Friday, June 28, 2013

ಮಳೆಗಾಲದಲ್ಲಿ "ಕಲ್ಪವೃಕ್ಷ"ದ (ತೆಂಗು ಬೆಳೆ) ರಕ್ಷಣೆ


"ಕಲ್ಪವೃಕ್ಷ"ವೆಂದೇ ಕರೆಯಲ್ಪಡುವ ತೆಂಗು ಬೆಳೆ ರಾಜ್ಯದ ಪ್ರಮುಖ ತೋಟಗಾರಿಕೆ ಹಾಗೂ ವಾಣಿಜ್ಯ ಬೆಳೆಯಾಗಿದೆ. ಲಾಭದಾಯಕ ಗಿಡ ತೆಂಗು ನಮ್ಮ ಆರೋಗ್ಯ ಮತ್ತು ಆಹಾರಕ್ಕೆ ಉಪಯುಕ್ತವಾದ ಗಿಡ. ಕರಾವಳಿ ಪ್ರದೇಶದ ಮುಖ್ಯ ತೋಟಗಾರಿಕಾ ಬೆಳೆಗಳಲ್ಲೊಂದಾದ ತೆಂಗು, ನೀರು ಬಸಿದು ಹೋಗುವ ಮರಳು ಮಿಶ್ರಿತ ಗೋಡು ಮತ್ತು ಕೆಂಪು ಗೋಡು ಮಣ್ಣುಗಳಲ್ಲಿ ಉತ್ತಮವಾಗಿ ಬೆಳೆಯಬಲ್ಲದು. ಕೆಲಮೊಮ್ಮೆ ವಾತಾವರಣದ ವೈಪರೀತ್ಯದಿಂದ ತೆಂಗುಬೆಳೆಗೆ ತಗಲುವ ರೋಗ ಮತ್ತು ಕೀಟಗಳ ಬಾಧೆಯಿಂದಲೂ ಕೂಡಾ ಬೆಳೆಯ ಬೆಳೆವಣಿಗೆ ಕುಂಠಿತಗೊಳ್ಳುತ್ತದೆ. 
ತೆಂಗು ಬೆಳೆಗೆ ಬಾಧಿಸುವ ರೋಗಗಳು/ಕೀಟಗಳು ಮತ್ತು ಹತೋಟಿ ಕ್ರಮಗಳು:
ಸುಳಿ ಕೊಳೆ ರೋಗ:ರಿಗಳು ಜೋತು ಬೀಳುವುದು ಮತ್ತು ಹಳದಿ ಬಣ್ಣಕ್ಕೆ ತಿರುಗುತ್ತದೆ. ಸುಳಿಯ ಬುಡವು ಕೊಳೆಯುತ್ತದೆ. ಕೊನೆಗೆ ಸುಳಿಯು ಬಿದ್ದು ಹೋಗುತ್ತದೆ.
ಹತೋಟಿ ಕ್ರಮಗಳು: ಈ ರೋಗಗಳು ಕಂಡು ಬರುತ್ತಲೇ, ನುರಿತ ತಜ್ಞರಿಂದ ಮರ ಹತ್ತಿಸಿ ಸುಳಿ ಕೊಳೆತ ಬಾಗವನ್ನು ಸ್ವಚ್ಛಗೊಳಿಸಿ ಇಲ್ಲವೇ ಕತ್ತರಿಸಿ ಶೇ1 ರ ಬೋರ್ಡೋ ದ್ರಾವಣವನ್ನು ಸುರಿಯುವುದು.
    ಮುನ್ನೆಚರಿಕೆಯ ಕ್ರಮವಾಗಿ ಶೇ. 1 ರ ಬೋರ್ಡೊ ದ್ರಾವಣ ಅಥವಾ 3 ಗ್ರಾಂ ತಾಮ್ರದ ಆಕ್ಸಿ ಕ್ಲೋರೈಡನ್ನು 1 ಲೀಟರ್ ನೀರಿನಲ್ಲಿ ಬೆರೆಸಿ ಸುಳಿಯ ಮತ್ತು ಗರಿಗಳ ತೊಟ್ಟಿನ ಸಂದುಗಳಲ್ಲಿ ಸುರಿಯಬೇಕು.
