Friday, June 21, 2013

'ಎಲ್ಲರೂ ಕಲಿಯೋಣ ಎಲ್ಲರೂ ಬೆಳೆಯೋಣ'

ಮಂಗಳೂರು, ಜೂನ್. 21: ಶಿಕ್ಷಣ ವ್ಯವಸ್ಥೆಯಲ್ಲಿ ಅಮೂಲಾಗ್ರ ಬದಲಾವಣೆಗೆ ಕಾರಣವಾದದ್ದು ಸರ್ವಶಿಕ್ಷಣ ಅಭಿಯಾನ ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ  ಕೊರಗಪ್ಪ ನಾಯಕ್ ಅವರು ಹೇಳಿದರು.
ಈ ಯೋಜನೆಯಿಂದಾಗಿ ನಮ್ಮ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ಹೊಸ ವಾತಾವರಣ ಸೃಷ್ಟಿಯಾಯಿತು. ಮೂಲಭೂತ ಸೌಕರ್ಯ ಅಭಿವೃದ್ಧಿ ಪಡಿಸಲು, ಶೌಚಾಲಯ ನಿರ್ಮಾಣ, ಶಾಲಾ ಕಂಪೌಂಡ್,ತೋಟಗಾರಿಕೆ, ಕೃಷಿ ದರ್ಶನ, ಕಂಪ್ಯೂಟರ್ ಶಿಕ್ಷಣಗಳಿಗೆ ಅನುದಾನ ದೊರೆಯಿತು. ಶಾಲಾ ವಾತಾವರಣ ಉತ್ತಮಗೊಂಡಿತು ಎಂದು ಅಧ್ಯಕ್ಷರು ನುಡಿದರು.
ಅವರಿಂದು ಮುಲ್ಕಿಯ ರುಕ್ಕರಾಮ ಸಾಲಿಯಾನ ಸಭಾಗೃಹದಲ್ಲಿ ಕ್ಷೇತ್ರ ಪ್ರಚಾರ ನಿರ್ದೇಶನಾಲಯ, ವಾರ್ತಾ ಇಲಾಖೆ, ಸಂಗೀತ ಮತ್ತು ನಾಟಕ ವಿಭಾಗ ಭಾರತ ಸರ್ಕಾರ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಶ್ರೀ ನಾರಾಯಣ ಗುರು ಆಂಗ್ಲ ಮಾಧ್ಯಮ ಶಾಲೆ ಮುಲ್ಕಿ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ 'ಸರ್ವ ಶಿಕ್ಷಣ ಅಭಿಯಾನ' ಬಗ್ಗೆ ವಿಶೇಷ ಆಂದೋಲನ ಕಾರ್ಯಕ್ರಮ ಹಾಗೂ ಬೆಂಗಳೂರಿನ ಯಕ್ಷದೇಗುಲ ತಂಡದ ಖ್ಯಾತ ಕಲಾವಿದರಿಂದ ಶೈಕ್ಷಣಿಕ ಜಾಗೃತಿ ಬಗ್ಗೆ ಯಕ್ಷಗಾನ ಪ್ರದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಸರ್ಕಾರಗಳು ಹಲವಾರು ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದು, ಈ ಬಗ್ಗೆ ಜನರಲ್ಲಿ ಅರಿವು ಮೂಡಿಸಲಾಗುತ್ತಿದೆ. ಅರಿವು ಮೂಡಿಸುವುದರಿಂದ ಯೋಜನೆಗಳ ಅನುಷ್ಠಾನ ಸುಲಭವಾಗಲಿದೆ ಎಂದರು. ಇದೇ ಸಂದರ್ಭದಲ್ಲಿ ಸಾಂಕ್ರಾಮಿಕ ರೋಗಗಳ ಬಗ್ಗೆಯೂ ಜನರು ಎಚ್ಚರಿಕೆ ವಹಿಸಬೇಕು. ಅನಾರೋಗ್ಯ ಕಾಡಿದ ಕೂಡಲೇ ಹತ್ತಿರದ ಆರೋಗ್ಯ ಕೇಂದ್ರಗಳಿಗೆ ತೆರಳಿ ಆರೋಗ್ಯ ಪರೀಕ್ಷೆ ಮಾಡಿಸಬೇಕೆಂದರು.
ಸಭೆಯಲ್ಲಿ ನಗರಪಂಚಾಯತ್ ಅಧ್ಯಕ್ಷರಾದ  ಶಶಿಕಾಂತ್ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕ್ಷೇತ್ರ ಪ್ರಚಾರ ನಿರ್ದೇಶನಾಲಯದ ನಿರ್ದೇಶಕರಾದ ಎಂ ನಾಗೇಂದ್ರ ಸ್ವಾಮಿ, ಕಸಾಪ ಮಾಜಿ ಅಧ್ಯಕ್ಷರಾದ ಶ್ರೀ ಹರಿಕೃಷ್ಣ ಪುನರೂರು, ನಗರಪಂಚಾಯತ್ ಉಪಾಧ್ಯಕ್ಷ  ಯೋಗೀಶ್ ಕೋಟ್ಯಾನ್,  ನಾರಾಯಣ ಗುರು ಆಂಗ್ಲ ಮಾಧ್ಯಮ ಶಾಲೆ ಮುಲ್ಕಿಯ ಸಂಚಾಲಕರಾದ  ಹರೀಶ್ಚಂದ್ರ ಕೋಟ್ಯಾನ್, ಯಾದೀಶ್ ಅಮೀನ್ ಅತಿಥಿಗಳಾಗಿ ಪಾಲ್ಗೊಂಡರು. ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಶ್ರೀಮತಿ ಚಂದ್ರಕಲಾ ಸಿ ಆರ್ ಪಿ (ಕ್ಲಸ್ಟರ್ ರಿಸೋರ್ಸ್ ಪರ್ಸನ್) ವಿಶೇಷ ಉಪನ್ಯಾಸ ನೀಡಿದರು. ಕ್ಷೇತ್ರ ಪ್ರಚಾರ ನಿರ್ದೇಶನಾಲಯದ ಸಹಾಯಕ ನಿರ್ದೇಶಕರಾದ  ಕೆ ಪಿ ರಾಜೀವನ್, ವಾರ್ತಾಧಿಕಾರಿ ಶ್ರೀಮತಿ ರೋಹಿಣಿ. ಕೆ ಉಪಸ್ಥಿತರಿದ್ದರು. ಶಿಕ್ಷಕ ರವೀಂದ್ರ ಪೂಜಾರಿ ಸ್ವಾಗತಿಸಿದರು. ಶ್ರೀಕಾಂತ್ ವಂದಿಸಿದರು. ಹರ್ಷರಾಜ್ ನಿರೂಪಿಸಿದರು. ಇದೇ ಸಂದರ್ಭದಲ್ಲಿ ಕಲಾವಿದರಾದ  ವಿಶ್ವನಾಥ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.