Thursday, February 14, 2013

ತ್ಯಾಜ್ಯ ವಿಲೇಗೆ ಮೂಡಬಿದರಿ ಮಾದರಿ: ಜಿಲ್ಲಾಧಿಕಾರಿ

ಮಂಗಳೂರು,ಫೆಬ್ರವರಿ.13:-ಜಿಲ್ಲೆಯಲ್ಲಿ ತ್ಯಾಜ್ಯ ವಿಲೇ ಸಮಸ್ಯೆ ನಿವಾರಣೆಗೆ ಮೂಲದಲ್ಲೇ ಕಸವನ್ನು  ಬೇರ್ಪಡಿಸಿ ಪ್ರತ್ಯೇಕ ಬಿನ್ ಗಳಲ್ಲಿ ಸಂಗ್ರಹಿಸಲು ಅನುವಾಗುವಂತೆ ಜಿಲ್ಲೆಯ ಎಲ್ಲಾ ಪುರಸಭೆ, ನಗರಸಭೆಗಳು ತಮ್ಮ ವ್ಯಾಪ್ತಿಯ ಎಲ್ಲಾ ವಾರ್ಡ್ ಗಳ ಮನೆಗಳಿಗೆ ಬಣ್ಣದ ಬಕೆಟ್ ಗಳನ್ನು ಉಚಿತವಾಗಿ ವಿತರಿಸಲು ಕ್ರಮ ಕೈಗೊಳ್ಳುವಂತೆ ದಕ್ಷಿಣಕನ್ನಡ ಜಿಲ್ಲಾಧಿಕಾರಿ ಎನ್.ಪ್ರಕಾಶ್ ಅವರು ಸೂಚಿಸಿದ್ದಾರೆ.
ಅವರು  ಬುಧವಾರ ತಮ್ಮ ಕಚೇರಿಯಲ್ಲಿ ನಡೆದ ನಗರ ಸ್ಥಳೀಯ ಸಂಸ್ಥೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.   
ಬಂಟ್ವಾಳ ಪಟ್ಟಣದ ಒಟ್ಟು 23 ವಾರ್ಡ್ ಗಳ ಪೈಕಿ 21 ರಲ್ಲಿ ಮನೆಮನೆಯಿಂದ  ಕಸ ಸಂಗ್ರಹ ಮಾಡುತ್ತಿದ್ದು, ಇಲ್ಲಿಯ 6 ವಾರ್ಡ್ ಗಳಲ್ಲಿ ಮೂಲದಲ್ಲೇ ಕಸವನ್ನು ಬೇರ್ಪಡಿಸಿ ಸಂಗ್ರಹ ಮಾಡಲಾಗುತ್ತಿದೆ.ಬೆಳ್ತಂಗಡಿ ಪಟ್ಟಣ ಪಂಚಾಯತ್ ನ ಒಟ್ಟು 11 ವಾರ್ಡ್ ಗಳಲ್ಲಿ 9 ರಲ್ಲಿ ಮನೆಮನೆಯಿಂದ ಕಸ ಸಂಗ್ರಹಿಸಲಾಗುತ್ತಿದೆ. ಮೂಡಬಿದ್ರೆ ಪುರಸಭೆಯ ಎಲ್ಲಾ 23 ವಾರ್ಡ್ಗಳಲ್ಲಿ ಮೂಲ್ಕಿ ಪುರಸಭೆಯ 17 ವಾರ್ಡ್ ಗಳಲ್ಲಿ ಮನೆಮನೆಯಿಂದ ಕಸ ಸಂಗ್ರಹ ಮಾಡುವ ಮೂಲಕ ಶೇಕಡಾ 100 ರಷ್ಟು ಸಾಧನೆ ಮಾಡಿ, ಇತರೆ ಪುರಸಭೆಗಳಿಗೆ ಮಾದರಿಯಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು. ಪುತ್ತೂರು ಪಟ್ಟಣದಲ್ಲಿ 18 ವಾರ್ಡ್ ಗಳ ಸುಮಾರು 4800 ಮನೆಗಳಿಂದ ಕಸ ಸಂಗ್ರಹಣೆ ಕಾರ್ಯ ನಡೆಯುತ್ತಿದ್ದು 800 ಮನೆಗಳಲ್ಲಿ ಮೂಲದಲ್ಲೇ ಕಸ ಬೇರ್ಪಡಿಸಿ ಸಂಗ್ರಹ ಮಾಡಲಾಗುತ್ತಿದೆ.
