Monday, May 20, 2013

ವಿಶೇಷ ವಸತಿ ಯೋಜನೆಯಡಿ 38 ಅರ್ಹ ಫಲಾನುಭವಿಗಳ ಆಯ್ಕೆ

ಮಂಗಳೂರು ಮೇ 20: : ಸರ್ಕಾರದ ನಿರ್ದೇಶನದಂತೆ ವಿಶೇಷ ವರ್ಗಕ್ಕೆ ಸೇರಿದ ಫಲಾನುಭವಿಗಳ ಆಯ್ಕೆ ಮತ್ತು ಕಾರ್ಯಕ್ರಮ ಅನುಷ್ಠಾನಕ್ಕೆ ಸಂಬಂಧಿಸಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ 36 ಫಲಾನುಭವಿಗಳು ಹಾಗೂ ಇಬ್ಬರು ಮಂಗಳೂರು ತಾಲೂಕಿನ ಫಲಾನುಭವಿಗಳಿಗೆ ವಸತಿಗಳನ್ನು ಮಂಜೂರು ಮಾಡಲಾಯಿತು.
ಈ ಸಂಬಂಧ ಇಂದು ಜಿಲ್ಲಾಧಿಕಾರಿ  ಎನ್ ಪ್ರಕಾಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಬಡತನ ರೇಖೆಗಿಂತ ಕೆಳಗಿರುವ ಮತ್ತು ಯಾವುದೇ ಯೋಜನೆಗಳಡಿ ಮನೆ ಪಡೆದಿಲ್ಲದಿರುವ ಜಿಲ್ಲಾ ಮಟ್ಟದ ಸಮಿತಿ ತಯಾರಿಸಿದ ಪಟ್ಟಿಯನ್ನು ಪರಿಶೀಲಿಸಿದ ಜಿಲ್ಲಾಧಿಕಾರಿಗಳು, ಫಲಾನುಭವಿಗಳ ಆಯ್ಕೆಗೆ ಅನುಮೋದನೆ ನೀಡಿದರು.
ಈ ವಿಶೇಷ ವರ್ಗದಡಿ ಬಸವ ವಸತಿ ಯೋಜನೆ, ಆಶ್ರಯ, ಅಂಬೇಡ್ಕರ್ ಮುಂತಾದ ವಸತಿ ಯೋಜನೆಯಡಿ ಮನೆ ಪಡೆಯದ ಫಲಾನುಭವಿಗಳಿಗೆ ಆದ್ಯತೆ ನೀಡಲಾಗುವುದು. ಅಂಗವಿಕಲರು, ಕುಷ್ಟರೋಗದಿಂದ ಗುಣಮುಖರಾದವರು, ಅರಣ್ಯ ಪ್ರದೇಶದಿಂದ ಹಾಗೂ ಅತಿಕ್ರಮಣದಿಂದ ತೆರವುಗೊಳಿಸಲಾದ ನಿರಾಶ್ರಿತರು, ಪ್ರವಾಹ ಪೀಡಿತರು, ದೇವದಾಸಿಯರು, ಇತರೆ ದೌರ್ಜನ್ಯಕ್ಕೊಳಗಾದ ಮಹಿಳೆಯರು, ಅಂಗನವಾಡಿ ಕಾರ್ಯಕರ್ತೆಯರು, ಗಲಭೆಗಳಿಂದ ಸಂತ್ರಸ್ತರು, ನೇಕಾರರು, ಹಮಾಲರು, ಬೀಡಿ ಕಾರ್ಮಿಕರು ಹಾಗೂ ಕುಶಲಕರ್ಮಿಗಳು ಇವರಿಗೆ ರಾಜೀವ್ ಗಾಂಧಿ ವಸತಿ ನಿಗಮದಿಮದ ಮನೆ ನಿರ್ಮಿಸಿಕೊಡಲಾಗುವುದು.
ಇದೇ ಸಭೆಯಲ್ಲಿ ಕೊರಗರಿಗೆ ಮನೆ ನೀಡುವ ಬಗ್ಗೆ, ಘನತ್ಯಾಜ್ಯ ವಿಲೇಗೆ ಜಾಗ ಕಾಯ್ದಿರಿಸುವ ಬಗ್ಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ ಕೆ ಎನ್ ವಿಜಯಪ್ರಕಾಶ್ ಅವರು ಸಭೆಯಲ್ಲಿ ಪ್ರಸ್ತಾಪಿಸಿದರು. ಮುಂದಿನ ಕಂದಾಯ ಅಧಿಕಾರಿಗಳ ಸಭೆಯಲ್ಲಿ ಆದ್ಯತೆಯ ಮೇರೆಗೆ ಈ ವಿಷಯವನ್ನು ಪ್ರಸ್ತಾಪಿಸಲು ಜಿಲ್ಲಾಧಿಕಾರಿಗಳು ಹೇಳಿದರು.
ಅಪರ ಜಿಲ್ಲಾಧಿಕಾರಿ ದಯಾನಂದ ಕೆ ಎ., ಮುಖ್ಯ ಯೋಜನಾಧಿಕಾರಿ ನಝೀರ್, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಅರುಣ್ ಫುರ್ಟಾಡೋ, ಪಾಲಿಕೆ ಆರೋಗ್ಯಾಧಿಕಾರಿ ಡಾ ಸುದರ್ಶನ್ ಸಭೆಯಲ್ಲಿ ಪಾಲ್ಗೊಂಡಿದ್ದರು.