Monday, February 4, 2013

ಅನುಮತಿ ಇಲ್ಲದೆ ಕೊಳವೆ ಬಾವಿ ಕೊರೆದರೆ ರೂ.5000/- ದಂಡ: ಎನ್.ಪ್ರಕಾಶ್

ಮಂಗಳೂರು, ಫೆಬ್ರವರಿ.04:-  ಜಿಲ್ಲೆಯಲ್ಲಿ ಮಂಗಳೂರು ,ಬಂಟ್ವಾಳ ಹಾಗೂ ಪುತ್ತೂರು ತಾಲೂಕುಗಳ 43 ಗ್ರಾಮಗಳನ್ನು ಅಂತರ್ಜಲ ಅತಿ ಬಳಕೆ ಗ್ರಾಮಗಳೆಂದು ಘೋಷಿಸಲಾಗಿದ್ದು,ಈ ಗ್ರಾಮಗಳಲ್ಲಿ ಇನ್ನು ಮುಂದೆ ಖಾಸಗಿ ಅಥವಾ ಸಾರ್ವಜನಿಕ ಕೊಳವೆ ಬಾವಿಗಳನ್ನು   ಕೊರೆಯಲು ನೂತನವಾಗಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ರಚಿತವಾಗಿರುವ ದಕ್ಷಿಣಕನ್ನಡ ಜಿಲ್ಲಾ ಮಟ್ಟದ ಅಂತರ್ಜಲ ಪ್ರಾಧಿಕಾರದ ಅನುಮತಿ ಪಡೆಯಬೇಕೆಂದು,  ಒಂದು ವೇಳೆ ಅನುಮತಿ ಪಡೆಯದೇ ಕೊಳವೆ ಬಾವಿ ಕೊರೆದಲ್ಲಿ ಅಂತಹವರಿಗೆ ರೂ.5000-/ ದಂಡ ಅಥವಾ 6 ತಿಂಗಳ ಜೈಲು ಶಿಕ್ಷೆಗೆ ಒಳ ಪಡಿಸ ಲಾಗು ವುದು ಎಂದು ಜಿಲ್ಲಾಧಿಕಾರಿ ಎನ್.ಪ್ರಕಾಶ್ ತಿಳಿಸಿದ್ದಾರೆ.
   ಅವರು ಇಂದು ತಮ್ಮ ಕಚೇರಿಯಲ್ಲಿ ಕರ್ನಾಟಕ ಅಂತರ್ಜಲ ಅಭಿವೃದ್ಧಿ ಪಡಿಸುವ ಮತ್ತು ಅಂತರ್ಜಲದ ಅತಿ ಬಳಕೆಯನ್ನು ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಕರ್ನಾಟಕ ಅಂತರ್ಜಲ  ಅಧಿನಿಯಮ 2011 ನಿಯಮಾವಳಿ- 2012 ರನ್ವಯ ನೂತನವಾಗಿ ರಚಿಸಿರುವ ದ.ಕ. ಜಿಲ್ಲಾ  ಮಟ್ಟದ ಅಂತರ್ಜಲ ಪ್ರಾಧಿಕಾರದ ಪ್ರಥಮ ಸಭೆಯ  ಅಧ್ಯಕ್ಷತೆ ವಹಿಸಿ ಮಾತನಾಡಿದರು.
      ಕರ್ನಾಟಕ ಅಂತರ್ಜಲ ಅಧಿನಿಯಮ 2011 ನಿಯಮಾವಳಿ 2012 ರನ್ವಯ  ದ.ಕ. ಜಿಲ್ಲೆಯ ಬಂಟ್ವಾಳ ತಾಲೂಕಿನ ಅಳಿಕೆ, ಅನಂತಾಡಿ, ಬಾಳೆಪುಣಿ, ಬೊಳಂತೂರು, ಇಡ್ಕಿದು,ಇರಾ,ಪದವು,ಕನ್ಯಾನ,ಕರಿಯಂಗಳ,ಕರೋಪಾಡಿ,ಕೇಪು,
ಕೊಲ್ನಾಡ್, ಕುಳಾಮಂಚಿ, ನೆರಿಯಂಗಾಣ, ಮಾಣಿಲಾ, ಪೆರುವಾಯಿ, ನೆಟ್ಲಮುಡ್ನೂರು, ಸಜಿಪಪಡು, ಪುಣಚ, ವೀರಕಂಭ,
ಸಾಲೆತ್ತೂರು, ವಿಟ್ಲಮುಡ್ನೂರು, ವಿಟ್ಲ ಮತ್ತು ವಿಟ್ಲ ಮಡ್ನೂರು ಸೇರಿ ಒಟ್ಟು 24 ಗ್ರಾಮಗಳಲ್ಲಿ , ಅದೇ ರೀತಿ  ಮಂಗಳೂರು ತಾಲೂಕಿನ 5 ಗ್ರಾಮಗಳೆಂದರೆ ಕಿನ್ಯಾ,ಕೋಣಾಜೆ,ಮಂಜನಾಡಿ,ಸೋಮೇಶ್ವರ ಮತ್ತು ತಲಪಾಡಿ
ಪುತ್ತೂರು ತಾಲೂಕಿನ 14 ಗ್ರಾಮಗಳೆಂದರೆ ಅರಿಯಡ್ಕ  ,ಆರ್ಯಾಪು, ಬಡಗನ್ನೂರು, ಬಲ್ನಾಡ್, ಬೆಟ್ಟಂಪಾಡಿ, ಕುಡಿಪಡಿ, ಕೆದಂಬಾಡಿ, ಇರ್ದೆ, ಕುರಿಯ, ಮಡ್ನೂರ್,ನಿಡಪಳ್ಳಿ, ಪದವನ್ನೂರು,ಪಾಣಾಜೆ ಮತ್ತು ಒಳಮೊಗರು ಗ್ರಾಮಗಳು.
