Sunday, July 14, 2013

ಸಿಂಥೆಟಿಕ್ ಟ್ರ್ಯಾಕ್ ವೀಕ್ಷಿಸಿದ ಪಿ ಟಿ ಉಷಾ

ಮಂಗಳೂರು,ಜೂನ್ 14: ಉತ್ತಮ ಕ್ರೀಡಾಪಟುಗಳನ್ನು ರೂಪಿಸಲು ಸರ್ಕಾರದ ಮೂಲಭೂತ ಸೌಕರ್ಯಗಳ ಜೊತೆಗೆ ಅರಳು ಕ್ರೀಡಾ ಪ್ರತಿಭೆಗಳಲ್ಲಿ ಸಾಧಿಸುವ ಛಲವಿರಬೇಕೆಂದು ಪಯ್ಯೋಳಿ ಎಕ್ಸ್ ಪ್ರೆಸ್ ಖ್ಯಾತಿಯ  ಪಿ ಟಿ ಉಷಾ ಹೇಳಿದರು.
      ಅವರಿಂದು ನಗರದ ಮಂಗಳಾ ಸ್ಟೇಡಿಯಂ ಗೆ ಸಿಂಥೆಟಿಕ್ ಟ್ರ್ಯಾಕ್ ವೀಕ್ಷಿಸಲು ಆಗಮಿಸಿದ ಬಳಿಕ ಮಾತನಾಡುತ್ತಿದ್ದರು. ತಾವು ತರಬೇತಿ ನೀಡುತ್ತಿರುವ ಕ್ರೀಡಾಪಟುಗಳನ್ನು ಮೈಸೂರಿನ ಇನ್ ಫೋಸಿಸ್ ಸಂಸ್ಥೆಯ ಸಿಂಥೆಟಿಕ್ ಕ್ರೀಡಾಂಗಣಕ್ಕೆ ತರಬೇತಿಗೊಯ್ಯುತ್ತಿದ್ದು, ಭವಿಷ್ಯದಲ್ಲಿ ನಗರದ ಸ್ಟೇಡಿಯಂಗೆ ತಮ್ಮ ತರಬೇತುದಾರರೊಂದಿಗೆ ಆಗಮಿಸಲು ಅವಕಾಶವಿದೆ ಎಂದರು. ಎಲ್ಲ ಜಿಲ್ಲೆಗಳಲ್ಲೊಂದು ಸಿಂಥೆಟಿಕ್ ಕ್ರೀಡಾಂಗಣದ ಅಗತ್ಯವಿದೆ ಎಂದ ಅವರು, ಕ್ರೀಡಾ ಸೌಕರ್ಯಗಳ ಸದುಪಯೋಗದಿಂದ ಉತ್ತಮ ಕ್ರೀಡಾಪಟುಗಳು ದೇಶಕ್ಕೆ ಲಭ್ಯವಾಗಲಿದೆ ಎಂದರು.
ಭಾರತೀಯ ಅಥ್ಲೀಟ್ ಗಳ ಸಾಧನೆ ಇನ್ನಷ್ಟು ಹೆಚ್ಚಬೇಕಿದೆ ಎಂದು ಹೇಳಿದ ಅವರು, ಮಂಗಳಾ ಕ್ರೀಡಾಂಗಣ ಉತ್ತಮವಾಗಿ ಮೂಡಿಬಂದಿದೆ ಎಂದರು. ಅಶ್ವಿನಿ ಅಕ್ಕುಂಜಿಯ ಬಗ್ಗೆ ಪ್ರತಿಕ್ರಿಯಿಸುತ್ತಾ, ಸಣ್ಣ ಸಣ್ಣ ತಪ್ಪುಗಳಿಂದ ಕಲಿತು ಸಾಧಿಸಬೇಕು; ಸಣ್ಣ ತಪ್ಪುಗಳಿಂದ ನಿರಾಶೆ ನಿರುತ್ಸಾಹ ಸಲ್ಲದು ಎಂದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ  ಎನ್ ಪ್ರಕಾಶ್, ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಯ ಪಾಶ್ರ್ವನಾಥ್ ಉಪಸ್ಥಿತರಿದ್ದರು. ಸಿಂಥೆಟಿಕ್ ಟ್ರ್ಯಾಕ್ ಉತ್ತಮವಾಗಿ ಮೂಡಿಬಂದಿದ್ದು, ಜಿಲ್ಲಾಡಳಿತ ಇನ್ನುಳಿದಿರುವ ಕೆಲಸಗಳನ್ನು ಇತರೆ ವೆಚ್ಚಗಳಡಿ ಸಂಪೂರ್ಣಗೊಳಿಸಲಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು.