Monday, May 6, 2013

ದ.ಕ. ಮತ ಎಣಿಕೆಗೆ ಸಜ್ಜು: ಜಿಲ್ಲಾಧಿಕಾರಿ

ಮಂಗಳೂರು, ಮೇ 6: ದಕ್ಷಿಣ ಕನ್ನಡ  ಜಿಲ್ಲಾ 8 ವಿಧಾನಸಭೆಗಳ ಚುನಾವಣಾ ಫಲಿತಾಂಶ ಮೇ 8ರಂದು ನಡೆಸಲು ಜಿಲ್ಲಾಡಳಿತ ಸಜ್ಜಾಗಿದ್ದು ಅಂದು 11.30 ರ ಸುಮಾರಿಗೆ  ಫಲಿತಾಂಶ ಲಭ್ಯವಾಗಲಿದೆಎಂದು ದ.ಕ. ಜಿಲ್ಲಾಧಿಕಾರಿ ಹರ್ಷಗುಪ್ತಾ ಹೇಳಿದ್ದಾರೆ.
                 ಕೆನರಾ ಕಾಲೇ ಜಿನಲ್ಲಿ ಬೆಳಗ್ಗೆ 7  ಗಂಟೆಗೆ ಮತ ಎಣಿಕೆ ಪ್ರ ಕ್ರಿಯೆ ಆರಂಭ ಗೊಳ್ಳ ಲಿದ್ದು, ಪ್ರತಿ ಯೊಂದು ಕ್ಷೇತ್ರಕ್ಕೆ ತಲಾ ನಾಲ್ಕು ಟೇಬಲ್  ಗಳಲ್ಲಿ ಸುಪರ್ ವೈಸರ್, ಅಸಿಸ್ಟೆಂಟ್ ಹಾಗೂ ಮೈಕ್ರೋ ಒಬ್ಸರ್ವರ್ ನೇತೃತ್ವದಲ್ಲಿ  ಮತ ಎಣಿಕೆ ಕಾರ್ಯ ನಡೆಯಲಿದೆ. 15ರಿಂದ 17 ಸುತ್ತುಗಳಲ್ಲಿ ಮತ ಎಣಿಕೆ ನಡೆಯಲಿದ್ದು, ಆರಂಭದಲ್ಲಿ ಅಂಚೆ ಮತಗಳ ಎಣಿಕೆ ನಡೆಯಲಿದೆ. ಒಟ್ಟಿನಲ್ಲಿ ಮಧ್ಯಾಹ್ನ 11.30ರಿಂದ 12 ಗಂಟೆಯ ವೇಳೆಗೆ ಮತ ಎಣಿಕೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ ಎಂದು ಅವರು ಹೇಳಿದರು.
ಮತ ಎಣಿಕೆ ಕೇಂದ್ರದೊಳಗೆ ಅಭ್ಯರ್ಥಿ ಹಾಗೂ ಅಭ್ಯರ್ಥಿಪರವಾಗಿ ಏಜೆಂಟ್ ಭೇಟಿ ನೀಡಲು ಅವಕಾಶವಿದ್ದು, ಮೊಬೈಲ್ ನಿಷೇಧಿಸಲಾಗಿದೆ ಎಂದು ಅವರು ಹೇಳಿದರು.
ದ.ಕ.: ಶೇ. 74.48 ಮತದಾನ:
ದ.ಕ. ಜಿಲ್ಲೆಯಲ್ಲಿ ಅಂಚೆ ಮತ ಸೇರಿದಂತೆ ಒಟ್ಟು ಶೇ. 74.48 ಮತದಾನವಾಗಿದೆ.  15,01,024 ಮತದಾರರಲ್ಲಿ 11,18,025 ಮಂದಿ ಮತ ಚಲಾಯಿಸಿದ್ದಾರೆ.
ಮತಚಲಾವಣೆಯಲ್ಲಿ ಮಹಿಳೆಯರು ಮುಂದು!
ದ.ಕ. ಜಿಲ್ಲೆಯ ಪ್ರಸಕ್ತ ವಿಧಾನಸಭಾ ಚುನಾವಣೆಯಲ್ಲಿ ಮತ ಚಲಾವಣೆಯಲ್ಲಿ ಮಹಿಳಾ ಮತದಾರರೇ ಮುಂದಿದ್ದಾರೆ. 7,43,463 ಪುರುಷ ಮತದಾರರಲ್ಲಿ 5,54,544  ಮಂದಿ ಮತ ಚಲಾಯಿಸಿದ್ದರೆ, 7,57,561 ಮಹಿಳಾ ಮತದಾರರಲ್ಲಿ 5,63,481 ಮಂದಿ ಮತ ಚಲಾಯಿಸಿದ್ದಾರೆ.
