Friday, July 19, 2013

ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಮ್ಯಾನ್ಯುಯೆಲ್ ಸ್ಕ್ಯಾವೆಂಜಿಂಗ್ ಇಲ್ಲ: ಆಯುಕ್ತರು


ಮಂಗಳೂರು, ಜುಲೈ.19:ಮ್ಯಾನ್ಯುಯೆಲ್ ಸ್ಕ್ಯಾವೆಂಜಿಂಗ್ ವೃತ್ತಿ ಮಾಡುತ್ತಿರುವವರು ಸ್ವಯಂ-ಘೋಷಣೆ ಮಾಡಿಕೊಳ್ಳುವ ಸಲುವಾಗಿ ಮಹಾನಗರಪಾಲಿಕೆಯಲ್ಲಿ  ಡೆಸಿಗ್ನೇಟೆಡ್ ಸೆಂಟರನ್ನು ತೆರೆದು ಮಾಹಿತಿಗಳನ್ನು ಪಡೆದುಕೊಳ್ಳಲು ವಿಶೇಷ ಸಿಬ್ಬಂದಿಗಳನ್ನು ನೇಮಕ ಮಾಡಲಾಗಿದ್ದು,ಸ್ಥಳೀಯ ದಿನಪತ್ರಿಕೆಗಳಲ್ಲಿ, ದೂರದರ್ಶನ ವಾಹಿನಿಗಳಲ್ಲಿ ಮತ್ತು ರೇಡಿಯೋಗಳಲ್ಲಿ ಪ್ರಚಾರ ಮಾಡುವುದರೊಂದಿಗೆ ಕರಪತ್ರಗಳನ್ನು ಮುದ್ರಿಸಿ ಸಾರ್ವಜನಿಕರಿಗೆ ಹಂಚಲಾಗಿ ಆದರೆ ಇಲ್ಲಿಯ ತನಕ ಯಾರೂ ಸಹ ಮ್ಯಾನ್ಯುಯೆಲ್ ಸ್ಕ್ಯಾವೆಂಜಿಂಗ್ ವೃತ್ತಿ ಮಾಡುವ ಕುರಿತು ಸ್ವಯಂ-ಘೋಷಣೆ ಮಾಡಿಕೊಳ್ಳದೇ ಇರುವುದು ಕಂಡು ಬಂದಿರುತ್ತದೆ.
ಅಷ್ಟೇ ಅಲ್ಲದೇ ಮಂಗಳೂರು ಮಹಾನಗರಪಾಲಿಕೆಯ ವ್ಯಾಪ್ತಿಯೊಳಗಡೆ ಕಾರ್ಯ ನಿರ್ವಹಿಸುತ್ತಿರುವ ಸ್ವಯಂ-ಸೇವಾ ಸಂಸ್ಥೆಗಳ ಕಡೆಯಿಂದಲೂ ಯಾವುದೇ ರೀತಿಯಲ್ಲಿಯೂ ಸಹ ಮಾಹಿತಿಗಳು ಬಂದಿರುವುದಿಲ್ಲ.ಈಗಾಗಲೇ ಮಂಗಳೂರು ಮಹಾನಗರಪಾಲಿಕೆಯ ವ್ಯಾಪ್ತಿಯೊಳಗಡೆ ಮತ್ತು ರೈಲ್ವೆ ನಿಲ್ದಾಣಗಳಲ್ಲಿ, ಸಂಬಂಧಪಟ್ಟ ಇಲಾಖೆಗಳಿಂದ ಕಸ ಗುಡಿಸುವವರು ಅಥವಾ ಸ್ಯಾನಿಟರಿ/ಸ್ವಚ್ಛ ಮಾಡುವ ಗುತ್ತಿಗೆ ಪಡೆದುಕೊಂಡಿರುವ ಏಜೆನ್ಸಿಗಳಿಂದ ನೇಮಕಗೊಂಡಿರುವವರು ಸಫಾಯಿ ಕರ್ಮಚಾರಿಗಳು ಆಗಿರುತ್ತಾರೆ. ಇವರುಗಳು ಮ್ಯಾನ್ಯುಯೆಲ್ ಸ್ಕ್ಯಾವೆಂಜರ್ ಗಳು ಆಗಿರುವುದಿಲ್ಲ.
ಮಹಾನಗರಪಾಲಿಕೆ, ರೈಲ್ವೆ ಇಲಾಖೆ ಮತ್ತು ಇತರೆ ಸಂಸ್ಥೆಗಳಲ್ಲಿ ಗುತ್ತಿಗೆಯಾಗಿ ಪಡೆದುಕೊಂಡಿರುವ ಏಜೆನ್ಸಿಗಳಲ್ಲಿ ದುಡಿಯುತ್ತಿರುವ ಸಫಾಯಿ ಕರ್ಮಚಾರಿಗಳು ಮ್ಯಾನ್ಯುಯೆಲ್ ಸ್ಕ್ಯಾವೆಂಜಿಂಗ್ ರೀತಿಯಲ್ಲಿ ಕೆಲಸ ನಿರ್ವಹಿಸುವುದು ಕಂಡು ಬಂದಲ್ಲಿ, ನೇರವಾಗಿ ಸಂಬಂಧಪಟ್ಟ ಇಲಾಖೆ/ಸಂಸ್ಥೆಗಳು ಗುತ್ತಿಗೆ ಪಡೆದಿರುವ ಏಜೆನ್ಸಿಯವರ ಮೇಲೆ ಕ್ರಿಮಿನಲ್ ಮೊಕದ್ದಮೆಯನ್ನು ಮತ್ತು ತಕ್ಷಣಕ್ಕೆ ಜಾರಿ ಬರುವಂತೆ ಕಪ್ಪು ಪಟ್ಟಿಯಲ್ಲಿ ಸೇರಿಸುವುದಕ್ಕೆ ಕ್ರಮಕೈಗೊಳ್ಳುವುದಾಗಿ ಮಹಾನಗರಪಾಲಿಕೆಯ ಆಯುಕ್ತರು ತಿಳಿಸಿರುತ್ತಾರೆ.