Thursday, July 11, 2013

ಬಹುಗ್ರಾಮ ಕುಡಿಯುವ ನೀರು ಯೋಜನೆಗೆ ಕಾಲಮಿತಿ ನಿಗದಿಪಡಿಸಿ: ಜಿಲ್ಲಾ ಉಸ್ತುವಾರಿ ಸಚಿವರು

ಮಂಗಳೂರು, ಜುಲೈ.11:- ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆಗಾಲ ಸಮೃದ್ಧವಾಗಿದ್ದರೂ, ಬೇಸಿಗೆಯಲ್ಲಿ ಜಿಲ್ಲೆಯ ಕೆಲವು ತಾಲೂಕುಗಳಲ್ಲಿ ಕುಡಿಯುವ ನೀರಿಗೆ ತೀವ್ರ ಬರವನ್ನು ಎದುರಿಸುವ ಪರಿಸ್ಥಿತಿಯಿದೆ. ಹಾಗಾಗಿ ಜಿಲ್ಲೆಗೆ ಈಗಾಗಲೇ ಮಂಜೂರು ಮಾಡಿರುವ ಬಹುಗ್ರಾಮ ಕುಡಿಯವ ನೀರು ಯೋಜನೆಗಳನ್ನು ಕಾಲಮಿತಿಯೊಳಗೆ ಅನುಷ್ಠಾನಕ್ಕೆ ತನ್ನಿ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ರಮಾನಾಥ ರೈ ಸೂಚಿಸಿದರು.
ಇಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ನ ನೇತ್ರಾವತಿ ಸಭಾಂಗಣದಲ್ಲಿ ಆಯೋಜಿಸಲಾದ ಕೆಡಿಪಿ ತ್ರೈಮಾಸಿಕ ಸಭೆಯಲ್ಲಿ ಅವರು ಅಧಿಕಾರಿಗಳಿಗೆ ಈ ಸೂಚನೆ ನೀಡಿದರು. ಜಿಲ್ಲೆಗೆ ಬಂದ 14 ಹೊಸ ಯೋಜನೆಗಳಲ್ಲಿ ಹತ್ತು ಯೋಜನೆಗಳಿಗೆ ಡಿ ಎಸ್ ಆರ್ ತಯಾರಾಗಿದ್ದು, ಎಲ್ಲ ಯೋಜನೆಗಳನ್ನು ಮುಗಿಸಿ ಮುಖ್ಯ ಇಂಜಿನಿಯರ್ ಗೆ ಸಲ್ಲಿಸಲಾಗುವುದು ಎಂದು ಅಧಿಕಾರಿಗಳು ನೀಡಿದ ಮಾಹಿತಿಯನ್ನು ಒಪ್ಪದ ಜಿಲ್ಲಾ ಉಸ್ತುವಾರಿ ಸಚಿವರು, ಯೋಜನೆ ಅನುಷ್ಠಾನ ಹಾಗೂ ಫಲಿತಾಂಶದ ಬಗ್ಗೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದರಲ್ಲದೆ ಕಾಲಮಿತಿಯೊಳಗೆ ಯೋಜನೆಗಳು ಅನುಷ್ಠಾನಗೊಂಡು ಜನರಿಗೆ ಉಪಯೋಗ ಲಭಿಸಬೇಕೆಂದರು.
ಜಿಲ್ಲೆಯಲ್ಲಿ ಇಂತಹ ಯೋಜನೆಗೆ ವಿಫುಲ ಅವಕಾಶವಿದ್ದು, ಇವುಗಳ ಸದ್ಬಳಕೆಯಾಗಬೇಕು. ಹಾಗಾಗಿ ಪರಿಸರ ಪರ ಸುಸ್ಥಿರ ಕುಡಿಯುವ ನೀರು ಯೋಜನೆಯನ್ನು ಹೆಚ್ಚಿನ ಮುತುವರ್ಜಿ ವಹಿಸಿ ಅನುಷ್ಠಾನಕ್ಕೆ ತನ್ನಿ ಎಂದರು.
