Saturday, May 4, 2013

'ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಮತ್ತು ಮತದಾರನೇ ಸಾರ್ವಭೌಮ'

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಮತ್ತು ಮತದಾರನೇ  ಸಾರ್ವಭೌಮ. ಜನರಿಂದ, ಜನರಿಗಾಗಿ ಮತ್ತು ಜನರಿಗೋಸ್ಕರ ಇರುವ ವ್ಯವಸ್ಥೆಯಲ್ಲಿ ಮತದಾನ ಪ್ರತಿಯೊಬ್ಬ ಪ್ರಜೆಯ ಹಕ್ಕೂ ಹೌದು ಕರ್ತವ್ಯವೂ ಹೌದು. ಈ ನಿಟ್ಟಿನಲ್ಲಿ ಮತದಾರರ ಭಾಗ ವಹಿ ಸುವಿ ಕೆಯನ್ನು  ಪ್ರೋತ್ಸಾ ಹಿಸಲು ಪ್ರಸಕ್ತ ಸಾಲಿನ  ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ-2013 ರ ವೇಳೆ ಚುನಾವಣಾ ಆಯೋಗ SVEEP (Systematic Voters Education and Electoral Participation) ಕಾರ್ಯಕ್ರಮದ ಮೂಲಕ ವಿಶೇಷ ಆದ್ಯತೆ ನೀಡಿದ್ದು ಮತದಾನದ ಬಗ್ಗೆ ಪ್ರತಿಯೊಬ್ಬರೂ ಮರುಚಿಂತನೆ ಮಾಡುವ ಪ್ರೇರಣೆಯನ್ನು ಹುಟ್ಟು ಹಾಕಿದೆ.
 ಚುನಾವಣಾ ಆಯೋಗದ ನಿರ್ದೇಶನದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಗಳು  ಮತ್ತು ಚುನಾವಣಾಧಿಕಾರಿಗಳಾದ ಹರ್ಷಗುಪ್ತರವರ ನೇತೃತ್ವದಲ್ಲಿ  ಜಿಲ್ಲಾ ಪಂಚಾಯತ್  ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಸ್ವೀಪ್ ಕಾರ್ಯಕ್ರಮದ ಅಧ್ಯಕ್ಷರಾದ ಡಾ| ಕೆ.ಎನ್ ವಿಜಯಪ್ರಕಾಶ್, ನಗರ ಪೊಲೀಸ್ ಆಯುಕ್ತರಾದ ಮನೀಶ್ ಕರ್ಬಿಕರ್ ಹಾಗೂ ಜಿಲ್ಲಾ ಪೋಲಿಸ್ ವರೀಷ್ಠಾಧಿಕಾರಿಗಳಾದ ಅಭಿಷೇಕ್ ಗೋಯಲ್ ಅವರ ಮಾರ್ಗದರ್ಶನದಲ್ಲಿ ಈ   ಬಾರಿಯ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಮತದಾನದ ಪ್ರಮಾಣವನ್ನು ಹೆಚ್ಚಿಸುವ ಮೂಲ ಉದ್ದೇಶದೊಂದಿಗೆ ಜಿಲ್ಲೆಯ ವಾತಾವರಣಕ್ಕೆ ಪೂರಕವಾಗಿ ಹಲವು ವಿಶೇಷ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವ ಮೂಲಕ ಸ್ವೀಪ್ ಕಾರ್ಯಕ್ರಮವನ್ನು ಜಿಲ್ಲೆಯಾದ್ಯಂತ ವಿಶೇಷವಾಗಿ ದೂರ ಹಾಗೂ ದುರ್ಗಮ ಪ್ರದೇಶದ ಜನಮನದಲ್ಲಿ ಪ್ರಸಾರಣಗೊಳ್ಳುವ ಪ್ರಯತ್ನವನ್ನು ಮಾಡಿದೆ.  ಈ ಎಲ್ಲಾ ಪ್ರಯತ್ನವನ್ನು ವಿವಿಧ ಮಾಧ್ಯಮಗಳ ಮೂಲಕ ತಲುಪುವ ವಿನೂತನ ಪ್ರಯತ್ನ ನಮ್ಮ ಜಿಲ್ಲೆಯಲ್ಲಿ ನಡೆದಿದೆ.  ಈ ಜಾಗೃತಿ ಪ್ರಕ್ರಿಯೆಗೆ ಗ್ರಾಮ ಮಟ್ಟದಲ್ಲಿ ಬಿಎಲ್ಒಗಳ ನೆರವು ಹಾಗೂ ಅವರಿಗೆ ಉತ್ತಮವಾಗಿ ಕರ್ತವ್ಯವನ್ನು ನಿರ್ವಹಿಸಿದ ಹಾಗೂ ಅತ್ಯಧಿಕ ಮತದಾನವಾದಲ್ಲಿ ಬಹುಮಾನ ನೀಡುವ ಯೋಜನೆಯನ್ನು ದ.ಕ ಜಿಲ್ಲಾಧಿಕಾರಿಯವರು ಪ್ರಕಟಿಸಿರುತ್ತಾರೆ. ಸ್ವೀಪ್ ಕಾರ್ಯಕ್ರಮವನ್ನು 3 ಹಂತಗಳಲ್ಲಿ ಅನುಷ್ಠಾನಗೊಳಿಸಿದೆ.ಪ್ರಥಮವಾಗಿ ಮತದಾರದ ನೋಂದಾವಣೆ ಆಂದೋಲನ, ನೈತಿಕ ಮತದಾನದ ಜಾಗೃತಿ ಆಂದೋಲನ, ಮೂರನೆಯದಾಗಿ ಸಂಪೂರ್ಣ ಮತದಾನದ ಬಗ್ಗೆ ಪ್ರೇರೇಪಣಾ ಆಂದೋಲನ.


 ಸ್ವೀಪ್ ಯೋಜನೆಯನ್ನು ದ.ಕ ಜಿಲ್ಲೆಯಲ್ಲಿ ಯಕ್ಷಗಾನ, ಮೈಮ್ ಶೋ, ಪಂಚಭಾಷಾ ಹಾಡು, ಮಾಸ್ಕಟ್(ಬಾಬಣ್ಣ), ಭಿತ್ತಿ ಚಿತ್ರಗಳು, ಕರ ಪತ್ರ, ಜಾಥಾ, ಬೈಕ್ ರಾಲಿ, ಮನೆ ಮನೆ ಭೇಟಿ, ಮಾನವ ಸರಪಳಿ, ಕಡಲ ಕಿನಾರೆಯಲ್ಲಿ ಗಾಳಿಪಟ ಹಾರಿಸುವುದರ ಮೂಲಕ ಮತ್ತು ಮತದಾನದ ಅರಿವಿನ ಬೆಳಕನ್ನು ಹಚ್ಚುವುದರ ಮೂಲಕ ಜಿಲ್ಲೆಯಾದ್ಯಂತ ಕರಾವಳಿಯ ತೀರ ಪ್ರದೇಶ, ದೂರ, ದುರ್ಗಮ, ನಗರ  ಹಾಗೂ ಗಡಿನಾಡು ಪ್ರದೇಶಗಳ ಉದ್ದಕ್ಕೂ   ಮತದಾರರಲ್ಲಿ ಮತದಾನದ ಜಾಗೃತಿಯ ಅರಿವಿನ ಭಾವನೆಯನ್ನು ಹುಟ್ಟು ಹಾಕುವ ಪ್ರಯತ್ನವನ್ನು ಜಿಲ್ಲಾಡಳಿತ ಎಲ್ಲಾ ಇಲಾಖೆಗಳ ಹಾಗೂ ಸಂಘಸಂಸ್ಥೆಗಳ ಸಹಕಾರದೊಂದಿಗೆ ಹಮ್ಮಿಕೊಂಡಿದೆ.

