Saturday, July 6, 2013

ಅಟೋರಿಕ್ಷಾ ಚಾಲಕರ ಸಮಸ್ಯೆ ಪರಿಹಾರಕ್ಕೆ 10 ದಿನಗಳಲ್ಲಿ ವಿಶೇಷ ಸಭೆ-ಯು.ಟಿ.ಖಾದರ್

ಮಂಗಳೂರು, ಜುಲೈ.06:- ದಕ್ಷಿಣಕನ್ನಡ ಜಿಲ್ಲಾ ಅಟೋರಿಕ್ಷಾ ಚಾಲಕರ ಸಮಸ್ಯೆಗಳ ಪರಿಹಾರಕ್ಕೆ 10 ದಿನಗಳಲ್ಲಿ ವಿಶೇಷ ಆರ್. ಟಿ.ಎ.ಸಭೆ ಕರೆದು ಪರಿಹಾರ ಮಾಡಲಾಗುವುದೆಂದು ಆರೋಗ್ಯ ಖಾತೆ ಸಚಿವರಾದ  ಯು.ಟಿ.ಖಾದರ್ ಅವರು ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯಲ್ಲಿ ಇಂದು ನಡೆದ ಸಭೆಯಲ್ಲಿ ತಿಳಿಸಿದರು.
ಗ್ರಾಮಾಂತರ ಪ್ರದೇಶಗಳ ಪರವಾನಿಗೆ ಹೊಂದಿರುವ ಅಟೋರಿಕ್ಷಾಗಳು ನಗರ ಪ್ರದೇಶಕ್ಕೆ  ಬಂದು ಬಾಡಿಗೆ ಮಾಡುತ್ತಿರುವುದರಿಂದ ನಗರ ಪರವಾನಿಗೆ ಹೊಂದಿರುವ ರಿಕ್ಷಾದವರಿಗೆ ತೊಂದರೆಯಾಗುತ್ತಿದೆ ಎಂದು ರಿಕ್ಷಾ ಚಾಲಕರು ತಮ್ಮ ಅಳಲನ್ನು ಸಚಿವರಲ್ಲಿ ತೋಡಿಕೊಂಡಾಗ,ಇನ್ನು ಮುಂದೆ ಗ್ರಾಮಾಂತರ ಪ್ರದೇಶದ ರಿಕ್ಷಾಗಳು ನಗರಕ್ಕೆ ಬಂದು ಕೂಡಲೇ ಹಿಂತಿರುಗಬೇಕು. ತಪ್ಪಿದಲ್ಲಿ ಅಂತಹ ಅಟೋಗಳ ವಿರುದ್ಧ ಯಾವ ಕ್ರಮ ಕೈಗೊಳ್ಳಬಹುದು ಎಂಬ ಕುರಿತು ಸಾರಿಗೆ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳಲಿದ್ದಾರೆ ಎಂದು ಸಚಿವರು ತಿಳಿಸಿದರು.
ಸಭೆಯಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿ ಮಲ್ಲಿಕಾರ್ಜುನ, ಎಸಿಪಿ ಸುಬ್ರಹ್ಮಣ್ಯ ರಾವ್, ದಕ್ಷಿಣಕನ್ನಡ ಜಿಲ್ಲಾ ಅಟೋರಿಕ್ಷಾ ಸಂಘದ ಅಧ್ಯಕ್ಷ ವಿಷ್ಣುಮೂರ್ತಿಯವರು ಹಾಜರಿದ್ದರು.