ರೈನೋಸರಸ್ ದುಂಬಿ:ಈ ಕೀಟಗಳ ಬಾಧೆಯು ಮಳೆಗಾಲದಲ್ಲಿ ಅಧಿಕವಾಗಿದ್ದು, ದುಂಬಿಗಳು ಗಿಡಗಳ ಸುಳಿ ಮತ್ತು ಎಲೆಗಳ ಬುಡಗಳನ್ನು ಕೊರೆದು ತಿನ್ನುತ್ತವೆ. ಗರಿಗಳನ್ನು ಕತ್ತರಿಸುತ್ತದೆ. ಹೂ ಗೊಂಚಲುಗಳನ್ನು ಕೊರೆಯುವುದರಿಂದ ಕಾಯಿಗಳ ಉತ್ಪತ್ತಿ ಕಡಿಮೆಯಾಗುತ್ತದೆ. ಸುಳಿ ಭಾಗವನ್ನು ಆಕ್ರಮಿಸಿದಲ್ಲಿ ಸಸಿಗಳು ಸಾಯುವ ಸಂಭವವೂ ಹೆಚ್ಚಿದೆ.
ಹತೋಟಿ ಕ್ರಮಗಳು:-
    ಸುಳಿಯ 2-3 ಗರಿಗಳ ತೊಟ್ಟಿನ ಸಂದುಗಳಿಗೆ ಮೆಲಾಥಿಯಾನ್ ಕೀಟನಾಶಕ ಮತ್ತು ಮರಳನ್ನು ಸಮಪ್ರಮಾಣದಲ್ಲಿ ಮಳೆಗಾಲದಲ್ಲಿ ಹಾಗೂ ಮಳೆಗಾಲ ಮುಗಿದ ನಂತರ ಆಕ್ಟೋಬರ್-ನವೆಂಬರ್ ತಿಂಗಳಿನಲ್ಲಿ ತುಂಬಬೇಕು.
ಕೆಂಪು ಮೂತಿ ಹುಳು:
    ರೈನೋಸರಸ್ ದುಂಬಿಯಂತೆ ಇವುಗಳು ಕೂಡ ತೆಂಗಿನ ಮರದ ಗಾಯಗೊಂಡ ಕಾಂಡದ ಮೃದು ಭಾಗವನ್ನು ಕೊರೆದು ತಿನ್ನುವುದರಿಂದ ಕಾಂಡದಲ್ಲಿ ರಂಧ್ರಗಳು ಕಾಣುತ್ತವೆ. ಕೀಟ ಬಾಧೆಯು ತೀವ್ರವಾದಾಗ ಸುಳಿಗರಿಗಳು ಒಣಗುತ್ತವೆ.
ಹತೋಟಿ ಕ್ರಮಗಳು:  ಕಾಂಡದಲ್ಲಿನ ರಂಧ್ರಗಳಿಂದ ರಸ ಸೋರುತ್ತಿದ್ದರೆ, 4 ಗ್ರಾಂ ಕಾರ್ಬರಿಲ್ ಕೀಟನಾಶಕವನ್ನು 1 ಲೀಟರ್ ನೀರಿಗೆ ಸೇರಿಸಿ ರಂಧ್ರಗಳಿಗೆ ಸುರಿಯಬೇಕು. ಸುಳಿಯ 2-3 ಗರಿಗಳ ತೊಟ್ಟಿನ ಸಂದುಗಳಿಗೆ ಫೋರೇಟ್ ಕೀಟನಾಶಕವನ್ನು ಪ್ರತೀ ಮರಕ್ಕೆ 5ಗ್ರಾಂ ನಂತೆ ಹಾಕಬೇಕು.
