Tuesday, February 19, 2013

ಆಂತರಿಕ ರಕ್ಷಣಾ ವ್ಯವಸ್ಥೆಯಲ್ಲಿ ಪೋಲೀಸ್ ಇಲಾಖೆ ಪಾತ್ರ ಪ್ರಮುಖ-ಪ್ರತಾಪರೆಡ್ಡಿ

ಮಂಗಳೂರು, ಫೆಬ್ರವರಿ.19: ದೇಶದ ಆಂತರಿಕ ರಕ್ಷಣಾ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರ ವಹಿಸುವ ಗೃಹ ಇಲಾಖೆಯ ಜವಾಬ್ದಾರಿ ಹೆಚ್ಚಿದ್ದು,ಇಲಾಖೆ ಸದಾ ಜಾಗೃತವಾಗಿರಬೇಕಾಗುತ್ತದೆ ಎಂದು ಪಶ್ಚಿಮ ವಲಯ ಪೋಲೀಸ್ ಮಹಾ ನಿರೀಕ್ಷಕರಾದ  ಪ್ರತಾಪ ರೆಡ್ಡಿಯವರು ಕರೆ ನೀಡಿದ್ದಾರೆ.
ಅವರು ಇಂದು ನಗರದ ಪೋಲೀಸ್ ಕಮೀಷನರೇಟ್ ಕಚೇರಿಯಲ್ಲಿ ಬೆಂಗಳೂರಿನ ಸಮಕಾಲೀನ ಅಧ್ಯಯನ ಸಂಸ್ಥೆ ವತಿಯಿಂದ ಆಯೋಜಿಸಿರುವ 2 ದಿನಗಳ ಪಶ್ಚಿಮ ವಲಯ ಪೋಲೀಸ್ ಅಧಿಕಾರಿಗಳು ಹಾಗೂ ನಕ್ಸಲ್ ನಿಗ್ರಹ ದಳ ಅಧಿಕಾರಿಗಳಿಗೆ ರಾಷ್ಟ್ರೀಯ ಭದ್ರತೆ ಕುರಿತ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಕರ್ನಾಟಕ ರಾಜ್ಯ ಮಿನಿ ಭಾರತವಿದ್ದಂತೆ ಇದ್ದು, ಇಲ್ಲಿ ಎಲ್ಲಾ ಧರ್ಮಗಳು,ಸಂಸ್ಕೃತಿ,ಭಾಷೆ ಸೇರಿದಂತೆ ವಿದೇಶಿಯರೂ ಹೆಚ್ಚಿನ ಸಂಖ್ಯೆಯಲ್ಲಿದ್ದು ಆಯಾ ದೇಶ ರಾಜ್ಯಗಳಲ್ಲಿ ಏನಾದರೂ ಘಟನೆಗಳು ಸಂಭವಿಸಿದರೆ ಇಲ್ಲಿಯೂ ಅದರ ಬಗ್ಗೆ ಪ್ರತಿಭಟನೆಗಳು ನಡೆದು ಕಾನೂನು ಸುವ್ಯವಸ್ಥೆ ತಲೆದೋರುತ್ತದೆ.ಆದ್ದರಿಂದ ರಾಷ್ಟ್ರೀಯ ಭದ್ರತಾ ದೃಷ್ಟಿಯಿಂದ ನಮ್ಮ ರಾಜ್ಯದಲ್ಲಿರುವ ಪೆಟ್ರೋಕೆಮಿಕಲ್ಸ್ ರಕ್ಷಣಾ ವಲಯ ಕೈಗಾರಿಕೆಗಳು,ಅಣು ಸ್ಥಾವರಗಳ  ರಕ್ಷಣಾ ದೃಷ್ಟಿಯಿಂದ ಘಟನೆಗಳು ಸಂಭವಿಸುವ ಮುನ್ನ ಸದಾ ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸುವ ತಂತ್ರಗಾರಿಕೆಯನ್ನು ರೂಢಿಸಿಕೊಳ್ಳಬೇಕೆಂದರು.