Friday, February 8, 2013

'ಗಗನಕೆ ಬಿಚ್ಚಲು ರೆಕ್ಕೆಗಳ ಮಗುವಿಗೆ ಕೊಡಿರಿ ಹಕ್ಕುಗಳ'

ಮಂಗಳೂರು, ಫೆಬ್ರವರಿ.08  ''ಗಗನಕೆ ಬಿಚ್ಚಲು ರೆಕ್ಕೆಗಳ ಮಗುವಿಗೆ ಕೊಡಿರಿ ಹಕ್ಕುಗಳ,: ಕನಸನು ಹೊತ್ತ ಮಕ್ಕಳು ದೇಶಕಟ್ಟುವ ಶಕ್ತಿಗಳು;''
ಮಂಗಳೂರಿನ ಪುರಭವನದಲ್ಲಿ ಶುಕ್ರವಾರ ಜರುಗಿದ ಮಕ್ಕಳ ಹಕ್ಕುಗಳ ಜಾಗೃತಿಗಾಗಿ 'ಮಕ್ಕಳ ಅರಿವು' ಕಾರ್ಯಕ್ರಮದಲ್ಲಿ ಕಂಡುಬಂದ ಘೋಷವಾಕ್ಯಗಳಿವು. ಕಾರ್ಯಕ್ರಮವನ್ನು ಉದ್ಘಾಟಿಸಿ ಜಿಲ್ಲಾಧಿಕಾರಿ ಎನ್ ಪ್ರಕಾಶ್ ಅವರು, ಮಕ್ಕಳ ಭವಿಷ್ಯ ಭವ್ಯವಾಗಲಿ ಎಂದು ಹಾರೈಸಿದರು.
ಬಳಿಕ ನಡೆದ ಮಕ್ಕಳ ಹಕ್ಕುಗಳ ಬಗ್ಗೆಗಿನ ಸಂವಾದದಲ್ಲಿ ಮಕ್ಕಳು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಸವಿವರ ಚರ್ಚೆ ನಡೆಯಿತು. ಮಕ್ಕಳು ತಮ್ಮ ಶಾಲೆಗಳ ಸ್ಥಿತಿ ಬಗ್ಗೆ, ಬೀದಿ ನಾಯಿಗಳ ಕಾಟದ ಬಗ್ಗೆ, ವಾಹನಗಳ ಸದ್ದಿನ ಬಗ್ಗೆ, ಲಿಂಗತಾರತಮ್ಯದ ಬಗ್ಗೆ ಇಂದು ಮಕ್ಕಳು ಗಮನಸೆಳೆದ ರೀತಿಗೆ ವಿದ್ಯಾರ್ಥಿಗಳು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷರಾದ  ಹೆಚ್ ಆರ್ ಉಮೇಶ್ ಆರಾಧ್ಯ ಅವರಿಂದ ಭೇಷ್ ಅನಿಸಿಕೊಂಡರು.
ಮಕ್ಕಳ ಸಮಸ್ಯೆಗಳ ಬಗ್ಗೆ ಮಕ್ಕಳ ಕಲ್ಯಾಣ ಸಮಿತಿಗೆ ದೂರು ನೀಡುವ ಮಾದರಿಯನ್ನೂ ಮಕ್ಕಳಿಗೆ ವಿವರಿಸಿದ ಆರಾಧ್ಯ ಅವರು, ಮಕ್ಕಳಿಗೆ ಅವರ ಹಕ್ಕುಗಳ ಕುರಿತು, ಸರ್ಕಾರ ನೀಡಿರುವ ವಿಶೇಷ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.
ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಶ್ರೀಮತಿ ವನಿತಾ ಎನ್ ತೊರವಿ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರಾದ ಶ್ರೀಮತಿ ಆಶಾ ನಾಯಕ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ ಕೆ. ಎನ್. ವಿಜಯಪ್ರಕಾಶ್, ಬಾಲಭವನ ಸೊಸೈಟಿ ಬೆಂಗಳೂರು ಅಧ್ಯಕ್ಷರಾದ ಸುಲೋಚನಾ ಜಿ ಕೆ ಭಟ್, ಪೊಲೀಸ್ ಕಮಿಷನರ್ ಮನೀಶ್ ಕರ್ಬೀಕರ್ ಮುಖ್ಯ ಅತಿಥಿಗಳಾಗಿದ್ದರು. ಗ್ರೇಸಿ ಗೊನ್ಸಾಲಿಸ್ ಸ್ವಾಗತಿಸಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರಾದ ಎಸ್ ಮೋಸೆಸ್ ಜಯಶೇಖರ್ ಉಪಸ್ಥಿತರಿದ್ದರು.