Saturday, May 18, 2013

ನಗರಪಾಲಿಕೆ ವ್ಯಾಪ್ತಿಯ ತೋಡುಗಳ ಹೂಳೆತ್ತುವ ಕಾರ್ಯ- ಜಿಲ್ಲಾಧಿಕಾರಿಗಳಿಂದ ಪರಿಶೀಲನೆ

ಮಂಗಳೂರು, ಮೇ. 18. :- ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಸುಮಾರು 180 ಕಿಲೋಮೀಟರ್ ಉದ್ದದ ಪ್ರಮುಖ ತೋಡುಗಳಿದ್ದು, ಇವುಗಳಲ್ಲಿ ತುಂಬಿರುವ ಹೂಳನ್ನು ಸ್ವಚ್ಛಗೊಳಿಸಿ ಮಳೆನೀರು ಸರಾಗವಾಗಿ ಹರಿಯುವಂತೆ ಮಾಡಲು ಪಾಲಿಕೆ ಕ್ರಮ ಕೈಗೊಂಡಿದೆ. ಈಗಾಗಲೇ 59 ಕಿಲೋಮೀಟರ್ ನಷ್ಟು ತೋಡುಗಳನ್ನು ರೂ.70.7 ಲಕ್ಷ ವೆಚ್ಚದಲ್ಲಿ ಹೂಳೆತ್ತುವ ಕಾರ್ಯ ಭರದಿಂದ ಸಾಗುತ್ತಿದ್ದು, ದಕ್ಷಿಣಕನ್ನಡ ಜಿಲ್ಲಾಧಿಕಾರಿ ಎನ್.ಪ್ರಕಾಶ್ ರವರು ಇಂದು ನಗರದ ಎಕ್ಕೂರು ಹಾಗೂ ಜೆಪ್ಪಿನಮೊಗರು ಸಮೀಪದ ತೋಡುಗಳ ಹೂಳೆತ್ತುವ ಕಾರ್ಯವನ್ನು ಪರಿಶೀಲಿಸಿ ಮಹಾನಗರಪಾಲಿಕೆ ಅಧಿಕಾರಿಗಳಿಗೆ ಸೂಕ್ತ ಸಲಹೆಗಳನ್ನು ನೀಡಿದರು.
 ತೋಡುಗಳಿಂದ ತೆಗೆಯಲಾದ  ಹೂಳನ್ನು ಕೂಡಲೇ ವಿಲೇವಾರಿ ಮಾಡಬೇಕೆಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದ ಜಿಲ್ಲಾಧಿಕಾರಿಗಳು ಹೂಳೆತ್ತುವ ಕಾರ್ಯವನ್ನು ಸಮರೋಪಾದಿಯಲ್ಲಿ ಕೈಗೊಳ್ಳಬೇಕೆಂದರು.
ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ 1.5 ಮೀಟರ್ ಗಿಂತಲೂ ಹೆಚ್ಚು ಎತ್ತರವಿರುವ ಸುಮಾರು 180 ಕಿಲೋಮೀಟರ್ ಉದ್ದದ 37 ಪ್ರಮುಖ ಚರಂಡಿಗಳಿವೆ ಹಾಗೂ 1800 ಕಿಲೋಮೀಟರ್ ಉದ್ದದ 1.5 ಮೀಟರ್ ಗಿಂತಲೂ ಕಡಿಮೆ ಎತ್ತರದ ಚರಂಡಿಗಳಿವೆ ಎಂದು ವಿವರ ನೀಡಿದ ಪಾಲಿಕೆ ಆಯುಕ್ತರಾದ ಡಾ.ಹರೀಶ್ ಕುಮಾರ್ರವರು ತೋಡುಗಳಲ್ಲಿನ ಹೂಳನ್ನು ತೆಗೆಯಲು ಈಗಾಗಲೇ 17 ಯಂತ್ರಗಳನ್ನು ಬಳಸಲಾಗುತ್ತಿದೆ ಹಾಗೂ 7 ಕಡೆಗಳಲ್ಲಿ ಯಂತ್ರಗಳಿಂದ ಕಾರ್ಯ ಸಾಧ್ಯವಿಲ್ಲದ ಕಾರಣ ಮಾನವರಿಂದ ಈ ಕಾರ್ಯವನ್ನು ಕೈಗೊಳ್ಳಲಾಗಿದೆಯೆಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಮಹಾನಗರಪಾಲಿಕೆಯ ಕಾರ್ಯ ಪಾಲಕ ಅಭಿಯಂತರರಾದ ಕೆ.ಎಂ.ಜಯಪ್ರಕಾಶ್, ರಾಜಶೇಖರ್, ಸಹಾಯಕ ಕಾರ್ಯಪಾಲಕ ಅಭಿಯಂತರರಾದ ನಿಂಗೇಗೌಡ ಹಾಗೂ ಸಹಾಯಕ ಅಭಿಯಂತರರಾದ ಗಣಪತಿಯವರು ಸ್ಥಳದಲ್ಲಿ ಹಾಜರಿದ್ದು ಕಾರ್ಯ ಪ್ರಗತಿಯ ಬಗ್ಗೆ ಜಿಲ್ಲಾಧಿಕಾರಿಗಳಿಗೆ ವಿವರಿಸಿದರು.