Monday, June 24, 2013

ರಸ್ತೆ ಸುರಕ್ಷತಾ ಸಮಿತಿ ಸಭೆ

ಮಂಗಳೂರು, ಜೂನ್. 24 :ಅವೈಜ್ಞಾನಿಕ ರಸ್ತೆ ಉಬ್ಬು, ಚರಂಡಿ ವ್ಯವಸ್ಥೆ,ಸ್ಪೀಡ್ ಬ್ರೇಕರ್ ಗಳ ಬಗ್ಗೆ ನಾಗರೀಕರಿಂದ ಅಸಮಾಧಾನ ವ್ಯಕ್ತವಾದ ಹಿನ್ನಲೆಯಲ್ಲಿ ತಕ್ಷಣವೇ ಈ ಸಂಬಂಧ ಸೂಕ್ತವಾಗಿ ಸಂಬಂಧಪಟ್ಟ ಅಧಿಕಾರಿಗಳು ಸ್ಪಂದಿಸಬೇಕೆಂದು ಜಿಲ್ಲಾ ಮಟ್ಟದ ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ಎನ್ ಪ್ರಕಾಶ್ ಆದೇಶಿಸಿದರು.
ಇಂದು ನಡೆದ ಸಭೆಯಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿ ಹಾಗೂ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಕಾರ್ಯದರ್ಶಿಗಳೂ ಆಗಿರುವ ಮಲ್ಲಿಕಾರ್ಜುನ್ ಅವರು ಜನರಿಂದ ಬಂದ ಸಮಸ್ಯೆಗಳು ಹಾಗೂ ಕಳೆದ ಸಭೆಯಲ್ಲಿ ಚರ್ಚಿಸಲಾದ ವಿಷಯಗಳನ್ನು ಸಭೆಯ ಮುಂದಿರಿಸಿದರು.
ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಹಾಗೂ ಮಹಾನಗರಪಾಲಿಕೆ ಇಂಜಿನಿಯರ್ಗಳು ಮತ್ತು  ಸಂಚಾರಿ ಪೊಲೀಸರು ಸಂಯುಕ್ತವಾಗಿ ಕೈಗೊಳ್ಳಬೇಕಾದ ಸ್ಥಳ ತನಿಖೆಗಳಿಗೆ ನಿರ್ದೇಶನ ನೀಡಿದ ಜಿಲ್ಲಾಧಿಕಾರಿಗಳು, ವಿಷಯಗಳ ಸಾಧಕ ಬಾಧಕಗಳನ್ನು ಕೂಲಂಕಷವಾಗಿ ಪರಿಶೀಲಿಸಬೇಕೆಂದರು.
ಆಟೋರಿಕ್ಷಾ ತಂಗುದಾಣಗಳನ್ನು ಮತ್ತು ಬಸ್ ಬೇಗಳನ್ನು ನಿರ್ಮಿಸುವ ಸಂಬಂಧ ಈಗಾಗಲೇ 181 ಆಟೋ ರಿಕ್ಷಾ ತಂಗುದಾಣಗಳನ್ನು ಸಮೀಕ್ಷೆ ಮಾಡಿ ಪಟ್ಟಿ ಮಾಡಲಾಗಿದೆ ಎಂದು ಆರ್ ಟಿ ಒ ಮಲ್ಲಿಕಾರ್ಜುನ್ ಅವರು ಹೇಳಿದರು.
ಮಂಗಳೂರು ಉಡುಪಿ ಹೆದ್ದಾರಿಯಲ್ಲಿ ಬಸ್ ಬೇಗಳನ್ನು ನಿರ್ಮಿಸುವ ಬಗ್ಗೆಯೂ ಸಭೆ ಚರ್ಚಿಸಿತು. ಪಡಿಲ್ ಫ್ಲೈ ಓವರ್ ಗೆ 30 ಲಕ್ಷ ರೂ. ಗಳನ್ನು ತಕ್ಷಣವೇ ಬಿಡುಗಡೆ ಮಾಡಲು ಜಿಲ್ಲಾಧಿಕಾರಿಗಳು ಸೂಚಿಸಿದರು. ಕಪಿತಾನಿಯಾ ವಿದ್ಯಾಸಂಸ್ಥೆಗೆ ಬರುವ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ  ಶಾಲೆಯ ಬಳಿ ಸ್ಪೀಡ್ ಬ್ರೇಕರ್, ಝೀಬ್ರಾ ಕ್ರಾಸಿಂಗ್ ಹಾಗೂ ಸ್ಕೂಲ್ ಝೋನ್ ನಮೂದಿಸಿರುವ ಸೂಚನಾ ಫಲಕ ಅಳವಡಿಸಲು ಪೊಲೀಸ್ ಮತ್ತು ಪಾಲಿಕೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು.
ಪಿವಿಎಸ್ ಸರ್ಕಲ್ ಬಳಿ ಹಾಗೂ ಬಂಟ್ಸ್ ಹಾಸ್ಟೆಲ್ ಬಳಿ ವಾಹನ ದಟ್ಟಣೆ ಪ್ರದೇಶವಾಗಿದ್ದು, ಇಲ್ಲಿ ಸಿಗ್ನಲ್ ಲೈಟ್ ಅಳವಡಿಸಬೇಕೆಂದು ಕರಂಗಲ್ಪಾಡಿ ಬಳಿ ಬಸ್ ತಂಗುದಾಣವಿಲ್ಲದಿದ್ದರೂ ಖಾಸಗಿ ಮತ್ತು ಕೆಎಸ್ ಆರ್ಟಿಸಿ ಬಸ್ಸುಗಳು ನಿಲ್ಲುತ್ತಿದ್ದು ಸದರಿ ಬಸ್ಸುಗಳು ನಿಲುಗಡೆ ಮಾಡುತ್ತಿರುವುದನ್ನು ನಿಷೇಧಿಸಬೇಕೆಂದು ಸಭೆಯಲ್ಲಿ ಕೋರಲಾಯಿತು.