ಮೂಡಬಿದ್ರೆ ಕ್ರೀಡಾಂಗಣ ನೂರು ಲಕ್ಷ ರೂ. ಅಂದಾಜು ವೆಚ್ಚದಲ್ಲಿ ಹೊಸ ಯೋಜನೆ ರೂಪಿಸಲಾಗಿದ್ದು, ಕಾಮಗಾರಿ ಆರಂಭಿಸಲಾಗಿದೆ ಎಂದು ಲೋಕೋಪಯೋಗಿ ಇಲಾಖೆ ಅಧಿಕಾರಿ  ಹೇಳಿದರು. ಎಡಿಬಿ ಯೋಜನೆಯಡಿ ಉಳ್ಳಾಲ, ಉಡುಪಿ ಸಮುದ್ರ ತೀರದ ಜೊತೆಗೆ ಮೂಡಬಿದ್ರೆಯ ಸಸಿಹಿತ್ಲು, ಸುರತ್ಕಲ್ ಮುಕ್ಕ ಪ್ರದೇಶಗಳನ್ನು ಸೇರಿಸಿ ಎಂದು ಯೋಜನಾ ನಿರ್ದೇಶಕರಿಗೆ ಸಚಿವರು ಸೂಚಿಸಿದರು.
ವಸತಿಯೋಜನೆಯಲ್ಲಿ ನಿರೀಕ್ಷಿತ ಗುರಿ ಸಾಧಿಸುವಲ್ಲಿ ವಿಫಲರಾದರೆ ಸಂಬಂದಪಟ್ಟ ಕಾರ್ಯ ನಿರ್ವಹಣಾಧಿಕಾರಿಗಳ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವುದಾಗಿಯೂ ಸಚಿವರು ಹೇಳಿದರು.
ಬಡ ಗರ್ಭಿಣಿಯರು ಹಾಗೂ ಬಾಣಂತಿಯರಿಗೆ ಪೌಷ್ಟಿಕತೆಯಿಂದ ಪಾರಾಗಲು  ಸರ್ಕಾರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ಕೊಡಮಾಡುತ್ತಿರುವ ಪೌಷ್ಠಿಕಾಹಾರ ವಿತರಣೆ 2013-14ನೇ ಸಾಲಿನಲ್ಲಿ 25015 ಜನರಿಗೆ ವಿತರಿಸುವ ಗುರಿಯನ್ನು ಹಮ್ಮಿಕೊಂಡು 2013 ರ ಜೂನ್ ಅಂತ್ಯಕ್ಕೆ ಶೇಕಡಾ 100 ರಷ್ಟು ಸಾಧನೆ ಮಾಡಲಾಗಿದೆ ಎಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದ್ದ ಅರಣ್ಯ ಹಾಗೂ ದಕ್ಷಿಣಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ರಮಾನಾಥ ರೈ ಅವರಿಗೆ ಈ ಮಾಹಿತಿಯನ್ನು ನೀಡಲಾಯಿತು.
0-3 ವಯೋಮಾನದ 54901 ಮಕ್ಕಳಿಗೆ ಹಾಗೂ 3-6 ವಯೋಮಾನದ 43043 ಮಕ್ಕಳಿಗೆ ಪೌಷ್ಠಿಕಾಹಾರ ಹಂಚುವ ವಾಷರ್ಿಕ ಗುರಿ ಇದ್ದು,ಜೂನ್ ಅಂತ್ಯದವರೆಗೆ 53275 -0-3 ವರ್ಷದೊಳಗಿನ ಹಾಗೂ 32927 3-6 ವರ್ಷದೊಳಗಿನ ಮಕ್ಕಳಿಗೆ ಪೌಷ್ಠಿಕಾಹಾರ ವಿತರಿಸುವ ಮೂಲಕ ಕ್ರಮವಾಗಿ ಶೇಕಡಾ 97 ಹಾಗೂ ಶೇಕಡಾ 76 ರಷ್ಟು ಗುರಿ ಸಾಧಿಸಲಾಗಿದೆ ಎಂದು ಸಚಿವರ ಅವಗಾಹನೆಗೆ ತರಲಾಯಿತು.
