇಷನ್ ಸಂಖ್ಯೆ ಮುಂತಾದ ವಿವರಗಳನ್ನು  ನಮೂದಿಸಿರಬೇಕು ಮತ್ತು   ರಸಗೊಬ್ಬರದ ಚೀಲವನ್ನು ಹೊಲಿದಿದ್ದು ಸೀಸದ ಮೊಹರನ್ನು ಹಾಕಿರಬೇಕು. ಗೊಬ್ಬರದ ಚೀಲವನ್ನುತೂಕ ಮಾಡಿಸಿ ತೆಗೆದುಕೊಳ್ಳತಕ್ಕದ್ದು.  ರಸಗೊಬ್ಬರವನ್ನು ಕೊಂಡಿದ್ದಕ್ಕೆ ನಮೂನೆ ಎಂ ನಲ್ಲಿ ರಸೀತಿಯನ್ನು ಪಡೆಯಬೇಕು.   ರಸೀತಿಯಲ್ಲಿ ರೈತರ ಸಹಿ ಮತ್ತು ಮಾರಾಟಗಾರರ ಸಹಿ ಇರಬೇಕೆಂದು ಜಂಟಿ ಕೃಷಿ ನಿರ್ದೇಶಕರು ತಿಳಿಸಿರುತ್ತಾರೆ.