Wednesday, May 1, 2013

ಚುನಾವಣಾ ಸಂಬಂಧಿ ಮಾಹಿತಿಗೆ dk.nic.inವೆಬ್ ಸೈಟ್ ವೀಕ್ಷಿಸಿ

ಮಂಗಳೂರು, ಮೇ.1 : ಜಿಲ್ಲೆಯಲ್ಲಿ ನ್ಯಾಯ ಸಮ್ಮತ ಹಾಗೂ ಮುಕ್ತ ಚುನಾವಣೆಗೆ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಕೈಗೊಂಡ ಕ್ರಮಗಳನ್ನು ಎಲ್ಲರೂ ವೀಕ್ಷಿಸಲು ಅನುಕೂಲವಾಗುವಂತೆ ಜಿಲ್ಲಾ ಚುನಾವಣಾಧಿಕಾರಿಗಳ ಕಚೇರಿಯಲ್ಲಿ dk.nic.in ವೆಬ್ ಸೈಟ್ ರೂಪಿಸಲಾಗಿದೆ.
ಇದುವರೆಗೆ ಜಿಲ್ಲಾಡಳಿತದಿಂದ ಸಭೆ ಸಮಾರಂಭಗಳಿಗೆ ನೀಡಿದ ಅನುಮತಿ, ವಾಹನಗಳಿಗೆ ನೀಡಿದ ಅನುಮತಿ ಹಾಗೂ ಮಾಧ್ಯಮಗಳಿಗೆ ನೀಡಿದ ಅನುಮತಿ ಹಾಗೂ ಅಭ್ಯರ್ಥಿಗಳು ನೀಡಿರುವ ಖರ್ಚು ವೆಚ್ಚದ ಮಾಹಿತಿಯನ್ನು ಇಲ್ಲಿಂದ ಪಡೆಯಬಹುದಾಗಿದೆ.
ಎಲ್ಲ ಮಾಹಿತಿಗಳು ಎಲ್ಲರಿಗೂ ಲಭ್ಯವಾಗಬೇಕೆನ್ನುವ ಉದ್ದೇಶದಿಂದ ಜಿಲ್ಲಾ ಚುನಾವಣಾಧಿಕಾರಿಗಳು ರೂಪಿಸಿರುವ ಈ ವೆಬ್ ಸೈಟ್ ನಲ್ಲಿ ಸಮಗ್ರ ಮಾಹಿತಿಗಳಿವೆ. ಇದುವರೆಗೆ ಒಟ್ಟು 223 ವಾಹನಗಳಿಗೆ ಸಂಬಂಧಿಸಿದ ಅರ್ಜಿಗಳನ್ನು ಸ್ವೀಕರಿಸಲಾಗಿದ್ದು ಅನುಮತಿ ನೀಡಲಾಗಿದೆ. ಸಭೆ ಸಮಾರಂಭಗಳಿಗೆ ಹಾಗೂ ರ್ಯಾಲಿಗಳಿಗೆ ಒಟ್ಟು 402 ಅರ್ಜಿಗಳು ಬಂದಿದ್ದು, ಅನುಮತಿಸಲಾಗಿದೆ.
ಪತ್ರಿಕೆ ಮತ್ತು ದೃಶ್ಯ ಮಾಧ್ಯಮಗಳಿಗೆ ಸಂಬಂಧಿಸಿದಂತೆ 210 ಅರ್ಜಿಗಳಿಗೆ ಅನುಮತಿ ನೀಡಲಾಗಿದೆ. ಪಾವತಿ ಸುದ್ದಿ ಮಾಹಿತಿಯು ಲಭ್ಯವಿದೆ. ಅಕೌಂಟ್ ರಿಜಿಸ್ಟರ್ ಆಫ್ ಕ್ಯಾಂಡಿಡೇಟ್ಸ್ನಡಿ ಕ್ಷೇತ್ರವಾರು ಪ್ರತೀ ಅಭ್ಯರ್ಥಿಗಳು ನೀಡಿದ ವಿವರ ಪಡೆಯಬಹುದೆಂದು ಜಿಲ್ಲಾ ಚುನಾವಣಾಧಿಕಾರಿ ಹರ್ಷಗುಪ್ತ ಅವರು ಹೇಳಿದ್ದಾರೆ.