ಸುಳ್ಯ ಪಟ್ಟಣದಲ್ಲಿ 1800 ಮನೆಗಳಿಂದ ಕಸವನ್ನು ಬೇರ್ಪಡಿಸಿ ಸಂಗ್ರಹ ಮಾಡಲಾಗುತ್ತಿದ್ದರೆ,ಉಳ್ಳಾಲ ವ್ಯಾಪ್ತಿಯ 8000 ಮನೆಗಳಿಂದ ಹಾಗೂ 5 ಮಾರುಕಟ್ಟೆಗಳಿಂದ ಕಸವನ್ನು ಬೇರ್ಪಡಿಸಿ ಸಂಗ್ರಹ ಮಾಡಲಾಗುತ್ತಿದೆ ಎಂದು ಸಂಬಂಧ ಪಟ್ಟ ಅಧಿಕಾರಿಗಳು ಸಭೆಯಲ್ಲಿ ಮಾಹಿತಿ ನೀಡಿದರು.   ಎಲ್ಲಾ ಪಟ್ಟಣ ಪುರಸಭೆಗಳಲ್ಲಿ ಕಸಾಯಿ ಖಾನೆಗಳನ್ನು ತೆರೆಯುವುದು ಹಾಗೂ ಅಲ್ಲಿನ ತ್ಯಾಜ್ಯವನ್ನು ಸೂಕ್ತ ರೀತಿಯಲ್ಲಿ ವಿಲೇ ಮಾಡಲು ಕ್ರಮ ವಹಿಸುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದರು. ಇದೇ ರೀತಿ ಮೀನು,ತರಕಾರಿ ಮಾರುಕಟ್ಟೆಗಳ ತ್ಯಾಜ್ಯವನ್ನು ಸಹ ಸೂಕ್ತ ರೀತಿಯಲ್ಲಿ ಸಂಗ್ರಹಿಸಿ ವಿಲೇ ಮಾಡಲು ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲೆಯ ಎಲ್ಲಾ ಪುರಸಭೆಗಳಲ್ಲಿರುವ ಸಕ್ಕಿಂಗ್ ಯಂತ್ರಗಳನ್ನು ಕಡ್ಡಾಯವಾಗಿ ಬಳಸುವಂತೆ  ಹಾಗೂ ಕಂಪೋಸ್ಟ್  ಗುಂಡಿಗಳನ್ನು ತೆಗೆದು ಕಾಂಪೋಸ್ಟ್ ಗೊಬ್ಬರ ತಯಾರಿಸಿ ಮಾರಾಟ ಮಾಡುವಂತೆ ತಿಳಿಸಿದರು.
 ವಾಜಪೇಯಿ ನಗರ ವಸತಿ ಯೋಜನೆಯಡಿ ಜಿಲ್ಲೆಗೆ 2045 ವಸತಿಗಳನ್ನು ನಿರ್ಮಿಸುವ ಗುರಿ ನೀಡಿದ್ದು,ಇಲ್ಲಿಯವರೆಗೆ 1289 ಫಲಾನುಭವಿಗಳು ಅರ್ಜಿಗಳನ್ನು ಸಲ್ಲಿಸಿದ್ದಾರೆ.  ಈ ಯೋಜನೆಯಲ್ಲಿ ಶೇಕಡಾ 100 ರಷ್ಟು ಸಾಧನೆ ಮಾಡಬೇಕೆಂದು ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ.  ನೀರು ಸರಬರಾಜು ಹಾಗೂ ಒಳಚರಂಡಿ ಕಾಮಗಾರಿಗಳ ಪ್ರಗತಿ ಪರಿಶೀಲಿಸಿದರು.
ಸಭೆಯಲ್ಲಿ ಮಂಗಳೂರು ಮಹಾನಗರಪಾಲಿಕೆ ಆಯುಕ್ತ ಡಾ.ಹರೀಶ್ ಕುಮಾರ್, ಅಪರ ಜಿಲ್ಲಾಧಿಕಾರಿ ದಯಾನಂದ,ಯೋಜನಾ ನಿರ್ದೇಶಕ ಟಿ.ಜೆ.ತಾಕತ್ ರಾವ್ ಮುಂತಾದವರು ಉಪಸ್ಥಿತರಿದ್ದರು.