Wednesday, July 17, 2013

ಹದಿಹರೆಯದ ಮಕ್ಕಳ ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಕಬ್ಬಿಣಾಂಶ ಮಾತ್ರೆ ಅಗತ್ಯ -ಎನ್.ಪ್ರಕಾಶ್

ಮಂಗಳೂರು, ಜುಲೈ.17:-ಮಕ್ಕಳಲ್ಲಿ ಕಂಡು ಬರುವ ರಕ್ತ ಹೀನತೆಯಿಂದ ಅವರ ಕಲಿಕಾ ಏಕಾಗ್ರತೆಗೆ ಭಂಗವುಂಟಾಗಿ ದೈಹಿಕ ತೊಂದರೆಗೊಳಗಾಗುತ್ತಾರೆ. ಇವೆಲ್ಲವನ್ನು ಹೋಗಲಾಡಿಸಲು ಅವರಿಗೆ ಸೂಕ್ತವಾದ ಕಬ್ಬಿಣಾಂಶಯುತ ಮಾತ್ರೆಗಳನ್ನು ನೀಡಬೇಕಾದ ಆವಶ್ಯಕತೆ ಇದೆಯೆಂದು ದಕ್ಷಿಣಕನ್ನಡ ಜಿಲ್ಲಾಧಿಕಾರಿ ಎನ್.ಪ್ರಕಾಶ್ ಅಭಿಪ್ರಾಯ ಪಟ್ಟರು.
                  ಅವರು ಇಂದು ನಗರದ ಅತ್ತಾವರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜಿಲ್ಲಾ ಆಡಳಿತ,ಜಿಲ್ಲಾ ಪಂಚಾಯತ್,ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ, ಕಬ್ಬಿಣಾಂಶಯುತ ಮಾತ್ರೆಗಳ(ಡಬ್ಲ್ಯು.ಐ.ಎಫ್.ಎಸ್.)ವಿತರಣಾ ಕಾರ್ಯಕ್ರಮವನ್ನು ಮಕ್ಕಳಿಗೆ ಮಾತ್ರೆ ನುಂಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
          ಇಂದಿನ ಮಕ್ಕಳೇ ಮುಂದಿನ ಸಬಲ ಪ್ರಜೆಗಳು ಎಂಬುದನ್ನು ಕಾರ್ಯಗತಗೊಳಿಸಲು ಇದೊಂದು ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ಜಿಲ್ಲೆಯಲ್ಲಿ ಇದನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕೆಂದು ಜಿಲ್ಲಾಧಿಕಾರಿಗಳು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು. ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಜಿಲ್ಲಾ ಪಂಚಾಯತಿಯ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷರಾದ ಶ್ರೀಮತಿ ಆಶಾ ತಿಮ್ಮಪ್ಪ ಗೌಡ ಅವರು ಮಾತನಾಡಿ,ಶಾಲಾ ಮಕ್ಕಳಿಗೆ ಮಾತ್ರೆಯನ್ನು ಮನೆಗೆ ಕೊಂಡು ಹೋಗಲು ಬಿಡದೆ ಶಾಲೆಯಲ್ಲೇ ಪ್ರತಿ ವಾರ ಮಾತ್ರೆ ನುಂಗಿಸುವಂತೆ ಶಿಕ್ಷಕರಿಗೆ ತಿಳಿಸಿದರು.
 ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಆರ್.ಸಿ.ಎಚ್. ಅಧಿಕಾರಿ ಡಾ.ರುಕ್ಮಿಣಿ, ಮಕ್ಕಳಲ್ಲಿ ಕಬ್ಬಿಣಾಂಶ ಕೊರತೆ ನೀಗಿಸಲು ವಾರಕ್ಕೆ ಒಂದರಂತೆ 52 ವಾರ ಮಾತ್ರೆಯನ್ನು ನುಂಗಿಸುವ ಆವಶ್ಯಕತೆ ಇದೆ. ಈ ಮಾತ್ರೆಗಳು ರೋಗಕ್ಕೆ ಚಿಕಿತ್ಸೆಯ ಬದಲಾಗಿ ಇದೊಂದು ರೋಗ ನಿರೋಧಕ ಕಾರ್ಯಕ್ರಮ ಅಷ್ಟೆ ಎಂದರು.
       ಸಮಾರಂಭದ ಅಧ್ಯಕ್ಷತೆಯನ್ನು ಕಾರ್ಪೋರೇಟರ್ ಅಬ್ದುಲ್ ರಾವೂಫ್ ವಹಿಸಿದ್ದರು. ಜಿಲ್ಲಾ ವಿದ್ಯಾಂಗ ಉಪನಿರ್ದೇಶಕರಾದ ಮೊಸೆಸ್ ಜಯಶೇಖರ್, ಪ್ರಭಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಮಕೃಷ್ಣ ರಾವ್ ಮುಂತಾದವರು ಹಾಜರಿದ್ದರು.