ಮೈಮ್ ಷೋ: ಮತದಾನದ ಬಗ್ಗೆ ಮತದಾರರನ್ನು ಆಕರ್ಷಿಸಲು  ಮೈಮ್ ಷೋ  ನಿರೂಪಿಸಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ವಿಶಿಷ್ಟ ಮೂಕಾಭಿನಯದ ಮೂಲಕ ಜಾಗೃತಿ ಮೂಡಿಸುವಲ್ಲಿ ವಹಿಸಿದ ಪಾತ್ರ ಗಮನೀಯ. ಈ ಪ್ರಯತ್ನವನ್ನು ಚುನಾವಣಾ ಆಯೋಗವೂ ಶ್ಲಾಘಿಸಿದೆ. ಭಾಷೆ, ಗಡಿಗಳ ವ್ಯಾಪ್ತಿಯಿಲ್ಲದೆ ಭಾವಾಭಿನಯ ಮತ್ತು ಅಂತಿಮವಾಗಿ ಅಕ್ಷರ ರೂಪದಲ್ಲಿ ನೀಡಿದ ನೈತಿಕ ಮತದಾನದ ಸಂದೇಶಗಳು  ಎಲ್ಲರ ಮೆಚ್ಚುಗೆ  ಹಾಗೂ ಗಮನವನ್ನು ಪಡೆಯಿತು. ಚುನಾವಣಾ ಆಯೋಗದ ಸ್ವೀಪ್ ಕಾರ್ಯಕ್ರಮದ  ವಿನೂತನ ಹಾಗೂ ವಿಶಿಷ್ಟ ಹೆಜ್ಜೆಗೆ ದಕ್ಷಿಣ ಕನ್ನಡ ಜಿಲ್ಲೆ ಮುನ್ನುಡಿಯನ್ನು  ಬರೆಯಿತು.

ಮಾಸ್ಕಟ್:-  ದಕ್ಷಿಣ ಕನ್ನಡ ಜಿಲ್ಲೆಯ ಇಂದಿನ ಮತ್ತು ಮುಂದಿನ ಎಲ್ಲಾ ಜಿಲ್ಲಾ ಕಾರ್ಯಕ್ರಮಗಳಿಗೆ  ಜಿಲ್ಲೆಯ  ಸಂಸ್ಕೃತಿಯನ್ನು ಪ್ರತಿಬಿಂಬಿಸುವ ವೈಶಿಷ್ಟ್ಯಪೂರ್ಣ ಪಾತ್ರ (ಒಚಿಛಿಠಣ) ವನ್ನು 'ಬಾಬಣ್ಣ' ಎಂಬ ಹೆಸರಿನೊಂದಿಗೆ ನಮೂದಿಸಿ ಬಾಬಣ್ಣನ ಮುಖಾಂತರ ಮತದಾನ ಮತ್ತು ನೈತಿಕ ಮತದಾನದ ಸಂದೇಶವನ್ನು ಪ್ರಚುರಪಡಿಸುವ ಬಿತ್ತಿಚಿತ್ರ,ವಿಡಿಯೋ ಕಮರ್ಷಿಯಲ್ಸ್, ಬ್ಯಾನರ್ಗಳು ಇತ್ಯಾದಿಗಳನ್ನು ಜಿಲ್ಲೆಯಾದ್ಯಂತ ಎಲ್ಲಾ ಮಾಧ್ಯಮಗಳಲ್ಲಿ ಪ್ರಚುರ ಪಡಿಸಿರುವುದು ವಿಶೇಷವಾಗಿದೆ.

