Thursday, May 23, 2013

ಮಲೇರಿಯಾ ತಡೆಗೆ ಪಾಲಿಕೆಯಿಂದ ಮುನ್ನೆಚ್ಚರಿಕೆ

ಮಂಗಳೂರು, ಮೇ 23 : ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಮಲೇರಿಯಾ ನಿಯಂತ್ರಿಸಲು ಹಾಗೂ ಮಲೇರಿಯಾ ತಡೆಗೆ ಸೂಕ್ತ ಮುನ್ನೆಚ್ಚರಿಕೆ ವಹಿಸಲು ಜಾಗೃತಿ ಕಾರ್ಯಕ್ರಮ ನಡೆಸಲು ಜಿಲ್ಲಾಧಿಕಾರಿ  ಎನ್ ಪ್ರಕಾಶ್ ಅವರ ಅಧ್ಯಕ್ಷತೆಯಲ್ಲಿ  ವಿಶೇಷ ಸಭೆ ಬುಧವಾರ ನಡೆಯಿತು.
ಜೂನ್ ತಿಂಗಳಲ್ಲಿ ಮಲೇರಿಯಾ ವಿರೋಧಿ ಮಾಸಾಚರಣೆ ನಡೆಸಲು ಹಾಗೂ ಬಳಿಕ ನಗರದ ನರ್ಸಿಂ ಗ್ ಕಾಲೇಜುಗಳ ಸಹಕಾರದಿಂದ ಸಮೀಕ್ಷೆ ನಡೆಸಲು, ಪಾಲಿಕೆಯಲ್ಲಿ ಸಿಬ್ಬಂದಿ ಕೊರತೆ ಇರುವುದರಿಂದ ಹೊರಗುತ್ತಿಗೆ ಆಧಾರದಲ್ಲಿ ಸಿಬ್ಬಂದಿ ನೇಮಿಸಲು ಜಿಲ್ಲಾಧಿಕಾರಿಗಳು ಆದೇಶ ನೀಡಿದರು.
ಕಟ್ಟಡ ಕಾಮಗಾರಿ ಹಾಗೂ ಕಾರ್ಮಿಕರ ಆರೋಗ್ಯ ನಿರ್ವಹಣೆ ಜವಾಬ್ದಾರಿ ಗುತ್ತಿಗೆದಾರರಿಗೆ ವಹಿಸಲು ನಿರ್ಧರಿಸಲಾಯಿತು. ಸಭೆಯಲ್ಲಿ ಪಾಲಿಕೆ ಆಯುಕ್ತರು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ, ಜಿಲ್ಲಾ ಮಲೇರಿಯಾ ಅಧಿಕಾರಿ, ಆರೋಗ್ಯಾಧಿಕಾರಿ, ಪರಿಸರ ಅಭಿಯಂತರರು ಉಪಸ್ಥಿತರಿದ್ದರು.