Thursday, July 4, 2013

ಜಲಾವೃತ್ತ ಪ್ರದೇಶಗಳಿಗೆ ಅಪರ ಜಿಲ್ಲಾಧಿಕಾರಿ ಭೇಟಿ

ಮಂಗಳೂರು, ಜುಲೈ.0 4:ದಕ್ಷಿಣಕನ್ನಡ ಜಿಲ್ಲೆಯಾದ್ಯಂತ ಕಳೆದ ಎರಡು ಮೂರು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ದಕ್ಷಿಣ ಕನ್ನಡ ಜಿಲ್ಲೆಯ ಹಲವು ಪ್ರದೇಶಗಳಲ್ಲಿ ನೀರು ಪ್ರವಾಹೋಪಾದಿಯಲ್ಲಿ ಉಕ್ಕಿ ಹರಿದ ಪರಿಣಾಮವಾಗಿ ಅನೇಕ ಮನೆಗಳು ಜಲಾವೃತ್ತಗೊಂಡಿದೆ. ಮೂವರು ನೀರು ಪಾಲಾಗಿದ್ದಾರೆ. ಹಾಗೂ ಜಲಾವೃತ್ತಗೊಂಡಿರುವ ನಿವಾಸಿಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವ ಕಾರ್ಯವನ್ನು ಆಯಾ ತಾಲೂಕಿನ ತಹಶೀಲ್ದಾರರೊಂದಿಗೆ ಅಪರ ಜಿಲ್ಲಾಧಿಕಾರಿ ದಯಾನಂದ ಅವರು ನಿನ್ನೆ ರಾತ್ರಿಯಿಂದ  ಕೈಗೊಂಡಿದ್ದಾರೆ.
ದಿನಾಂಕ 3-7-13 ರ ಮಧ್ಯರಾತ್ರಿ 12.00 ಗಂಟೆಯಲ್ಲಿ ಶಿರಾಡಿ ಘಾಟ್ ಗುಂಡ್ಯ ರಸ್ತೆಗೆ ಮರವೊಂದು ಉರುಳಿ ಬಿದ್ದ ಪರಿಣಾಮವಾಗಿ ರಸ್ತೆ ಬಂದ್ ಆಗಿ ಸಂಚಾರ ಅಸ್ತವ್ಯಸ್ತವಾಗಿತ್ತು. ಈ ಹೊತ್ತಿನಲ್ಲಿ ಬೆಳ್ತಂಗಡಿ ತಾಲೂಕಿನ ತಹಶೀಲ್ದಾರರು ಕೂಡಲೇ ಸ್ಥಳಕ್ಕೆ ತೆರಳಿ ಪರಿಹಾರ ಕಾರ್ಯವನ್ನು ಕೈಗೊಂಡು ಕೂಡಲೇ ಮರವನ್ನು ಅಲ್ಲಿಂದ ತೆರವುಗೊಳಿಸಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಗೊಳಿಸಿದರು.
ಬಂಟ್ವಾಳ ತಾಲೂಕಿನಲ್ಲಿ ಮಳೆಯಿಂದಾಗಿ ನೆಲಮಳಿಗೆಗಳಲ್ಲಿರುವ ನಿವಾಸಿಗಳು ಪ್ರವಾಹದ ಪರಿಣಾಮವಾಗಿ ಜಲಾವೃತ್ತವಾಗಿ ಮುಳುಗಡೆಯಾಗುತ್ತಿದ್ದವರನ್ನು ಬೋಟ್ಗಳ ಸಹಾಯದಿಂದ ಸ್ಥಳೀಯ ಅಧಿಕಾರಿಗಳ ನೆರವಿನಿಂದ ರಕ್ಷಿಸಿ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿ ಗಂಜಿ ಕೇಂದ್ರಗಳನ್ನು ತೆರೆಯಲಾಗಿದೆ, ತಹಶೀಲ್ದಾರ್ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿ ಯಾವುದೇ ಅನಾಹುತ ಸಂಭವಿಸದಂತೆ ಕಟ್ಟೆಚ್ಚರ ವಹಿಸಲು ಅಪರ ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
 ಉಪ್ಪಿನಂಗಡಿ ಬಳಿ ನದಿ ಅಪಾಯದ ಮಟ್ಟ ಮೀರಿರರುವುದರಿಂದ ವಾಹನಗಳ ಸುಗಮ ಸಂಚಾರಕ್ಕೂ ಹಾಗೂ ಸ್ಥಳಿಯ ನಿವಾಸಿಗಳು ತೊಂದರೆಯಾಗುತ್ತಿದ್ದುದನ್ನು ಮನಗಂಡು ಅವರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿ ವಾಹನಗಳ ಓಡಾಟದ ಮಾರ್ಗವನ್ನು ಬದಲಾಯಿಸಲಾಯಿತು. ಸರಕಾರಿ ಕಾಲೇಜಿನಲ್ಲಿ ಗಂಜಿ ಕೇಂದ್ರ ತೆರೆಯಲಾಗಿತ್ತು. ಜಲಾವೃತ್ತ ಮನೆಗಳವರಿಗೂ ಹಾಗೂ ಅಗತ್ಯ ಇರುವವರಿಗೆ ನೆರವು ಕಲ್ಪಿಸಲಾಯಿತು.
