Saturday, June 1, 2013

ಚಿತ್ರ ಕಲೆಗೆ ಪ್ರೋತ್ಸಾಹ ಅಗತ್ಯ: ಬಿ ರಮಾನಾಥ ರೈ

ಮಂಗಳೂರು, ಜೂನ್.01 : ಚಿತ್ರಕಾರ ಬಿಡಿಸುವ ಚಿತ್ರಗಳು ಕೇವಲ ಬಣ್ಣಗಳ ಮಿಶ್ರಣವಲ್ಲ.ರೇಖಾ ಚಿತ್ರಗಳಲ್ಲಿ ಜೀವಂತಿಕೆಯನ್ನು ತುಂಬಿ ಅವರಿಂದ ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡುತ್ತಾನೆ. ಆದ್ದರಿಂದ ನಾವು ಚಿತ್ರಕಲೆಗೆ ಪ್ರೋತ್ಸಾಹ ನೀಡಬೇಕಿದೆ ಎಂದು ಕರ್ನಾಟಕ ಸರ್ಕಾರದ  ಅರಣ್ಯ,ಪರಿಸರ,ವಿಜ್ಞಾನ ಜೀವಿಶಾಸ್ತ್ರ ಸಚಿವರಾದ  ಬಿ.ರಮಾನಾಥ ರೈ ಯವರು ತಿಳಿಸಿದ್ದಾರೆ.
            ಅವರು ಇಂದು ಪುತ್ತೂರಿನಲ್ಲಿ ಪುತ್ತೂರು ಪುರಸಭೆ ವತಿಯಿಂದ ರೂ.1.00 ಕೋಟಿ ವೆಚ್ಚದಲ್ಲಿ ಪುತ್ತೂರಿನ ಪರ್ಲಡ್ಕದ ಶಿವರಾಮ ಕಾರಂತರ ಬಾಲವನದಲ್ಲಿ ನಿರ್ಮಿಸಿರುವ ಚಿತ್ರ ಕಾರಂತ ಕಲಾ ಸಮುಚ್ಛಯವನ್ನು ಉದ್ಘಾಟಿಸಿ ಮಾತನಾಡಿದರು.
           ಡಾ.ಕೆ.ಶಿವರಾಮ ಕಾರಂತರು ಕನ್ನಡ ಸಾಹಿತ್ಯ ಲೋಕದ ಅಪ್ರತಿಮ ಮೇರು ಸಾಹಿತಿಯಾಗಿ ಗಂಡು ಕಲೆ ಯಕ್ಷಗಾನವನ್ನು ಸಪ್ರ ಸಮುದ್ರಗಳಾಚೆಗೂ ಪಸರಿಸಿದ ಕೀರ್ತಿವಂತರು.ಇಂತಹವರ ಹೆಸರಿನ ಕಲಾ ಸಮುಚ್ಛಯದಲ್ಲಿ ಸಾಹಿತ್ಯ ಕಲೆ ,ಯಕ್ಷಗಾನ ಮೊದಲಾದ ಪ್ರಾಕಾರಗಳ ಪ್ರದರ್ಶನ ತರಬೇತಿ ನಿರಂತರ ನಡೆಯಲಿ ಎಂದು ಹಾರೈಸಿದರು.
         ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸಂಸದರಾದ ನಳಿನ್ ಕುಮಾರ್ ಕಟೀಲ್ ಅವರು ಮಾತನಾಡಿ ಜ್ಞಾನಪೀಠ ಪುರಸ್ಕೃತರಾದ ಡಾ.ಕೆ.ಶಿವರಾಮ ಕಾರಂತರ ಮಟ್ಟಕ್ಕೆ ರಾಜಕಾರಣಿಗಳು ಬೆಳೆಯಲು ಆಗುವುದಿಲ್ಲ. ಬದಲಾಗಿ ಅವರ ನೇರನುಡಿ,ಸಮಯ ಪ್ರಜ್ಞೆ ಮುಂತಾದ ಆದರ್ಶ ಗುಣಗಳನ್ನು ನಾವು ಜೀವನದಲ್ಲಿ ರೂಢಿಸಿಕೊಂಡಾಗ ಜೀವನ ಸಾರ್ಥಕ ಎಂದರು. ಕಲಾವಿದ ಕೆ.ಕೆ.ಹೆಬ್ಬಾರ್ರವರ ಸುಪುತ್ರಿ ಶ್ರೀಮತಿ ರೇಖಾರವರು ಕಲಾವಿದ  ಕೆ.ಕೆ.ಹೆಬ್ಬಾರ್ ಕಂಡ ಕಾರಂತ ಬೃಹತ್ ಬಿತ್ತಿಫಲಕದ ಅನಾವರಣ ಮಾಡಿದರು.
          ಸಮಾರಂಭದ ಅಧ್ಯಕ್ಷತೆಯನ್ನು ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀಮತಿ ಶಕುಂತಳಾ ಶೆಟ್ಟಿ ವಹಿಸಿ ಮಾತನಾಡುತ್ತಾ ಶಿವರಾಮ ಕಾರಂತರ ಬಾಲವನದಲ್ಲಿ ನಿರಂತರ ಯಕ್ಷಗಾನ ವಿವಿಧ ಪ್ರಾಕಾರಗಳ ತರಬೇತಿ ಕಾರ್ಯಕ್ರಮಗಳು ಜರಗುವಲ್ಲಿ ಆಗಬೇಕಾದ ಪ್ರಯುತ್ನಗಳನ್ನು ಮಾಡುವುದಾಗಿ ತಿಳಿಸಿದರು.
           ಸಮಾರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಪುತ್ತೂರು ಉಪವಿಭಾಗಾಧಿಕಾರಿ ಎಚ್.ಪ್ರಸನ್ನ ಕಲಾ ಸಮುಚ್ಛಯದಲ್ಲಿ 55 ರಷ್ಟು ಡಾ.ಕೆ. ಶಿವರಾಮ ಕಾರಂತರ ಸಾಹಿತ್ಯವನ್ನು ಆಧರಿಸಿದ ಚಿತ್ರ ಕಲೆಗಳನ್ನು 55 ಚಿತ್ರಕಾರರು ರಚಿಸಿದ್ದು ಅವುಗಳನ್ನು ಪ್ರದರ್ಶಿಸಲಾಗಿದೆ.  ಇಲ್ಲಿ ನಿರಂತರ ಸಾಹಿತ್ಯ ಚಿತ್ರಕಲೆ ಇನ್ನಿತರೆ ಸಾಂಸ್ಕೃತಿಕ ಚಟುವಟಿಕೆಗಳು ಜರುಗಲು ಎಲ್ಲಾ ಕ್ರಮ ಕೈಗೊಳ್ಳಲಾಗುವುದೆಂದು ತಿಳಿಸಿದರು.ಡಾ.ಕೆ.ಶಿವರಾಮ ಕಾರಂತರ ಸುಪುತ್ರಿ ಶ್ರೀಮತಿ ಕ್ಷಮಾರಾವ್  ಅವರಿಂದ ಒಡಿಸ್ಸಿ ನೃತ್ಯ ಕಾರ್ಯಕ್ರಮ ನಡೆಯಿತು.