ಪಂಚಭಾಷಾ ಹಾಡು:- ಸಾರ್ವಜನಿಕ ಶಿಕ್ಷಣ ಇಲಾಖೆಯ ಪ್ರಯತ್ನದಲ್ಲಿ ರೂಪುಗೊಂಡ ಚುನಾವಣಾ ಜಾಗೃತಿ ಪ್ರತಿಧ್ವನಿಸುವ  ಪಂಚಭಾಷೆಯಲ್ಲಿ ರೂಪಿಸಿದ ಹಾಡುಗಳು ಜನಮನ ಸೂರೆಗೊಂಡವು. ಸ್ಥಳೀಯ ಭಾಷೆಗಳಾದ ಕನ್ನಡ,ತುಳು, ಬ್ಯಾರಿ,ಹಿಂದಿ ಮತ್ತು  ಕೊಂಕಣಿ ಭಾಷೆಗಳನ್ನೊಳಗೊಂಡಂತೆ ಬಂದ ಹಾಡುಗಳು ಎಲ್ಲರನ್ನೂ ಸೆಳೆಯಿತು. ಜಿಲ್ಲೆಯ ಎಲ್ಲಾ ಇಲಾಖೆಗಳೊಂದಿಗೆ ಸಮನ್ವಯ ಮತ್ತು ಸಂವಹನ ಸಾಧಿಸಿ ಎಲ್ಲೆಡೆಯೂ ಮತದಾನದ ಮಹತ್ವ ಸಾರುವ ಹಾಡನ್ನು ಹಾಡುವ, ಅರಿಯುವ ಹಾಗೂ ಮಾಹಿತಿಯನ್ನು ಹಂಚುವ ಮೂಲಕ ಈ ಹಾಡು ಮತದಾನದ ಜಾಗೃತಿ ಮೂಡಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದೆ. ಶಿಕ್ಷಣ ಇಲಾಖೆಯ  ಪ್ರಮುಖ ಚಟುವಟಿಕೆಗಳಾದ 'ಮೀನಮೇಳ' ಮತ್ತು 'ಸಮುದಾಯದತ್ತ ಶಾಲೆ' ಕಾರ್ಯಕ್ರಮದ ಮೂಲಕ ವಿದ್ಯಾರ್ಥಿಗಳ ಪೋಷಕರಿಗೆ ಮತದಾನದ ಜಾಗೃತಿಯನ್ನು ಮೂಡಿಸುವ ಪ್ರಯತ್ನಿಸಲಾಗಿದೆ. 

ಯಕ್ಷಗಾನ: ದಕ್ಷಿಣ ಕನ್ನಡ ಜಿಲ್ಲೆಯು ಯಕ್ಷಗಾನ ಕಲೆಯ ತವರೂರು.. ಜಿಲ್ಲೆಯ ಕಲೆ ಮತ್ತು ಸಂಸ್ಕೃತಿಯನ್ನು ಬಿಂಬಿಸುವ ಯಕ್ಷಗಾನದ ಪ್ರದರ್ಶನವನ್ನು ನಗರದ ಮಾಲ್ಗಳಲ್ಲಿ ಆಯೋಜಿಸುವ ಮೂಲಕ ಮತದಾರರಲ್ಲಿ ಜಾಗೃತಿಯನ್ನು ಮೂಡಿಸುವ ಮುಂಚೂಣಿಯನ್ನು ಕಾಲೇಜು ವಿದ್ಯಾರ್ಥಿನಿಯರು ಮತ್ತು ವಿದ್ಯಾರ್ಥಿಗಳು  ವಹಿಸಿಕೊಂಡಿದ್ದರು .ಆ ಮೂಲಕ ಯುವ ಜನಾಂಗ ಹಾಗೂ ಇತರರಲ್ಲಿ ಮತದಾನ ಮಾಡುವ  ಪ್ರೇರಣೆಯನ್ನು ನೀಡಿದರು.  ಈ ಪ್ರದರ್ಶನದಲ್ಲಿ ರಾಜ್ಯದಲ್ಲಿ ಪರಿಣಾಮಕಾರಿ ಆಡಳಿತ ನೆಲೆಸಲು ನೈತಿಕ ಮತದಾನದ ಪ್ರಾಮುಖ್ಯತೆಯ ಸಂದೇಶದ ಪರಿಕಲ್ಪನೆಯನ್ನು  ಸಾರಲಾಯಿತು. ಈ ಯಕ್ಷಗಾನದ ಸಿಡಿಗಳನ್ನು ಸ್ಥಳೀಯ ಚಾನೆಲ್ ಗಳಲ್ಲಿ, ಸಾರಿಗೆ ಬಸ್ ಗಳಲ್ಲಿ, ಪ್ರಾಥಮಿಕ ಆರೋಗ್ಯಕೇಂದ್ರಗಳಲ್ಲಿ, ಶಿಕ್ಷಣ ಸಂಸ್ಥೆಗಳ ಮೂಲಕ ಮತದಾರರನ್ನು ತಲುಪುವ ಕ್ರಮ ಕೈಗೊಳ್ಳಲಾಯಿತು.
    