ತೆಂಗಿನ ನುಸಿ:ಇವು ಅತ್ಯಂತ ಸೂಕ್ಷ್ಮ ಜೀವಿಯಾಗಿದ್ದು ಎಳೆಯ ಕಾಯಿಗಳ ಅಂಗಾಂಶಗಳನ್ನು ಚುಚ್ಚಿ ಹೊರಬರುವ ರಸವನ್ನು ಹೀರುತ್ತದೆ. ಕಾಯಿಗಳ ಮೇಲೆ ಬಿರುಕನ್ನು ಕಾಣುತ್ತೇವೆ ಮತ್ತು ಅಲ್ಲಲ್ಲಿ ಅಂಟುಗಳು ಬರುತ್ತವೆ. ಕಾಯಿಗಳ ಬೆಳವಣಿಗೆ ಕುಂಠಿತಗೊಳ್ಳುತ್ತವೆ.
ಹತೋಟಿ ಕ್ರಮಗಳು:
1.    ಪ್ರತೀ ಮರಕ್ಕೆ 50 ಕೆ.ಜಿ.ಸಾವಯವ ಗೊಬ್ಬರ ಹಾಕುವುದು.
2.    ಪ್ರತೀ ಮರಕ್ಕೆ 5 ಕೆ.ಜಿ. ಬೇವಿನ ಹಿಂಡಿ ಹಾಕುವುದು.
3.    ಪ್ರತೀ ಮರಕ್ಕೆ ಶಿಫಾರಸ್ಸು ಮಾಡಿರುವ ನಿಗದಿತ ಪೋಷಕಾಂಶಗಳನ್ನು ನೀಡುವುದರ ಮೂಲಕ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.

    ತೆಂಗು ಬೆಳೆಯಲ್ಲಿ ಕೀಟ/ರೋಗಗಳನ್ನು ಸಂಪೂರ್ಣವಾಗಿ ನಿಯಂತ್ರಣಕ್ಕೆ ತರಲು ಸಾಧ್ಯವಿಲ್ಲದಿದ್ದರೂ, ಮಳೆಗಾಲದಲ್ಲಿ ಗಿಡಗಳ ಬುಡಗಳ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವ ಮೂಲಕ ಹಾಗೂ ಹೆಚ್ಚು-ಹೆಚ್ಚು ಹಸಿರೆಲೆ ಗೊಬ್ಬರಗಳನ್ನು ಬಳಸುವ ಮೂಲಕ ಮತ್ತು ಅವಶ್ಯಕ ರಾಸಾಯನಿಕ ಮತ್ತು ಸಾವಯವ ಗೊಬ್ಬರಗಳ ಬಳಕೆಯಿಂದ ಹೆಚ್ಚಿನ ನಿಯಂತ್ರಣವನ್ನು ಕಾಣಲು ಸಾಧ್ಯವಾಗುವುದು ಮತ್ತು ಉತ್ತಮ ಫಸಲನ್ನು ಪಡೆಯಬಹುದು. ಒಟ್ಟಿನಲ್ಲಿ ಸವರ್ೊಪಯೋಗಿ ಲಾಭದಾಯಕ ಗಿಡ ತೆಂಗನ್ನು ರೋಗ/ಕೀಟಗಳಿಂದ ರಕ್ಷಿಸುವುದು ನಮ್ಮ ಹೊಣೆ.

ಹೆಚ್ಚಿನ ಮಾಹಿತಿಗೆ ಸ್ಥಳೀಯ ಹೋಬಳಿ ತೋಟಗಾರಿಕೆ ಅಧಿಕಾರಿಗಳನ್ನು/ ತಾಲೂಕು ಸಹಾಯಕ ತೋಟಗಾರಿಕೆ ನಿರ್ದೇಶಕರನ್ನು  ಸಂಪರ್ಕಿಸಬಹುದು ಅಥವಾ ವಿಷಯ ತಜ್ಞರು, ತೋಟಗಾರಿಕಾ ಮಾಹಿತಿ ಮತ್ತು ಸಲಹಾ ಕೇಂದ್ರ (ಹಾರ್ಡಿ ಕ್ಲಿನಿಕ್) ಮಂಗಳೂರು ಇಲ್ಲಿ ಸಂಪರ್ಕಿಸಬಹುದು. ದೂರವಾಣಿ ಸಂ:0824-2412628
Email: hoticlinicmangalore@gmail.com