        ಈಗಾಗಲೇ ಜಿಲ್ಲೆಯಲ್ಲಿ ಕೊಳವೆ ಬಾವಿಗಳನ್ನು ಕೊರೆಸಿರುವ ಖಾಸಗಿಯವರು ಕೂಡಲೇ ಕೊಳವೆ ಬಾವಿ ಗೃಹಕೃತ್ಯಕ್ಕೆ ಬಳಕೆಯಾಗುತ್ತಿದೆಯೇ ವಾಣಿಜ್ಯ ಕಾರ್ಯಗಳಿಗೆ ಬಳಕೆಯಾಗುತ್ತಿದೆಯೇ ಎಂಬ ಮಾಹಿತಿಯೊಂದಿಗೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಖಡ್ಡಾಯವಾಗಿ ನೋಂದಾಯಿಸಬೇಕೆಂದು ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ.
ಅನುಮತಿ ಪಡೆಯದೇ ಕೊಳವೆ ಬಾವಿ ಕೊರೆದರೆ ಅಂತಹ ಡ್ರಿಲ್ಲಿಂಗ್ ಯಂತ್ರವನ್ನು ಮುಟ್ಟುಗೋಲು  ಹಾಕಿಕೊಳ್ಳಲಾಗುವುದೆಂದು ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ.  ದಕ್ಷಿಣಕನ್ನಡ ಜಿಲ್ಲೆಯಲ್ಲಿ ಒಟ್ಟು 6 ಕೊಳವೆ ಬಾವಿ ಕೊರೆಯುವ ಘಟಕಗಳು ನೊಂದಾಯಿಸಿವೆ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆ ಭೂಶಾಸ್ತ್ರಜ್ಞರಾದ  ಇವರು ತಿಳಿಸಿರುತ್ತಾರೆ.
       ಅಧಿನಿಯಮ 16 ರನ್ವಯ ಅಧಿಸೂಚಿತ ಪ್ರದೇಶದಲ್ಲಿ ಅನುಮತಿ ಪತ್ರ ಹೊಂದಿರದ ಯಾವೊಬ್ಬ ವ್ಯಕ್ತಿಯು ಹಣಕಾಸಿನ ಸಹಾಯ,ವಿದ್ಯುಚ್ಛಕ್ತಿಯ ಸಂಪರ್ಕ,ಜೊತೆಗೆ ರೈತರಾಗಿದ್ದರೆ ಸಿಂಪರಣೆ ,ಹನಿ ನೀರಾವರಿ ಸಾಧನಗಳನ್ನು ಅಳವಡಿಸದಿರುವವರಿಗೆ ಸರ್ಕಾರದಿಂದ ಯಾವುದೇ ಧನಸಹಾಯ ಅಥವಾ ಪ್ರೋತ್ಸಾಹ ಧನವನ್ನು ಪಡೆಯಲು ಅನರ್ಹರಾಗಿರುತ್ತಾರೆ. ಸಾರ್ವಜನಿಕ ನೀರಿನ ಮೂಲಗಳಿಂದ 500 ಮೀಟರ್ ಅಂತರದ ಒಳಗೆ ಯಾವುದೇ ಹೊಸ ಕೊಳವೆ ಬಾವಿಯನ್ನು ಕಾನೂನಿನಂತೆ ಕೊರೆಯಬಾರದೆಂದು ಸಹ ಅವರು ತಿಳಸಿದ್ದಾರೆ. 
      ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಕೆ.ಎನ್.ವಿಜಯಪ್ರಕಾಶ್,ಜಿಲ್ಲಾ ಪೋಲೀಸ್ ಅಧೀಕ್ಷಕ ಅಭಿಷೇಕ್ ಗೋಯಲ್,ಹೆಚ್ಚುವರಿ ಜಿಲ್ಲಾಧಿಕಾರಿ ದಯಾನಂದ ಮುಂತಾದವರು ಹಾಜರಿದ್ದರು.