ಪೋಲೀಸರು ಕರಾವಳಿ ರಕ್ಷಣಾ ಪಡೆ ನಕ್ಸಲ್ ನಿಗ್ರಹದಳ ಮುಂತಾದವರು ಕೇವಲ ಸ್ಥಳೀಯ ವಿಷಯಗಳ ಕುರಿತು ಚಿಂತಿಸುವುದರ ಜೊತೆಗೆ ರಾಜ್ಯದಲ್ಲಿ ಬೀಡು ಬಿಟ್ಟಿರುವ ಈಶಾನ್ಯ ರಾಜ್ಯಗಳ ವಿದ್ಯಾಥರ್ಿಗಳು,ಟಿಬೇಟ್ ನಾಗರೀಕರು ಸೇರಿದಂತೆ ಇತರೆ ವಿದೇಶಿಯರ ಬಗ್ಗೆ  ಹಾಗೂ ಅವರ ಚಟುವಟಿಕೆಗಳ ಬಗ್ಗೆ ಸದಾ ಜಾಗೃತರಾಗಿರಬೇಕೆಂದು  ಅವರು ತಿಳಿಸಿದರು.
        ಉದ್ಘಾಟನಾ ಸಮಾರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರೊ. ಚೆಂಗಪ್ಪ ಅವರು ದೇಶದ ಇತರೆ ರಾಜ್ಯಗಳಂತೆ ಕರ್ನಾಟಕವೂ ಆಂತರಿಕ ಭದ್ರತೆ ಸಮಸ್ಯೆ ಎದುರಿಸುತ್ತಿದೆ.ಸಾಮಾಜಿಕ,ಆರ್ಥಿಕ,ರಾಜಕೀಯ ಬೆಳವಣಿಗೆಗಳು ರಾಜ್ಯದ ಗಡಿ ದಾಟಿ ಮುಂದುವರಿದಿದೆ. ಇಲ್ಲಿ ಕಾಶ್ಮೀರಿಗಳ ಕುಟುಂಬಗಳು,ಟಿಬೇಟಿಯನ್ನರು ಸೇರಿದಂತೆ ವಿವಿಧ ದೇಶಗಳ ಜನ ಮೈಸೂರು ಗೋಕರ್ಣ ಮುಂತಾದೆಡೆ ಪ್ರವಾಸಕ್ಕಾಗಿ ಹಾಗೂ ಶಿಕ್ಷಣ ಯೋಗ ಕಲಿಯಲು ಆಗಮಿಸುತ್ತಿದ್ದಾರೆ.ಆದ್ದರಿಂದ ನಾವು ನಮ್ಮ ಆಂತರಿಕ ಭದ್ರತೆಗೆ ಹೆಚ್ಚಿನ ಗಮನಹರಿಸುವ ಮೂಲಕ  ಜಾಗ್ರತೆ ವಹಿಸುವ ಆವಶ್ಯವಿದ್ದು,ಈ ದಿಸೆಯಲ್ಲಿ ಇಂದು ಮತ್ತು ನಾಳೆ ನಡೆಯುವ ಎರಡು ದಿನಗಳ ರಾಷ್ಟ್ರೀಯ ಭದ್ರತೆ ಕಾರ್ಯಾಗಾರ ಅತ್ಯಂತ ಪ್ರಮುಖವಾದುದು ಎಂದರು. ದಕ್ಷಿಣಕನ್ನಡ,ಉಡುಪಿ,ಚಿಕ್ಕಮಗಳೂರುಹಾಗೂ ಉತ್ತರಕನ್ನಡ ಜಿಲ್ಲೆಗಳ 50ಕ್ಕೂ ಹೆಚ್ಚು ಪೋಲೀಸ್ ಅಧಿಕಾರಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.