Wednesday, May 29, 2013

ಜೂನ್ 15 ರಿಂದ ಅಗೋಸ್ತು 10 ರ ವರೆಗೆ ಮೀನುಗಾರಿಕೆ ನಿಷೇಧ


ಮಂಗಳೂರು, ಮೇ. 29: ಯಾಂತ್ರೀಕೃತ ಮೀನುಗಾರಿಕೆ ದೋಣಿಗಳನ್ನು ಬಳಸಿ ಯಾವುದೇ ಬಲೆಗಳನ್ನು/ಸಾಧನಗಳನ್ನು ಉಪಯೋಗಿಸಿ ಕರ್ನಾಟಕ ಕರಾವಳಿ ದಕ್ಷಿಣಕನ್ನಡ ಹಾಗೂ ಉಡುಪಿ ಜಿಲ್ಲೆಯ ಕರಾವಳಿಯಲ್ಲಿ ಪ್ರತೀ ವರ್ಷ ಮಳೆಗಾಲದ ಜೂನ್ 15 ರಿಂದ ಅಗೋಸ್ತು 10 ರ ವರೆಗೆ ಒಟ್ಟು 57 ದಿನಗಳ ಕಾಲ ಮೀನು ಹಿಡಿಯುವುದನ್ನು ಕರ್ನಾಟಕ ಸರ್ಕಾರವು ನಿಷೇಧಿಸಿದೆ. ನಿಷೇಧಿತ ಅವಧಿಯಲ್ಲಿ ಆಳಸಮುದ್ರ ಬಹುದಿನಗಳ ಮೀನುಗಾರಿಕೆ ದೋಣಿಗಳು ಅಗೋಸ್ತು 3 ರಿಂದ ಕರಾವಳಿ ಮೀನುಗಾರಿಕೆಗೆ ತೆರಳಲು ಅನುಮತಿಸಿದ್ದು,  ಸದ್ರಿ ದೋಣಿಗಳು ಹಿಡಿದ ಮೀನನ್ನು ಇಳಿಸಲು ಅಗೋಸ್ತು 10 ರ ನಂತರವೇ ಬಂದರುಗಳಿಗೆ ಹಿಂತಿರುಗತಕ್ಕದೆಂಬ ನಿಬಂಧನೆಯ ಮೇರೆಗೆ ಅನುಮತಿ ನೀಡಲಾಗಿದೆ. ಮೀನುಗಾರಿಕೆ ನಿಷೇಧಿತ ಅವಧಿಯಲ್ಲಿ ಕೇವಲ ದೋಣಿಗಳ ಚಲನವಲನಕ್ಕಾಗಿ 10 ಅಶ್ವಶಕ್ತಿ ವರೆಗಿನ ಔಟ್ ಬೋರ್ಡ್  ಇಂಜಿನ್ ಗಳನ್ನು ಅಳವಡಿಸಿದ ಅಥವಾ ಅಳವಡಿಸದೇ ಇರುವ ನಾಡದೋಣಿಗಳ ಮೂಲಕ ಸಮುದ್ರ ಮೀನುಗಾರಿಕೆಯಲ್ಲಿ ತೊಡಗಲು ಅನುಮತಿ ನೀಡಲಾಗಿದೆ. ನಿಷೇಧಿತ ಅವಧಿಯಲ್ಲಿ ಮೀನುಗಾರಿಕೆಗೆ ತೆರಳಿದ್ದಲ್ಲಿ ವಿಧಿಸಲಾಗಿರುವ ದಂಡನೆಗಳಿಗೆ ಹೊಣೆಯಾಗುತ್ತಾರೆಂದು ಮೀನುಗಾರಿಕೆ ಉಪನಿರ್ದೇಶಕರು ತಿಳಿಸಿರುತ್ತಾರೆ.