Saturday, May 4, 2013

ಜಿಲ್ಲೆಯಲ್ಲಿ 163 ಅತೀ ಸೂಕ್ಷ್ಮ ಮತಗಟ್ಟೆಗಳು


ಮಂಗಳೂರು,ಮೇ.4:-  ದಕ್ಷಿಣಕನ್ನಡ ಜಿಲ್ಲೆಯಲ್ಲಿ ಮೇ 5 ರಂದು ನಡೆಯುತ್ತಿರುವ ವಿಧಾನಸಭಾ ಚುನಾವಣೆಯಲ್ಲಿ 8 ವಿಧಾನಸಭಾ ಕ್ಷೇತ್ರಗಳಲ್ಲಿ 88 ಅಕ್ಷಿಲರಿ ಮತಗಟ್ಟೆಗಳು ಸೇರಿದಂತೆ ಒಟ್ಟು 1715 ಮತಗಟ್ಟೆಗಳು ಇರುತ್ತವೆ. ಇವುಗಳಲ್ಲಿ 325 ಸೂಕ್ಷ್ಮ ಮತಗಟ್ಟೆಗಳು 163 ಅತೀ ಸೂಕ್ಷ್ಮ ಮತಗಟ್ಟೆಗಳು ಹಾಗೂ 61 ಮತಗಟ್ಟೆಗಳು ನಕ್ಸಲ್ ಬಾಧಿತ ಪ್ರದೇಶದಲ್ಲಿ  ಇರುತ್ತವೆ. 1166 ಸಾಮಾನ್ಯ ಮತಗಟ್ಟೆಗಳಿದ್ದು ಎಲ್ಲಾ ಮತಗಟ್ಟೆಗಳಲ್ಲಿ ಜಿಲ್ಲಾಡಳಿತ ಮುಕ್ತ ಹಾಗೂ ನಿರ್ಭೀತ ಮತದಾನಕ್ಕೆ ಸರ್ವ ವ್ಯವಸ್ಥೆಯನ್ನು ಮಾಡಲಾಗಿದೆ.  ಮಂಗಳೂರು ನಗರದಲ್ಲಿ  ಅತೀ ಹೆಚ್ಚು ಅಂದರೆ 53 ಸೂಕ್ಷ್ಮ ಮತಗಟ್ಟೆಗಳು ಮತ್ತು 38 ಅತೀ ಸೂಕ್ಷ್ಮ ಮತಗಟ್ಟೆಗಳು ಇರುತ್ತವೆ.  ಅತೀ ಕಡಿಮೆ ಅಂದರೆ 28 ಸೂಕ್ಷ್ಮ ಮತಗಟ್ಟೆಗಳು ಮತ್ತು 7 ಅತೀ ಸೂಕ್ಷ್ಮ ಮತಗಟ್ಟೆಗಳು ಮೂಡಬಿದ್ರೆ ಕ್ಷೇತ್ರದಲ್ಲಿರುತ್ತವೆ.
 ಮತದಾನ ಅವಧಿ ಒಂದು ಗಂಟೆ ವಿಸ್ತರಣೆ
 ಭಾರತ ಚುನಾವಣಾ ಆಯೋಗವು ಮೇ 5 ರಂದು ಕರ್ನಾಟಕ ವಿಧಾನಸಭೆಗೆ ನಡೆಯುತ್ತಿರುವ ಸಾರ್ವತ್ರಿಕ ಚುನಾವಣಾ ವೇಳೆಯನ್ನು ಒಂದು ಗಂಟೆ ಕಾಲ ಹೆಚ್ಚುವರಿಯಾಗಿ ವಿಸ್ತರಿಸಿ ಆದೇಶ ಹೊರಡಿಸಿದೆ. ಈ ಆದೇಶದಂತೆ ಅಂದು ಬೆಳಿಗ್ಗೆ 7 ಗಂಟೆಯಿಂದ ಸಾಯಂಕಾಲ 6 ಗಂಟೆ ವರೆಗೆ ಮತದಾನದ ಅವಧಿಯಾಗಿರುತ್ತದೆಯೆಂದು ಜಿಲ್ಲಾ ಚುನಾವಣಾಧಿಕಾರಿ/ಜಿಲ್ಲಾಧಿಕಾರಿ  ಹರ್ಷಗುಪ್ತ ಅವರು ತಿಳಿಸಿರುತ್ತಾರೆ.