ಬೆಳ್ತಂಗಡಿ, ಬಂಟ್ವಾಳ ಪರಿಸರದಲ್ಲಿ ಜೀಪುಗಳು ಪರವಾನಿಗೆರಹಿತವಾಗಿ ಜನ ತುಂಬಿಸಿಕೊಂಡು ಹೋಗುತ್ತಿದ್ದು, ಬಸ್ ಗಳು ಈ ವ್ಯಾಪ್ತಿಯಲ್ಲಿ ಸಂಚರಿಸುವುದಿಲ್ಲ; ಹಾಗಾಗಿ ಇಂತಹ ಜೀಪುಗಳ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿಷೇಕ್ ಗೋಯಲ್ ಸಭೆಯ ಗಮನಕ್ಕೆ ತಂದರು. ಜೀಪುಗಳನ್ನು ನಿಲ್ಲಿಸುವುದರಿಂದ ಇಲ್ಲಿನ ಜನಕ್ಕೆ ಸಂಪರ್ಕ ಕೊರತೆಯಾಗಲಿದೆ; ಆದರೆ ಇವುಗಳಿಗೆ ಹಳದಿ ಬೋಡ್ರ್  ನೀಡಿ ಕಾನೂನಿನಡಿ ಅನುಮತಿ ನೀಡುವ ಬಗ್ಗೆ ಕ್ರಮಕೈಗೊಳ್ಳಬೇಕಿದೆ. ಈ ಬಗ್ಗೆ ಎಸ್ ಪಿ ನೀಡಿದ ವರದಿಯನ್ನಾಧರಿಸಿ ಆರ್ ಟಿ ಒ ಸರ್ಕಾರಕ್ಕೆ ತುರ್ತು ಕ್ರಮಕ್ಕೆ ಬರೆಯಿರಿ ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ನಗರದಲ್ಲಿ ಟ್ರಕ್ ಹಾಗೂ ಬುಲೆಟ್ ಟ್ಯಾಂಕರ್ ಗಳು ರಸ್ತೆ ಬದಿ ನಿಲ್ಲಿಸುವುದನ್ನು ತಡೆಯಲು ಟ್ರಕ್ ಟರ್ಮಿನಲ್ ಸ್ಥಾಪಿಸುವ ಬಗ್ಗೆ ಪ್ರಸ್ತಾಪ ಸಕರ್ಾರಕ್ಕೆ ಸಲ್ಲಿಸಲು ಸಭೆಯಲ್ಲಿ ನಿರ್ಧರಿಸಲಾಯಿತು. ಶಾಲಾ ಮಕ್ಕಳ ಸುರಕ್ಷತೆ ಬಗ್ಗೆ ಮಕ್ಕಳ ವಾಹನದ ಬಗ್ಗೆ ಕೈಗೊಂಡಿರುವ ಕಾನೂನುಗಳು ರಾಜ್ಯ ಸರ್ಕಾರದ್ದಾಗಿದ್ದು, ಸರ್ಕಾರದ ಆದೇಶ ಅನುಷ್ಠಾನ ಜಿಲ್ಲಾಡಳಿತದ ಹೊಣೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಪೆರ್ನೆ ಅಪಘಾತದ ಹಿನ್ನಲೆಯಲ್ಲಿ ತೈಲ ಕಂಪೆನಿಗಳು ಎಲ್ಲ ಟ್ರಕ್ ಗಳು ಎರಡು ಡ್ರೈವರ್ ಗಳನ್ನು ಖಚಿತಪಡಿಸಿಕೊಳ್ಳಬೇಕೆಂದು ಇಂದು ಆರ್ ಟಿ ಒ ಸಭೆಯಲ್ಲಿ ಹೇಳಿದರು. ಇನ್ನೂ ಹಲವು ಟ್ರಕ್ ಗಳಲ್ಲಿ ನಿಯಮಪಾಲನೆಯಾಗದಿರುವುದು ಕಂಡು ಬಂದಿದ್ದು, ಸಂಬಂಧಪಟ್ಟವರು ಎಚ್ಚರಿಕೆ ವಹಿಸಬೇಕು. ಹಾಗೂ ಈ ಪ್ರದೇಶದಲ್ಲಿ ಒಂದು ತುರ್ತು ನಿರ್ವಹಣೆಗೊಂದು ಮೊಬೈಲ್ ವಾಹನವನ್ನು ತೈಲ ಕಂಪೆನಿಗಳು ನಿರ್ವಹಿಸಬೇಕೆಂದರು.
ಜ್ಯೋತಿ ಸರ್ಕಲ್ ಬಳಿ ಮತ್ತು ವೆನ್ ಲಾಕ್ ಆಸ್ಪತ್ರೆ ಬಳಿ ನೋ ಹಾರ್ನ್ ಝೋನ್ ಗುರುತಿಸಲು ಸಭೆಯಲ್ಲಿ ನಿರ್ಧರಿಸಲಾಯಿತು. ಮಂಗಳೂರು ಮಹಾನಗರಪಾಲಿಕೆ ಆಯುಕ್ತ ಶ್ರೀಕಾಂತ್ ರಾವ್, ಎಸಿಪಿ ಸುಬ್ರಮಣ್ಯ, ಬಸ್ ಮಾಲಕರು, ಆಟೋ ರಿಕ್ಷಾ ಸಂಘದ ಪ್ರಮುಖರು, ಸಾರ್ವಜನಿಕರು ಸಭೆಯಲ್ಲಿದ್ದರು.