ರಾಷ್ಟ್ರೀಯ ಮಲೇರಿಯಾ ನಿಯಂತ್ರಣ ಕಾರ್ಯಕ್ರಮದನ್ವಯ 84930 ಜನರ ರಕ್ತ ಪರೀಕ್ಷೆ ನಡೆಸಿದ್ದು 1290 ಜನರಿಗೆ ಮಲೇರಿಯಾ ಸೋಂಕು ಇರುವ ಬಗ್ಗೆ ಖಚಿತ ಪಟ್ಟಿದೆಯೆಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು ತಿಳಿಸಿದರು.
ಕ್ಷಯ ನಿಯಂತ್ರಣ ಕಾರ್ಯಕ್ರಮದನ್ವಯ ಎಪಿಲ್ ನಿಂದ ಜೂನ್ ಅಂತ್ಯದ ವರೆಗೆ 425 ಹೊಸ ಕ್ಷಯ ರೋಗಿಗಳನ್ನು ಪತ್ತೆ ಹಚ್ಚಲಾಗಿದೆ.4672 ಜನರ ಕಫ ಪರೀಕ್ಷೆ ಮಾಡಲಾಗಿದ್ದು ಮೇಲ್ಕಂಡ ಅವಧಿಯಲ್ಲಿ 148 ಕ್ಷಯ ರೋಗಿಗಳು ಗುಣಮುಖರಾಗಿ ಮನೆಗೆ ತೆರಳಿದ್ದಾರೆ ಎಂಬ ಮಾಹಿತಿಯನ್ನು ಸಚಿವರಿಗೆ ತಿಳಿಸಲಾಯಿತು.
12 ಜನರು ಕುಷ್ಠ ರೋಗಿಗಳನ್ನು ಪತ್ತೆ ಹಚ್ಚಲಾಗಿದ್ದು  8 ಕುಷ್ಟ  ರೋಗಿಗಳು ರೋಗ ಮುಕ್ತರಾಗಿದ್ದಾರೆ. ಜನನಿ ಸುರಕ್ಷಾ ಯೋಜನೆಯಲ್ಲಿ 1673 ಫಲಾನುಭವಿಗಳಿಗೆ ಹಾಗೂ ಪ್ರಸೂತಿ ಆರೈಕೆ ಮತ್ತು ತಾಯಿ ಭಾಗ್ಯ ಯೊಜನೆಯಲ್ಲಿ 1582 ಫಲಾನುಭವಿಗಳಿಗೆ ಸೌಲಭ್ಯ ದೊರಕಿಸಲಾಗಿದೆ.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಕೊರಗಪ್ಪ ನಾಯಕ್, ಸ್ಥಾಯಿಸಮಿತಿ ಅಧ್ಯಕ್ಷರಾದ ಶ್ರೀಮತಿ ಕಸ್ತೂರಿ ಪಂಜ, ಜಿಲ್ಲಾಧಿಕಾರಿ  ಎನ್ ಪ್ರಕಾಶ್, ಪೊಲೀಸ್ ಕಮಿಷನರ್ ಮನಿಷ್ ಕರ್ಬಿಕರ್, ಎಸ್ ಪಿ ಅಭಿಷೇಕ್ ಗೋಯಲ್, ಪಾಲಿಕೆ ಆಯುಕ್ತರಾದ ಶಾನಾಡಿ ಅಜಿತ್ ಹೆಗ್ಡೆ ಉಪಸ್ಥಿತರಿದ್ದರು.