ಕಡಲ ಕಿನಾರೆಯಲ್ಲಿ ಜಾಗೃತಿ ವಿಹಾರ: ದಕ್ಷಿಣ ಕನ್ನಡ ಜಿಲ್ಲಾಡಳಿತ ಹಾಗೂ ಪಣಂಬೂರು ಕಡಲತೀರ ಅಭಿವೃದ್ದಿ ನಿಗಮದ ಸಹಯೋಗದಲ್ಲಿ ಮಕ್ಕಳಲ್ಲಿ ಮತದಾನದ ಅರಿವು ಮೂಡಿಸುವ ಕಾರ್ಯಕ್ರಮ ಹಾಗೂ ಸುಮಾರು 2,000 ಜನ ಪ್ರವಾಸಿಗರ ಹಾಗೂ ಸ್ಥಳೀಯ ಜನರ ಗಮನವನ್ನು ಮತದಾನದ  ಜಾಗೃತಿಯ ಗಾಳಿಪಟವನ್ನು ಜಿಲ್ಲಾಧಿಕಾರಿಯವರು ಆಗಸದೆತ್ತರಕ್ಕೆ ಹಾರಿಸುವ  ಮೂಲಕ  ಆಕಷರ್ಿಸಲಾಯಿತು. ಕಾರ್ಯಕ್ರಮದ ಮಧ್ಯೆ ಮತದಾನದ ಅರಿವಿನ ಪಂಚಭಾಷಾ ಹಾಡನ್ನು ಬಿತ್ತರಿಸಲಾಯಿತು. ದಕ್ಕೆಯಲ್ಲಿ ಮೀನುಗಾರರನ್ನು ಪ್ರೇರೇಪಿಸಲು ಸಮುದ್ರದಲ್ಲಿ 5 ದಿನ 'ವಿ ವೋಟ್'ಎಂಬ  ಲಿಖಿತ ಘೋಷಣೆಯೊಂದಿಗೆ ಕ್ರೂಜ್ ಬೋಟ್ ಸಮುದ್ರದಲ್ಲಿ ವಿಹರಿಸಿ ಮೀನುಗಾರರಲ್ಲಿ ಮತದಾನದ ಜಾಗೃತಿಯನ್ನು ಮೂಡಿಸಿದೆ. ಹಾಗೂ ಕಾರ್ಯಕ್ರಮಕ್ಕೆ ಪೂರಕವಾಗಿ ಫುಡ್ ಫೆಸ್ಟಿವಲ್ನ್ನು ಸಹ ಆಯೋಜಿಸಲಾಯಿತು. 

 ತಾಲೂಕ್ ಪಂಚಾಯತ್ ಹಾಗೂ ಸಮಗ್ರ ಗಿರಿಜನ ಅಭಿವೃದ್ದಿ ಯೋಜನಾ ಇಲಾಖೆಯ  ಸಹಯೋಗದೊಂದಿಗೆ ಜಿಲ್ಲಾಡಳಿತ  ದೂರ ಹಾಗೂ ದುರ್ಗಮ ಪ್ರದೇಶಗಳು ಹಾಗೂ ಹಿಂದುಳಿದ ಪ್ರದೇಶಗಳಾದ ಮಧ್ಯ,ಗುತ್ತಕಾಡು, ಅನ್ನಾರ್, ನಾರಾವಿ, ಶಿರ್ಲಾಳು, ಕಲ್ಮಕಾರು, ಬಾಳಗೋಡು ಮತ್ತು ಕುರ್ಕುಂದ ಇತ್ಯಾದಿ  ಪ್ರದೇಶಗಳಿಗೆ ಇಲಾಖಾಧಿಕಾರಿಗಳು ಹಾಗೂ ವಿಶೇಷ ಸಾಂಸ್ಕೃತಿಕ ಕಲಾ ತಂಡಗಳಾದ ಗಿರಿಸಿರಿ ಮತ್ತು ಕೊರಲ್ಗಳ ಮೂಲಕ ಮತದಾನದ ಜಾಗೃತಿಯನ್ನು ಹಮ್ಮಿಕೊಳ್ಳಲಾಯಿತು. ಜನಶಿಕ್ಷಣ ಟ್ರಸ್ಟ್ ಮತ್ತು ಅಪ್ನಾದೇಶ್ ಮಾದರಿ ಗ್ರಾಮೀಣಭಿವೃದ್ಧಿ ಸಂಸ್ಥೆಯ ನೆರವನ್ನು ಪಡೆಯಲಾಗಿದೆ.  ಅವರಲ್ಲಿ ಜಾಗೃತಿ ಹಾಗೂ ಆತ್ಮ ವಿಶ್ವಾಸ ಮೂಡಿಸುವ ಕಾರ್ಯಕ್ರಮಗಳಾದವು. ಮಂಗಳೂರಿನ ಮಧ್ಯ, ಮುಡಿಪು,  ಬೆಳ್ತಂಗಡಿ ಅನ್ನಾರ್ಗಳಲ್ಲಿ ನಡೆದ ರ್ಯಾಲಿಯಲ್ಲಿ ಜನರು ಪಾಲ್ಗೊಂಡ ರೀತಿ ಪ್ರಜಾಪ್ರಭುತ್ವದ ಮೇಲೆ ಜನರಿಟ್ಟಿರುವ ನಂಬಿಕೆಗೆ ಸಾಕ್ಷಿಯಾಗಿತ್ತು.

