Saturday, May 18, 2013

ಜೂನ್ 1 ರಿಂದ 30 ರ ವರೆಗೆ ಜಿಲ್ಲೆಯಲ್ಲಿ ಆರ್ಥಿಕ ಗಣತಿ ಸಾರ್ವಜನಿಕರು ಸಹಕರಿಸಲು ಜಿಲ್ಲಾಧಿಕಾರಿ ವಿನಂತಿ

ಮಂಗಳೂರು, ಮೇ.18: ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ವಿವಿಧ ಸಾಮಾಜಿಕ ಹಾಗೂ ಆರ್ಥಿಕ ಯೋಜನೆಗಳ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಪ್ರತೀ ಬಾರಿಯಂತೆ ಈ ಸಲವೂ 6 ನೇ ಆರ್ಥಿಕ ಗಣತಿ 2012-13 ನ್ನು ದಕ್ಷಿಣಕನ್ನಡ ಜಿಲ್ಲೆಯಲ್ಲಿ ಜೂನ್ 1 ರಿಂದ 30 ರ ವರೆಗೆ ಹಮ್ಮಿಕೊಳ್ಳಲಾಗಿದ್ದು, ಈ ಅವಧಿಯಲ್ಲಿ ಮನೆಮನೆಗೆ ಭೇಟಿ ನೀಡಲಿರುವ ಗಣತಿದಾರರಿಗೆ ಸಮರ್ಪಕ ಮಾಹಿತಿಯನ್ನು ನೀಡುವ ಮೂಲಕ ಸಹಕಾರ ನೀಡಬೇಕೆಂದು ದಕ್ಷಿಣಕನ್ನಡ ಜಿಲ್ಲಾಧಿಕಾರಿಗಳು ಹಾಗೂ 6ನೇ ಆರ್ಥಿಕ ಗಣತಿಯ  ಜಿಲ್ಲಾಧ್ಯಕ್ಷರಾದ ಎನ್.ಪ್ರಕಾಶ್ ರವರು ಸಾರ್ವಜನಿಕರಲ್ಲಿ ವಿನಂತಿಸಿದ್ದಾರೆ.
           ಅವರು ಇಂದು ತಮ್ಮ ಕಚೇರಿಯಲ್ಲಿ ನಡೆದ 6ನೇ ಆರ್ಥಿಕ ಗಣತಿಯ ಜಿಲ್ಲಾ ಮಟ್ಟದ ಉಸ್ತುವಾರಿ ಸಮಿತಿ ಸಭೆ ಹಾಗೂ ಗಣತಿದಾರರಿಗೆ ಮತ್ತು ಮೇಲ್ವಿಚಾರಕರಿಗೆ ಆಯೋಜಿಸಿದ್ದ ತರಬೇತಿಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈ ಆರ್ಥಿಕ ಗಣತಿಯು ಅತ್ಯಂತ ಮುಖ್ಯ ಗಣತಿಯಾಗಿದ್ದು, ಇದರಲ್ಲಿ ತೊಡಗಿಸಿಕೊಳ್ಳುವ ಎಲ್ಲಾ ಅಧಿಕಾರಿಗಳು ನಿಷ್ಠೆ ಹಾಗೂ ಪ್ರಾಮಾಣಿಕತೆಯಿಂದ ಮೊದಲ ಆದ್ಯತೆಯಾಗಿ ಕರ್ತವ್ಯ ನಿರ್ವಹಿಸಬೇಕೆಂದು  ಅಧಿಕಾರಿಗಳಿಗೆ ಕಿವಿಮಾತು ಹೇಳಿದರು.
ದಕ್ಷಿಣಕನ್ನಡ ಜಿಲ್ಲೆಯಲ್ಲಿ  ಮಂಗಳೂರು ನಗರ ಬಂಟ್ವಾಳ, ಪುತ್ತೂರು,ಬೆಳ್ತಂಗಡಿ,ಉಳ್ಳಾಲ ಮುಂತಾದೆಡೆಗಳ ವ್ಯಾಪ್ತಿಯಲ್ಲಿ ಆಥರ್ಿಕ ಗಣತಿ ಕಾರ್ಯ ನಡೆಯಲಿದೆ. ಯಾವುದೇ ತೆರನಾದ ಉತ್ಪಾದಕತೆಯ ಲಾಭಾಂಶ ತರುವ ಆಥರ್ಿಕ ಚಟುವಟಿಕೆಯನ್ನು ನಡೆಸುತ್ತಿರುವವರ ಕುಟುಂಬಗಳ ಮಾಹಿತಿಯನ್ನು ಈ ಗಣತಿ ಕಾರ್ಯದಲ್ಲಿ ಸಂಗ್ರಹಿಸಬೇಕಾಗಿದೆ. ಆದರೆ ಅನಧಿಕೃತವಾಗಿ ನಡೆಯುವ ಜೂಜು,ಇತರೇ ಚಟುವಟಿಕೆಗಳು ಈ ಗಣತಿಯ ವ್ಯಾಪ್ತಿಯಿಂದ ಹೊರತಾಗಿರುತ್ತದೆ. ವಕೀಲಿ ವೃತ್ತಿ,ವೈದ್ಯಕೀಯ ವೃತ್ತಿ, ತೆರಿಗೆ ಸಲಹೆಗಾರರು ಇನ್ನು ಮುಂತಾದ ವೃತ್ತಿಗಳ ಅವಲಂಬಿತರುಈ ಗಣತಿಯ ವ್ಯಾಪ್ತಿಗೆ ಒಳಪಡುತ್ತಾರೆ.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಕೆ.ಎನ್.ವಿಜಯಪ್ರಕಾಶ್,ಮಂಗಳೂರು ಮಹಾನಗರಪಾಲಿಕೆಯ ಆಯುಕ್ತರು ಹಾಗೂ ಆರ್ಥಿಕ ಗಣತಿ ಜಿಲ್ಲಾ ಆಯುಕ್ತರಾದ ಡಾ. ಹರೀಶ್ ಕುಮಾರ್. ಆರ್ಥಿಕ ಗಣತಿ ನೋಡಲ್ ಅಧಿಕಾರಿ ಹಾಗೂ ಜಿಲ್ಲಾ  ಸಂಖ್ಯಾ ಸಂಗ್ರಹಣಾಧಿಕಾರಿ ಪ್ರದೀಪ್ ಡಿ'ಸೋಜ ಉಪಸ್ಥಿತರಿದ್ದರು.