81 ನೋಟಾ ಮತ ಚಲಾವಣೆ:
ಯಾವುದೇ ಅಭ್ಯರ್ಥಿಗಳಿಗೆ ಮತ ಚಲಾಯಿಸಲು ಮನಸ್ಸಿಲ್ಲದೆ ನೋಟಾ ಮತ ಚಲಾಯಿಸಿದರ ಸಂಖ್ಯೆ ಜಿಲ್ಲೆಯಲ್ಲಿ ಒಟ್ಟು 81. ಮೂಡಬಿದ್ರೆಯ ಮತಗಟ್ಟೆ ಸಂಖ್ಯೆ 155ರಲ್ಲಿ ಶೇ. 41.05 ಮತದಾನದ ಮೂಲಕ ಅತೀ ಕಡಿಮೆ ಮತದಾನವಾಗಿದೆ. ಮಂಗಳೂರು ಕ್ಷೇತ್ರದ ರಾಣಿಪುರ ಮುನ್ನೂರು ಮತಗಟ್ಟೆ ಸಂಖ್ಯೆ 38 (ಎ)ಯಲ್ಲಿ ಅತೀ ಹೆಚ್ಚು ಶೇ. 95.23 ಮತದಾನವಾಗಿದೆ ಎಂದು ಹರ್ಷಗುಪ್ತಾ ತಿಳಿಸಿದರು.
ವೆಬ್ ಕಾಸ್ಟಿಂಗ್ ಯಶಸ್ವಿ:
ಮಂಗಳೂರಿನ 208 ಕಂಡೆ ಸೇರಿದಂತೆ ದ.ಕ. ಜಿಲ್ಲೆಯ 272 ಮತಗಟ್ಟೆಗಳಲ್ಲಿ ಪ್ರಥಮ ಬಾರಿಗೆ ಪ್ರಾಯೋಗಿಕವಾಗಿ ಜಿಲ್ಲೆಯ ವಿವಿಧ ಇಂಜನಿಯರಿಂಗ್ ಕಾಲೇಜು ವಿದ್ಯಾರ್ಥಿಗಳ ಸಹಕಾರದಲ್ಲಿ ನಡೆಸಲಾದ ವೆಬ್ ಕಾಸ್ಟಿಂಗ್ ಯಶಸ್ವಿಯಾಗಿದೆ. ಕೆಲವೆಡೆ ವಿದ್ಯುಚ್ಛಕ್ತಿ ಕೈಕೊಟ್ಟು ಕೆಲ ಹೊತ್ತು ಈ ವ್ಯವಸ್ಥೆಗೆ ತಡೆಯಾಗಿದ್ದರೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಮತದಾರರಿಗೆ ಮತಗಟ್ಟೆಗಳಿಗೆ ತೆರಳಿ ಹಿಂತಿರುವ ನಿಟ್ಟಿನಲ್ಲಿ ಮಾಡಲಾದ ವಾಹನದ ವ್ಯವಸ್ಥೆಗೆ ನಿರೀಕ್ಷಿತ ಮಟ್ಟದಲ್ಲಿ ಯಶಸ್ವಿಯಾಗದಿದ್ದರೂ ಗ್ರಾಮಾಂತರ ಪ್ರದೇಶವಾದ ಸುಬ್ರಹ್ಮಣ್ಯ ಸೇರಿದಂತೆ ಹಲವು ಕಡೆಗಳಲ್ಲಿ ಮತದಾರರು ಈ ವ್ಯವಸ್ಥೆಯನ್ನು ಉಪಯೋಗಿಸಿಕೊಂಡಿದ್ದಾರೆ.
ಗ್ರಾಮಾಂತರ ಪ್ರದೇಶದಲ್ಲಿ ಸ್ವೀಪ್ ಯಶಸ್ವಿ:
ದ.ಕ. ಜಿಲ್ಲೆಯಲ್ಲಿ ಸ್ವೀಪ್ ಕಾರ್ಯಕ್ರಮ ಯಶಸ್ವಿಯಾಗಿಲ್ಲವಲ್ಲ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ನಗರ ಪ್ರದೇಶದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಸ್ವೀಪ್ ಕಾರ್ಯಕ್ರಮಕ್ಕೆ ಮನ್ನಣೆ ದೊರೆಯದಿದ್ದರೂ, ಗ್ರಾಮಾಂತರ ಪ್ರದೇಶಗಳಲ್ಲಿ ಈ ಕಾರ್ಯಕ್ರಮ ಸಾಕಷ್ಟು ಪರಿಣಾಮ ಬೀರಿದ್ದು, ಯಶಸ್ವಿಯಾಗಿದೆ ಎಂದು ಹೇಳಿದರು.
ಸ್ವೀಪ್ ಕಾರ್ಯಕ್ರಮಕ್ಕೆ ಕ್ಷೇತ್ರವೊಂದಕ್ಕೆ ತಲಾ 2.50 ಲಕ್ಷ ರೂ.ಗಳನ್ನು ಸರಕಾರ ನಿಗದಿಪಡಿಸಿತ್ತು. ಇದರಲ್ಲಿ 1.25 ಲಕ್ಷ ರೂ.ಗಳನ್ನು ಆಯಾ ಕ್ಷೇತ್ರದ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಿದ ಬಿಎಲ್ಒಗಳಿಗೆ ಪ್ರೋತ್ಸಾಹ ಧನವಾಗಿ ವಿತರಿಸಲು ತೀರ್ಮಾನಿಸಲಾಗಿದೆ ಎಂದು ಹರ್ಷಗುಪ್ತ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ದಯಾನಂದ, ಮಹಾನಗರ ಪಾಲಿಕೆ ಆಯುಕ್ತ ಹರೀಶ್ ಕುಮಾರ್ ಉಪಸ್ಥಿತರಿದ್ದರು.