ಯುವಜನತೆಗೆ   ಬೈಕ್ ರಾಲಿ, ಮಾಸ್ಕಟ್, ಮಾನವ ಸರಪಳಿ ಮತ್ತು  ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳಿಗೆ ಮತದಾನದ ಪ್ರತಿಜ್ಞಾ ಸ್ವೀಕಾರ ಮಾಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು. ಅಂತಿಮ ಹಂತದಲ್ಲಿ ಮತದಾನ ಮಾಡಿ ಎಂದು ಪ್ರೇರೇಪಿಸಲು ಎನ್ವೈಕೆ ಸಹಯೋಗದೊಂದಿಗೆ  ಮಂಗಳೂರು ವಿಶ್ವವಿದ್ಯಾನಿಲಯದ ಕಾಲೇಜು ಆವರಣದಲ್ಲಿ 365 ಮಣ್ಣಿನ ಹಣತೆ ದೀಪಗಳನ್ನು ಭಾರತ ದೇಶದ ನಕಾಶೆಯ ಮಾದರಿಯಲ್ಲಿ ಬೆಳಗಿಸಿ ನಿರಂತರವಾಗಿ ಚಾಲ್ತಿಯಲ್ಲಿರುವ ಅರಿವು ಮತ್ತು ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. 

