Saturday, February 16, 2013

ಗ್ರಾಮೀಣ ಮಹಿಳೆಯರಿಗೆ ಕಾನೂನಿನ ಅರಿವು ಮೂಡಿಸಿ-ವಿಶ್ವನಾಥ ವಿ.ಅಂಗಡಿ

ಮಂಗಳೂರು, ಫೆಬ್ರವರಿ.16 :ಕೌಟುಂಬಿಕ ದೌರ್ಜನ್ಯಗಳು ಕೇವಲ ನಗರ ಪಟ್ಟಣಗಳಿಗೆ ಮಾತ್ರ ಸೀಮಿತವಾಗಿಲ್ಲ. ಅವು ಗ್ರಾಮಾಂತರ ಪ್ರದೇಶಗಳಲ್ಲೂ ನಡೆಯುತ್ತಿರುವುದರಿಂದ ಗ್ರಾಮೀಣ  ಮಹಿಳೆಯರ ಸಂರಕ್ಷಣೆಗಾಗಿ ಅವರಿಗೆ ಕಾನೂನಿನ ಅರಿವು ಮೂಡಿಸಬೇಕು ಎಂದು  ವಿಶ್ವನಾಥ ವಿ.ಅಂಗಡಿ, ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಮತ್ತು ಸದಸ್ಯ ಕಾರ್ಯದರ್ಶಿಗಳು ,ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ,ಬೆಂಗಳೂರು ಇವರು ತಿಳಿಸಿರುತ್ತಾರೆ.
ಅವರು ಇಂದು ಜಿಲ್ಲಾ ಪಂಚಾಯತ್ ನೇತ್ರಾವತಿ ಸಭಾಂಗಣದಲ್ಲಿ ದಕ್ಷಿಣಕನ್ನಡ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ,ಮಂಗಳೂರು,ಜಿಲ್ಲಾಡಳಿತ,ಜಿಲ್ಲಾ ಪಂಚಾಯತ್,ಮಂಗಳೂರು ವಕೀಲರ ಸಂಘ,ಹಾಗೂ ಇನ್ನಿತರ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿರುವ ಏಕದಿನ ಜಿಲ್ಲಾ ಮಟ್ಟದ ಮಹಿಳೆಯರಿಗಾಗಿ ಕಾನೂನು ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ವಿಶ್ವದಲ್ಲಿ ಇಂದು ಹಲವಾರು ಕಾರಣಗಳಿಂದ ಪುರುಷ ಹಾಗೂ ಮಹಿಳೆಯರ ಅನುಪಾತ ಕಡಿಮೆ ಇದೆ. 1000 ಪುರುಷರಿಗೆ 940 ಮಹಿಳೆಯರಿದ್ದಾರೆ. ಈ ಅನುಪಾತ ದಕ್ಷಿಣಕನ್ನಡ ಜಿಲ್ಲೆಯಲ್ಲಿ 1000 ಪುರುಷರಿಗೆ 1018 ಮಹಿಳೆಯರಿದ್ದು,ಮಹಿಳೆ ಬಗ್ಗೆ ಈ ಜಿಲ್ಲೆಯಲ್ಲಿ ಇದೊಂದು ಆಶಾಕಿರಣವಾಗಿದೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ದಕ್ಷಿಣಕನ್ನಡ ಜಿಲ್ಲೆ ಕೌಟುಂಬಿಕ ನ್ಯಾಯಾಲಯ ನ್ಯಾಯಾಧೀಶರಾದ  ಜಿ.ಪಿ.ನರಸಿಂಹಮೂರ್ತಿಅವರು ಮಾತನಾಡಿ ಜಿಲ್ಲೆಯಲ್ಲಿ 354 ಕೌಟುಂಬಿಕ ಪ್ರಕರಣಗಳು ಕೌಟುಂಬಿಕ ನ್ಯಾಯಾಲಯದಲ್ಲಿ ದಾಖಲಾಗಿದ್ದು,ಇವುಗಳಲ್ಲಿ 224 ಪ್ರಕರಣಗಳು ವಿವಾಹ ವಿಚ್ಚೇಧನಕ್ಕೆ ಸಂಬಂಧಿಸಿದವಾಗಿವೆ. ಅದರಲ್ಲೂ ಇವರ್ಯಾರೂ ನಿರಕ್ಷರರಲ್ಲ ಮೇಲಾಗಿ ಡಾಕ್ಟರು,ಇಂಜಿನಿಯರ್ ಗಳು,ಸಕರ್ಾರಿ,ಖಾಸಗಿ ಕಂಪೆನಿಗಳಲ್ಲಿ ಲಕ್ಷಾಂತರ ರೂಪಾಯಿಗಳ ವೇತನ ಪಡೆಯುವ ಜವಾಬ್ದಾರಿಕ ಜನರಾಗಿದ್ದಾರೆಂದು ವಿಷಾದ ಸೂಚಿಸಿದರು.
        ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ದಕ್ಷಿಣಕನ್ನಡ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಕೆ.ಎನ್.ವಿಜಯಪ್ರಕಾಶ್ ಮಾತನಾಡಿ ದಕ್ಷಿಣಕನ್ನಡ ಜಿಲ್ಲೆಯಲ್ಲಿ 2011-12 ರಲ್ಲಿ 142 ಮತ್ತು 2012-13 ರಲ್ಲಿ 312ಕೌಟುಂಬಿಕ ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ.ವಿದ್ಯಾವಂತರ ಜಿಲ್ಲೆಯಲ್ಲಿಯೇ ಈ ಪ್ರಮಾಣದ ಪ್ರಕರಣಗಳು ದಾಖಲಾಗಿರುವುದು ಭಯ ಹುಟ್ಟಿಸಲಿದೆ ಎಂದು ತಿಳಿಸಿ ಇಂತಹ ಪ್ರಕರಣಗಳಿಗೆ ಇತಿಶ್ರೀ ಹಾಡಲು ಮಹಿಳೆಯರೇ ಕಾನೂನಿನ ಅರಿವನ್ನು ಪಡೆಯಬೇಕು.ಕಾನೂನು ಸಮರ್ಪಕವಾಗಿ ಅನುಷ್ಠಾನವಾದಾಗ ಮಹಿಳೆಯರ ಮೇಲಿನ ಶೋಷಣೆಗಳು ದೌರ್ಜನ್ಯ ಪ್ರಕರಣಗಳು ನಿಲ್ಲುತ್ತವೆ ಎಂಬ ಆಶಾಭಾವನೆ ವ್ಯಕ್ತಪಡಿಸಿದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಅಶೋಕ್ ಅರಿಗಾ.ಪಿ ಅವರು ಮಾತನಾಡಿ ಮಹಿಳೆಯರು ತಮ್ಮ ಮೇಲೆ ಆಗುವ ದೌರ್ಜನ್ಯಗಳನ್ನು ಎದುರಿಸಲು ಕಾನೂನು ಅಸ್ತ್ರವನ್ನು ಕೊನೆಯ ಅಸ್ತ್ರವಾಗಿ ಬಳಸಬೇಕು,ಎಷ್ಟೋ ಪ್ರಕರಣಗಳಲ್ಲಿ ತಪ್ಪತಸ್ಥರು ಕಾನೂನಿನ ಬಲಿ ಪಶುಗಳಾಗುತ್ತಿದ್ದಾರೆ ಎಂಬ ಕಿವಿ ಮಾತು ಹೇಳಿದರು.
ನ್ಯಾಯಾಧೀಶರಾದ ಜಿ.ಎನ್.ಸುಬ್ರಹ್ಮಣ್ಯ,ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕರಾದ ಎ.ಶಕುಂತಳಾ ಅವರು ಸಭೆಯಲ್ಲಿ ಉಪಸ್ಥಿತರಿದ್ದರು.ಮಕ್ಕಳ ಅಭಿವೃದ್ದಿ ಅಧಿಕಾರಿ ಕು.ಶಾಂತಾ ಸ್ವಾಗತಿಸಿದರು.ಆರ್ ಸಿ ಎಚ್ ಅಧಿಕಾರಿ ಡಾ. ರುಕ್ಮಿಣಿ ವಂದಿಸಿದರು.