Thursday, February 21, 2013

ಫೆ. 24- ಪೋಲಿಯೋ ಲಸಿಕಾ ದಿನ

ಮಂಗಳೂರು,ಫೆಬ್ರವರಿ.21: ಪೋಲಿಯೋ ರೋಗವನ್ನು ದೇಶದಿಂದ ತೊಲಗಿಸಿ ದೇಶವನ್ನು ಪೋಲಿಯೋ ಮುಕ್ತವಾಗಿಸುವಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅನುಷ್ಠಾನಗೊಳಿಸುತ್ತಿವೆ. ಈ ನಿಟ್ಟಿನಲ್ಲಿ ದ.ಕ. ಜಿಲ್ಲೆಯಲ್ಲಿಯೂ 2013ರ ಫೆಬ್ರವರಿ 24ರಂದು ಎರಡನೇ ಸುತ್ತಿನ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
      ದ,ಕ.ಜಿಲ್ಲೆಯಲ್ಲಿ 0-5 ವಯೋಮಾನದ ಮಕ್ಕಳ ಸಂಖ್ಯೆ 1,63,860 ಇದ್ದು, ಇವರಲ್ಲಿ ವಲಸೆ ಕಾರ್ಮಿಕರ ಮಕ್ಕಳ ಸಂಖ್ಯೆ ಅಂದಾಜು 2319 ಎಂದು ಪರಿಗಣಿಸಲಾಗಿದೆ.ಪ್ರತಿಯೊಂದು ಮಗುವಿಗೂ ಪೋಲಿಯೋ  ಲಸಿಕೆ ಹಾಕಿಸುವುದರಿಂದ ಪೋಲಿಯೋ ನಿಯಂತ್ರಣ ಸಾಧ್ಯವಾಗುತ್ತದೆ. ಅದರಲ್ಲಿಯೂ ವಿಶೇಷವಾಗಿ ವಲಸೆ ಕಾರ್ಮಿಕರ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿಸುವುದು ಪ್ರಾಮುಖ್ಯವಾಗಿರುತ್ತದೆ. ಮಂಗಳೂರಿಗೆ ಆಗಮಿಸುವ ಕಾರ್ಮಿಕರು ಬೇರೆ ರಾಜ್ಯಗಳಿಗೆ ಸಂಬಂಧಿಸಿದವರಾಗಿದ್ದು, ಸಾಮಾನ್ಯವಾಗಿ ಅವರ ಮಕ್ಕಳಿಗೆ ಸಾರ್ವತ್ರಿಕ  ಲಸಿಕಾಕರಣ ಸರಿಯಾಗಿ ಆಗಿಲ್ಲದಿರುವುದು, ಅಲೆಮಾರಿ ಜನರು ವಾಸಿಸುವ ಪ್ರದೇಶಗಳಲ್ಲಿ ನೈರ್ಮಲ್ಯದ ಕೊರತೆ ಇರುವುದು, ಈ ಕಾರಣಗಳಿಂದ ಯಾವುದೇ ಸಮಯದಲ್ಲಿ ಪೋಲಿಯೋ ರೋಗ ಹರಡಿದರೆ ಆಶ್ಚರ್ಯವಲ್ಲ. ಇದಲ್ಲದೆ ನಮ್ಮ ಜಿಲ್ಲೆಯ ಮಕ್ಕಳನ್ನು ಸಹ ನಾವು ಪೋಲಿಯೋ ರಹಿತರನ್ನಾಗಿ ಕಾಪಾಡುವುದು ಅಗತ್ಯವಾಗಿರುತ್ತದೆ.
       ಆದ್ದರಿಂದ ಜಿಲ್ಲೆಯಲ್ಲಿ ಲಸಿಕಾ ಕಾರ್ಯಕ್ರಮದ ಯಶಸ್ವಿಗಾಗಿ ಒಟ್ಟು 921 ಲಸಿಕಾ ಕೇಂದ್ರಗಳು,ಮತ್ತು 11 ಸಂಚಾರಿ ತಂಡ ಹಾಗೂ 27 ಟ್ರಾನ್ಸಿಟ್ ಲಸಿಕಾ ಘಟಕಗಳನ್ನು ರೂಪಿಸಲಾಗಿರುತ್ತದೆ. ಇದಲ್ಲದೆ ಮಕ್ಕಳಿಗೆ 3822 ಲಸಿಕೆ ನೀಡುವವರು ಹಾಗೂ 193 ಮೇಲ್ವಿಚಾರಕರನ್ನು ನಿಯುಕ್ತಿಗೊಳಿಸಲಾಗಿದೆ.