Monday, July 22, 2013

ನಿರ್ಗತಿಕರ ರಾತ್ರಿ ವಸತಿಕೇಂದ್ರ ನಿರ್ವಹಣೆ ಹೊಣೆ ಮನಪಾಗೆ

ಮಂಗಳೂರು ಜುಲೈ, 22 :- ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯ ನಗರ ಪ್ರದೇಶಗಳ ನಿರ್ಗತಿಕ/ರಾತ್ರಿ ವಸತಿ ರಹಿತ ನಾಗರೀಕರಿಗಾಗಿ ನಗರದ ಶರವು ಮತ್ತು ಉರ್ವ ಸಮುದಾಯಭವನದಲ್ಲಿರುವ ವಸತಿಕೇಂದ್ರಗಳ ನಿರ್ವಹಣೆಯನ್ನು ಮಂಗಳೂರು ಮಹಾನಗರಪಾಲಿಕೆಯ  ನಗರ ಬಡತನ ನಿರ್ಮೂಲನಾ ಕೋಶದ ನೇತೃತ್ಚದಲ್ಲಿ ಮುಂದಿನ ಮೂರು ತಿಂಗಳ ಕಾಲ ನಿರ್ವಹಿಸಲು ನಿರ್ಧರಿಸಲಾಯಿತು. 
ಇಂದು ಈ ಸಂಬಂಧ ದಕಿಣ ಕನ್ನಡ ಜಿಲ್ಲಾಧಿಕಾರಿ  ಎನ್ ಪ್ರಕಾಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಎನ್ ಜಿಒಗಳು ಪಾಲ್ಗೊಂಡು ನಿರ್ವಹಣೆಯನ್ನು ಉತ್ತಮಪಡಿಸುವ ಬಗ್ಗೆ ಸವಿವರ ಚರ್ಚೆ ನಡೆಯಿತು.
ಬಂದರಿನಲ್ಲಿರುವ ಕಸಬಾ ಬಜಾರ್ ನಲ್ಲಿ ಸುಸ್ಸಜ್ಜಿತ ವಸತಿಕೇಂದ್ರ ನಿರ್ಮಾಣದ ನೀಲಿನಕಾಶೆಯನ್ನು ಸಭೆಯ ಮುಂದಿಡಲಾಯಿತು ಹಾಗೂ ಯೋಜನೆಯನ್ನು ಮುಂದುವರಿಸಲು ಸಭೆಯ ಒಪ್ಪಿಗೆಯನ್ನು ಪಡೆಯಲಾಯಿತು. ಈವರೆಗೆ ಲೀಡ್ ಎನ್ ಜಿಒ ಮತ್ತು ಇಂಪ್ಲಿಮೆಂಟಿಂಗ್ ಎನ್ ಜಿ ಒ ದಡಿ ಸುವರ್ಣ ಕರ್ನಾಟಕ ಸಂಸ್ಥೆಯು ಹೊರಗುತ್ತಿಗೆ ಪಡೆದು ವಸತಿಕೇಂದ್ರಗಳನ್ನು ನಿರ್ವಹಣೆ ಮಾಡುತ್ತಿತ್ತು. ಈ ಗುತ್ತಿಗೆಯ ಅವಧಿ ಮುಗಿದ ಹಿನ್ನಲೆಯಲ್ಲಿ, ಮೂಲಭೂತ ಸೌಕರ್ಯಗಳನ್ನು ಬಡತನ ನಿಮರ್ೂಲನಾ ಕೋಶದಿಂದಲೇ ಪಡೆದುಕೊಂಡು ಎನ್ ಜಿ ಒ ಗಳ ನೆರವಿನೊಂದಿಗೆ ಇನ್ನೂ ಉತ್ತಮ ಸೇವೆ ನೀಡುವ ನಿಟ್ಟಿನಲ್ಲಿ ಮೂರು ತಿಂಗಳ ಕಾಲ ಮಹಾ ನಗರಪಾಲಿಕೆಯ ಬಡತನ ನಿರ್ಮೂಲನಾ ಕೋಶವೇ ವಹಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.
ಇದೇ ಸಂದರ್ಭದಲ್ಲಿ ಮಕ್ಕಳನ್ನು ದುರ್ಬಳಕೆ ಮಾಡಿಕೊಂಡು ಬಿಕ್ಷಾಟನೆ ಮಾಡುವ ಪ್ರವೃತ್ತಿ ನಗರದ ಪ್ರಮುಖ ವೃತ್ತಗಳಲ್ಲಿ ಕಂಡುಬರುತ್ತಿದ್ದು, ಇದಕ್ಕೆ ಪೊಲೀಸ್ ಇಲಾಖೆಯ ನೆರವಿನೊಂದಿಗೆ ಮಕ್ಕಳ ರಕ್ಷಣಾ ಘಟಕ ಮತ್ತು ಇತರ ಇಲಾಖೆಗಳ ನೆರವಿನೊಂದಿಗೆ ಕಟ್ಟುನಿಟ್ಟಿನ ಕ್ರಮವಾಗಬೇಕೆಂದು ಮಕ್ಕಳ ರಕ್ಷಣಾ ಘಟಕದ ಅಧ್ಯಕ್ಷರಾದ ಆಶಾ ನಾಯಕ್ ಹೇಳಿದರು.
ಅಂಧರಿಗೆ ತರಬೇತಿ ನೀಡುತ್ತಿರುವ ಸಂಸ್ಥೆಯವರು ತಮ್ಮ ಅಭಿಪ್ರಾಯ ಮಂಡಿಸಿ ತರಬೇತಿ ನೀಡಲು ಮತ್ತು ಅವರು ಉತ್ಪಾದಿಸಿದ ಉತ್ಪನ್ನ ಮಾರಾಟ ಮಾಡಲು ಜಿಲ್ಲಾಡಳಿತದ ನೆರವನ್ನು ಕೋರಿದರು. ಈ ಸಂಬಂಧ ಪೂರಕ ನೆರವು ನೀಡುವುದಾಗಿ ಜಿಲ್ಲಾಧಿಕಾರಿಗಳು ಹೇಳಿದರು. ಭಿಕ್ಷುಕರನ್ನು ಭಿಕ್ಷುಕ ಕೇಂದ್ರಕ್ಕೆ ಸೇರಿಸುವ ಬಗ್ಗೆಯೂ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಅರುಣ್ ಫುರ್ಟಡೋ ಅವರಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು. ಮುಂದಿನ ಸಭೆಯಲ್ಲಿ ಪ್ರಗತಿ ಪರಿಶೀಲನೆ ವೇಳೆ ಈ ಸಂಬಂಧ ಅಗತ್ಯ ಬಿದ್ದಲ್ಲಿ ತಿದ್ದುಪಡಿ ಮಾಡುವುದಾಗಿಯೂ ಜಿಲ್ಲಾಧಿಕಾರಿಗಳು ಹೇಳಿದರು. ಸಭೆಯಲ್ಲಿ ಆಹಾರ ಮತ್ತು ನಾಗರೀಕ ಪೂರೈಕೆ ಉಪನಿರ್ದೇಶಕರಾದ  ಶರಣಬಸಪ್ಪ, ಪಾಲಿಕೆಯ ಜಂಟಿ ಆಯುಕ್ತ ಶ್ರೀಕಾಂತ್ ಹಾಗೂ ಎನ್ ಜಿ ಒಗಳು, ಪಾಲಿಕೆಯ ಅಧಿಕಾರಿಗಳು ಉಪಸ್ಥಿತರಿದ್ದರು.