ಜಿಲ್ಲೆಯಲ್ಲಿ ಪ್ಯಾರಾ ಸ್ಲೈಡರ್ ಹಾರಿಸುವ ಮೂಲಕ ಮತದಾನದ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ನಗರ ಹಾಗೂ ಗ್ರಾಮಾಂತರ ಮಹಿಳೆಯರಿಗೆ ಯಕ್ಷಗಾನ,ಮೈಮ್ ಶೋ,ಹಾಡು, ಬಿತ್ತಿಪತ್ರ, ಬೀದಿನಾಟಕ, ಕರಪತ್ರ, ಸ್ರ್ತೀ ಶಕ್ತಿ ಗುಂಪುಗಳಿಗೆ ಮತದಾನದ ಪ್ರತಿಜ್ಞಾ ಸ್ವೀಕಾರ, ಜಾಥಾ ಹಾಗೂ ಮಾನವ ಸರಪಳಿಗಳ ಮುಂತಾದ ಕಾರ್ಯಕ್ರಗಳನ್ನು ವಿಶೇಷವಾಗಿ ಜಿಲ್ಲೆಯ 2102 ಅಂಗನವಾಡಿ ಕೇಂದ್ರಗಳಲ್ಲಿ ಅಂಗನವಾಡಿ ಸಹಾಯಕಿಯರು ಕಾರ್ಯಕರ್ತೆಯರು ಮೇಲ್ವಿಚಾರಕರ  ಮೂಲಕ ಜಿಲ್ಲಾಡಳಿತ ಮತದಾನದ ಜಾಗೃತಿಯನ್ನು ವ್ಯಾಪಕವಾಗಿ  ಮೂಡಿಸಲಾಗಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಶಾ ಕಾರ್ಯಕರ್ತೆಯರು, ಹಿರಿಯ ಮತ್ತು ಕಿರಿಯ ಆರೋಗ್ಯ ಸಹಾಯಕರು, ಜಿಲ್ಲೆಯ ಎಲ್ಲಾ ವೈದ್ಯರುಗಳು ಮತದಾನದ ಜಾಗೃತಿ ಕಾರ್ಯಕ್ರಮವನ್ನು  ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿದರು.
ಕಾರ್ಮಿಕ ಇಲಾಖೆ,ಫ್ಯಾಕ್ಟರಿ ಹಾಗೂ ಬಾಯ್ಲರ್ ಇಲಾಖೆ ಮತ್ತು ಕೈಗಾರಿಕೆ ಇಲಾಖೆ ಸಮಗ್ರವಾಗಿ,  ಎಲ್ಲಾ ಸಂಘಟಿತ ಮತ್ತು ಅಸಂಘಟಿತ ಕಾರ್ಮಿಕರಿಗೆ ವೈಶಿಷ್ಟ್ಯ ಪೂರ್ಣ ಅರಿವು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದರು.
ಸಾರಿಗೆ ಮತ್ತು ಕೆ.ಎಸ್.ಆರ್.ಟಿ.ಸಿ ಇಲಾಖೆಯ ಮೂಲಕ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಬಸ್ಸುಗಳಲ್ಲಿ ಮತದಾರ ಜಾಗೃತಿ ಭಿತ್ತಿ ಪತ್ರ, ಸಿಡಿಗಳ ಮೂಲಕ ವ್ಯಾಪಕವಾಗಿ ಅರಿವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಗ್ರಾಮ ಪಂಚಾಯತ್ ಸ್ಥಳೀಯ ಸಂಘ ಸಂಸ್ಥೆಗಳ ಸಹಕಾರ ಮತ್ತು ಸಮನ್ವಯ ಎಲ್ಲಾ ಇಲಾಖೆಗಳಲ್ಲಿ ಎಲ್ಲರ ಸಹಕಾರ ಹಾಗೂ ಸಮನ್ವಯದೊಂದಿಗೆ ಮತದಾನದ ಜಾಗೃತಿ ಮತ್ತು ಪ್ರತಿಜ್ಞಾ ಸ್ವೀಕಾರ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಿದೆ.

ಚುನಾವಣಾ ಆಯೋಗದಿಂದ ನೀಡಲಾದ  ಜಾಗೃತಿ ಕಾರ್ಯಕ್ರಮಗಳ ಜಾಹೀರಾತನ್ನು ಲೋಕಲ್ ಚಾನಲ್ಸ್ ಹಾಗೂ ಎಫ್ ಎಂ ಮೂಲಕ ಹಾಗೂ ಆಕಾಶವಾಣಿ ಮೂಲಕ ಜನಮಾನಸ ತಲುಪಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಯಿತು. ಜಿಲ್ಲೆಯಲ್ಲಿ ಸುಮಾರು 70000 ಅರ್ಜಿಗಳನ್ನು ಸ್ವೀಕರಿಸಲಾಗಿದೆ.

ನೈತಿಕ ಮತದಾನದ ಸಂದೇಶದೊಂದಿಗೆ ಸ್ವಯಂ ಪ್ರೇರಿತರಾಗಿ ಎಲ್ಲರೂ ಮತದಾನ ಮಾಡುವ  ಭಯಮುಕ್ತ, ಸುವ್ಯವಸ್ಥಿತ ವಾತಾವರಣವನ್ನು ಜಿಲ್ಲಾಡಳಿತ ನಿರ್ಮಿಸಿದೆ.  ಸುಗಮ, ಶಾಂತಿಯುತ ಮತದಾನದ ಪ್ರಕ್ರಿಯೆ ಜಿಲ್ಲಾಡಳಿತದ ಸಂಕಲ್ಪ.