Wednesday, July 10, 2013

`ಅನ್ನ ಭಾಗ್ಯ' ಯೋಜನೆಗೆ ಚಾಲನೆ;ಯೋಜನೆ ದುರುಪಯೋಗವಾಗದಂತೆ ಎಚ್ಚರವಿರಲಿ: ಜಿಲ್ಲಾ ಉಸ್ತುವಾರಿ ಸಚಿವರು

ಮಂಗಳೂರು,ಜುಲೈ.10: ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಬಿಪಿಎಲ್ ಪಡಿತರ ಚೀಟಿ ಹೊಂದಿರುವವರಿಗೆ ಒಂದು ರೂಪಾಯಿಗೆ ಕೆಜಿ ಅಕ್ಕಿ ನೀಡುವ ಮಹತ್ತರ ಯೋಜನೆಯನ್ನು ರಾಜ್ಯ ಸರಕಾರ ಇಂದು ಅನುಷ್ಠಾನಗೊಳಿಸಿದೆ. ರಾಜ್ಯ ಸರ್ಕಾರ ಈ ಮೂಲಕ ತನ್ನ ಮಾತು ಪಾಲಿಸಿದೆ. ಬಡವರ್ಗದವರಿಗೆ ಈ ಯೋಜನೆ ತಲುಪಬೇಕು. ಯೋಜನೆ ದುರುಪಯೋಗವಾಗದಂತೆ ಎಚ್ಚರವಹಿಸಬೇಕಾದ್ದು ಅವಶ್ಯ ಎಂದು ರಾಜ್ಯ  ಅರಣ್ಯ ಮತ್ತು ಪರಿಸರ ಸಚಿವರು ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ. ರಮಾನಾಥ ರೈ ಹೇಳಿದರು.
                ಅವರು ಇಂದು ನಗರದ ಪುರಭವನದಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತದ ವತಿಯಿಂದ ಏರ್ಪಡಿಸಿದ್ದ `ಅನ್ನಭಾಗ್ಯ' ಒಂದು ರೂಪಾಯಿಗೆ ಕಿಲೋ ಅಕ್ಕಿ ಯೋಜನೆಗೆ ಚಾಲನೆ ನೀಡಿ ಮಾತನಾಡಿದರು.ಕೇಂದ್ರ ಸರಕಾರ ಆಹಾರ ಭದ್ರತಾ ಕಾಯ್ದೆಯಡಿ ಬಿಪಿಎಲ್ ಪಡಿತರದಾರರಿಗೆ ರೂ.3 ರೂಪಾಯಿಯಲ್ಲಿ ಅಕ್ಕಿ ವಿತರಿಸುತ್ತಿದ್ದರೆ, ರಾಜ್ಯ ಸರಕಾರ ಒಂದು ರೂ.ಗೆ ಕಿಲೋ ಅಕ್ಕಿ ವಿತರಿಸುತ್ತಿದೆ. ರಾಜ್ಯ ಸರಕಾರದ ಮೇಲೆ ಆರ್ಥಿಕ ಹೊರೆ ಬಿದ್ದರೂ ಬಡವರು ಆಹಾರವಿಲ್ಲದೆ ಸಂಕಷ್ಟ ಎದುರಿಸುವಂತಾಗಬಾರದು ಎಂದು ಈ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಅಕ್ಕಿ ವಿತರಣೆಯಲ್ಲಿ ಎಲ್ಲೂ ಕೂಡ ಲೋಪವಾಗದಂತೆ ನಾಗರಿಕರು ಎಚ್ಚರವಹಿಸಬೇಕಾಗುತ್ತದೆ ಎಂದರು.
ಶಿಕ್ಷಣದಿಂದ ಮಾತ್ರ ಶೋಷಣೆ ಮುಕ್ತ ಸಮಾಜ ನಿರ್ಮಾಣ ಸಾಧ್ಯ. ಈ ನಿಟ್ಟಿನಲ್ಲಿ ಗಮನಹರಿಸಿರುವ ಸರಕಾರ ಶಿಕ್ಷಣಕ್ಕೆ ವಿಶೇಷ ಆದ್ಯತೆ ನೀಡಿದೆ. ಮಹಿಳಾ ಸಬಲೀಕರಣಕ್ಕೆ ಒತ್ತು ನೀಡಲಾಗಿದೆ ಎಂದು ರಮಾನಾಥ ರೈ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಜೆ.ಆರ್.ಲೋಬೋ ಮಾತನಾಡಿ, ಅರ್ಹ ಫಲಾನುಭವಿ ಗಳಿಗೆ ಕ್ಲಪ್ತ ಸಮಯದಲ್ಲಿ `ಅನ್ನ ಭಾಗ್ಯ' ಯೋಜನೆಯ ಪ್ರಯೋಜನ ದೊರೆಯುವಂತಾಗಬೇಕು ಎಂದರು.ಮುಖ್ಯ ಅತಿಥಿಯಾಗಿದ್ದ ಶಾಸಕ ಬಿ.ಎ.ಮೊಯ್ದೀನ್ ಬಾವಾ ಸಮಾರಂಭವನ್ನುದ್ದೇಶಿಸಿ ಮಾತನಾಡಿದರು.
ಇದೇ ಸಂದರ್ಭ 10 ಮಂದಿ ಫಲಾನುಭವಿಗಳಿಗೆ ಸಾಂಕೇತಿಕವಾಗಿ ಅಕ್ಕಿಯನ್ನು ವಿತರಿಸಲಾಯಿತು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 1.79 ಲಕ್ಷ ಮಂದಿ ಅನ್ನ ಭಾಗ್ಯ ಯೋಜನೆಯ ಪ್ರಯೋಜನ ಪಡೆಯಲಿದ್ದಾರೆ.
ಜಿಲ್ಲಾಧಿಕಾರಿ ಎನ್.ಪ್ರಕಾಶ್, ಜಿ.ಪಂ.ಮುಖ್ಯಕಾರ್ಯನಿರ್ವಹಣಾಧಿಕಾರಿ ಡಾ.ಕೆ.ಎನ್.ವಿಜಯಪ್ರಕಾಶ್ ಕಾರ್ಯಕ್ರಮದಲ್ಲಿ  ಉಪಸ್ಥಿತರಿದ್ದರು.ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಉಪನಿರ್ದೇಶಕ ಶರಣಬಸಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ತಾಲೂಕು ವ್ಯವಸ್ಥಾಪಕ ಎಂ.ವಿ.ರಾಜನ್ ವಂದಿಸಿದರು.