 ಬೆಳ್ತಂಗಡಿ ತಾಲೂಕಿನ ವೇಣೂರು ರಸ್ತೆ ಕಡಿತಗೊಂಡಿದ್ದು ಇದನ್ನು ಸರಿಪಡಿಸಲಾಯಿತು. ಇದೇ ತಾಲೂಕಿನಲ್ಲಿ  ಒಬ್ಬ ವ್ಯಕ್ತಿ ಹಳ್ಳ ದಾಟುವಾಗ ಆಕಸ್ಮಿಕವಾಗಿ ಕಾಲುಜಾರಿ ಸಾವನ್ನಪ್ಪಿದ್ದು, ಆತನ ಕುಟುಂಬಕ್ಕೆ ತಹಶೀಲ್ದಾರರ ಮೂಲಕ ಪರಿಹಾರ ಒದಗಿಸುವ ಕಾರ್ಯವನ್ನು ಕೈಗೊಳ್ಳಲಾಗಿದೆ.
ಬಂಟ್ವಾಳ ತಾಲೂಕಿನ ಅಮ್ಮುಂಜೆ ಬಳಿ ನೀರುಪಾಲಾದವರನ್ನು  ಪತ್ತೆ ಹಚ್ಚಲು ಕರಾವಳಿ ರಕ್ಷಣಾ ಪಡೆಯವರ ನೆರವು ಪಡೆಯಲಾಗಿದೆ. ಮಂಗಳೂರು ತಾಲೂಕಿನ ಅಡ್ಯಾರಿನಲ್ಲಿ 25 ಮನೆಗಳು,ಹಾಗೂ ಕಂದಾವರದಲ್ಲಿ ಎರಡು ಮನೆಗಳು ಸೇರಿದಂತೆ ಇತರೆಡೆಗಳಲ್ಲಿ ಹಲವಾರು ಮನೆಗಳು ಹಾನಿಗೀಡಾಗಿವೆಯೆಂದು ಅಪರ ಜಿಲ್ಲಾಧಿಕಾರಿಗಳು ತಿಳಿಸಿದರು.
ತುತರ್ು ರಕ್ಷಣಾ ಕಾರ್ಯ ಕೈಗೊಳ್ಳಲು ಕಂದಾಯ ಇಲಾಖೆಯ ಎರಡು, ಅಗ್ನಿ ಶಾಮಕ ಇಲಾಖೆಯ ಒಂದು ,ಗೃಹರಕ್ಷಕ ದಳದ 2 ಬೋಟುಗಳು ಸೇರಿದಂತೆ ಖಾಸಗಿಯವರಿಂದ ಹಲವು ಬೋಟುಗಳನ್ನು ಪಡೆಯಲಾಗಿದೆಯೆಂದು ಅವರು ತಿಳಿಸಿರುತ್ತಾರೆ.
ಜಿಲ್ಲಾಡಳಿತ ಜಿಲ್ಲೆಯಾದ್ಯಂತ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದ್ದು ಯಾವುದೇ ಅವಘಡಗಳು ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸಲು ಮಾನಿಟರಿಂಗ್ ಸಮಿತಿಗಳನ್ನು ರಚಿಸಿದ್ದು ಜನರು ಆತಂಕಕ್ಕೆ ಒಳಗಾಗಬಾರದೆಂದು ಹಾಗೂ ತುರ್ತು ಸಂದರ್ಭದಲ್ಲಿ ನೆರವಿಗಾಗಿ 1077 ದೂರವಾಣಿ ಸಂಖ್ಯೆಗೆ ಕರೆಮಾಡಲು ಅಪರ ಜಿಲ್ಲಾಧಿಕಾರಿಗಳು ವಿನಂತಿಸಿದ್ದಾರೆ.