Thursday, May 30, 2013

ಡೆಂಗ್ಯು, ಮಲೇರಿಯಾ ನಿಯಂತ್ರಣಕ್ಕೆ ಆರೋಗ್ಯ ಇಲಾಖೆಯಿಂದ ವಿಶೇಷ ಜಾಗೃತಿ ಅಭಿಯಾನ

ಮಂಗಳೂರು, ಮೇ. 30: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಡೆಂಗ್ಯು, ಮಲೇರಿಯಾ ನಿಯಂತ್ರಣಕ್ಕೆ ವಿಶೇಷ ಕಾರ್ಯಯೋಜನೆಯನ್ನು ರೂಪಿಸಲಾಗುವುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ ಓ ಆರ್ ಶ್ರೀರಂಗಪ್ಪ ತಿಳಿಸಿದರು.
               ಅವರಿಂದು ತಮ್ಮ ಇಲಾಖಾಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ಇಲಾಖೆ ಜ್ವರ ನಿಯಂತ್ರಣಕ್ಕೆ ಹಾಗೂ ಜಾಗೃತಿ ಮೂಡಿಸಲು ಎಲ್ಲರ ಸಹಕಾರವನ್ನು ಬಯಸಿದ್ದು, ಜಾಗೃತ ಸಮಾಜದಿಂದ ಸಾಂಕ್ರಾಮಿಕ ರೋಗ ಹರಡುವಿಕೆ ತಡೆಯಬಹುದು. ಈ ನಿಟ್ಟಿನಲ್ಲಿ ಎಲ್ಲ ವೈದ್ಯಕೀಯ ಸಂಸ್ಥೆಗಳ ನೆರವನ್ನು ಇಲಾಖೆ ಕೋರಿದ್ದು, ರೋಗ ತಡೆಗೆ ಪ್ರತಿಯೊಬ್ಬರ ಸಹಕಾರ ಬಯಸಿದೆ ಎಂದರು.
ಜೂನ್ ಒಂದರಂದು ಶನಿವಾರ ಬೆಳಗ್ಗೆ 10ರಿಂದ 12 ಗಂಟೆಯವರೆಗೆ ಎಲ್ಲ ಸರ್ಕಾರಿ ವೈದ್ಯರುಗಳಿಗೆ ಡೆಂಗ್ಯು ನಿಯಂತ್ರಣದ ಬಗ್ಗೆ ವಿಶೇಷ ಮಾಹಿತಿ, 12 ಗಂಟೆಯಿಮದ 1 ಗಂಟೆಯವರಿಗೆ ಎಲ್ಲ ಖಾಸಗಿ ಮೆಡಿಕಲ್ ಕಾಲೇಜುಗಳ ಮುಖ್ಯಸ್ಥರಿಗೆ ಮಾಹಿತಿ ಹಾಗೂ ಕರ್ತವ್ಯ ಭೋಧನೆಯನ್ನು ಮಾಡಲಾಗುವುದು ಎಂದರು.
ಅದೇ ದಿನ ಮಧ್ಯಾಹ್ನ 2ಗಂಟೆಯಿಂದ 4 ಗಂಟೆಯವರೆಗೆ ಪುರುಷ ಆರೋಗ್ಯ ಸಹಾಯಕರಿಗೆ ಆರೋಗ್ಯ ಜಾಗೃತಿ ಕುರಿತು ವಿಶೇಷ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ತಿಳಿಸಿದರು.
ಜೂನ್ 3ರಿಂದ 7 ತಾರೀಖಿನವರೆಗೆ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಹಾಗೂ ಅಧೀನ ಸಂಸ್ಥೆಗಳಲ್ಲಿ ಸಮುದಾಯ ಆರೋಗ್ಯ ದಿನಾಚರಣೆ ಮಾದರಿಯಲ್ಲಿ ಡೆಂಗ್ಯು, ಮಲೇರಿಯಾ ಹಾಗೂ ಸಾಂಕ್ರಾಮಿಕ ರೋಗಗಳ ಬಗ್ಗೆ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಈ ಸಂದರ್ಭದಲ್ಲಿ ಜನಪ್ರತಿನಿಧಿಗಳು ಹಾಗೂ ಪಂಚಾಯತ್ ಅಧಿಕಾರಿಗಳು ಹಾಗೂ ಸ್ಥಳೀಯ ಮುಖಂಡರ ಸಹಕಾರ ಪಡೆಯಲಾಗುವುದು.
ಜೂನ್ 3ರಂದು ನಗರದ ವೆನ್ ಲಾಕ್ ನ ಆಸ್ಪತ್ರೆಯ ಆರ್ ಎ ಪಿಸಿಸಿ ಯಲ್ಲಿ ಆರೋಗ್ಯ ಶಿಕ್ಷಣದ ಬಗ್ಗೆ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲರ ಸಭೆಯನ್ನು ಕರೆಯಲಾಗುವುದು. ಈ ಮೂಲಕ ವಿಶೇಷ ಆರೋಗ್ಯ ಜಾಗೃತಿ ಕಾರ್ಯಕ್ರಮದಲ್ಲಿ ನರ್ಸಿಂಗ್ ವಿದ್ಯಾರ್ಥಿಗಳ ಸಂಪೂರ್ಣ ಸಹಕಾರ ಪಡೆಯಲಾಗುವುದು.
ಎಲ್ಲ ಸಮುದಾಯ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸಿ ಡಿಗಳ ಮೂಲಕ ಆರೋಗ್ಯ ಮಾಹಿತಿ ನೀಡಲಾಗುವುದು ಎಂದು ಡಿಎಚ್ ಒ ಹೇಳಿದರು.ಜೂನ್ 10ರಿಂದ 15ರವರೆಗೆ ಎಎನ್ ಎಂ, ಅಂಗನವಾಡಿ, ಆಶಾ ಕಾರ್ಯಕರ್ತೆಯರ ನೆರವಿನಿಂದ ಮನೆ ಮನೆ ಭೇಟಿ ಮೂಲಕ ಮಾಹಿತಿ ನೀಡಲಾಗುವುದು.
ಎಲ್ಲ ತಾಲೂಕುಗಳಲ್ಲಿ ತಹಸೀಲ್ದಾರ್, ಕಾರ್ಯನಿರ್ವಾಹಕ ಅಧಿಕಾರಿ, ತಾಲೂಕು ವೈದ್ಯಾಧಿಕಾರಿ, ಸಿಡಿಪಿಒ, ಬಿಇಒ ಇವರನ್ನು ಸದಸ್ಯರನ್ನಾಗಿಸಿ ಟಾಸ್ಕ್ ಫೋರ್ಸ್  ರಚಿಸಲಾಗುವುದು. ಗ್ರಾಮಮಟ್ಟದಲ್ಲಿ ಪಿಡಿಒಗಳು ಹಾಗೂ ತಾಲೂಕು ವೈದ್ಯಾಧಿಕಾರಿ ಹಾಗೂ ಹಿರಿಯ ಆರೋಗ್ಯ ಸಹಾಯಕರಮ ಸಭೆ ಕರೆದು ಗ್ರಾಮ ನೈರ್ಮಲ್ಯಕ್ಕೆ ಒತ್ತು ನೀಡಲು, ಸ್ವಚ್ಛತೆಯನ್ನು ಪಾಲಿಸಲು ನಿರ್ದೇಶನ ನೀಡಲಾಗುವುದು ಎಂದು ಜಿಲ್ಲಾ ವೈದ್ಯಾಧಿಕಾರಿಗಳು ಹೇಳಿದರು.