Saturday, October 1, 2011

ಹಿರಿಯರ ಆರೈಕೆಯೇ ಕಿರಿಯರಿಗೆ ಸ್ಪೂರ್ತಿ

ಮಂಗಳೂರು,ಅಕ್ಟೋಬರ್,01:ಈ ಜಗತ್ತಿನಲ್ಲಿ ನಾವೆಲ್ಲರೂ ಪ್ರಯಾಣಿಕರು,ನಾವೆಲ್ಲಾ ಒಂದು ದಿನ ಇಳಿವಯಸ್ಸಿನವರಾಗುತ್ತೇವೆ.ಹಿರಿಯರಿಗೆ ತೋರುವ ಗೌರವವನ್ನು ಮಕ್ಕಳು ಗಮನಿಸಿ ಮುಂದೆ ಅವರು ಅದೇರೀತಿ ನಡೆದುಕೊಳ್ಳುತ್ತಾರೆಆದ್ದರಿಂದ ಹಿರಿಯರನ್ನು ಕಡೆಗಣಿಸದೇ ಅವರ ಆರೈಕೆಯೇ ನಮಗೆ ಸ್ಪೂರ್ತಿಯಾಗ ಬೇಕೆಂದು ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕರಾದ ಯು.ಟಿ.ಖಾದರ್ ತಿಳಿಸಿದರು.
ಅವರು ಇಂದು ನಗರದ ಪುರಭವನದಲ್ಲಿ ದ.ಕ. ಜಿಲ್ಲಾಡಳಿತ,ಜಿಲ್ಲಾ ಪಂಚಾಯತ್ ,ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ,ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ,ಜಿಲ್ಲಾ ಕಾನೂನು ಪ್ರಾಧಿಕಾರ ಮತ್ತು ವಿವಿಧ ಸ್ವಯಂ ಸೇವಾ ಸಂಘಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ವಿಶ್ವ ಹಿರಿಯ ನಾಗರೀಕರ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ವಿಧಾನ ಸಭೆ ಉಪ ಸಭಾಧ್ಯಕ್ಷರಾದ ಎನ್. ಯೋಗೀಶ್ ಭಟ್ ಮಾತನಾಡಿ ಹಿರಿಯರನ್ನು ಗೌರವಿಸಬೇಕು.ಇಳಿ ವಯಸ್ಸಿನಲ್ಲಿ ಆರೋಗ್ಯ ತಪಾಸಣೆಯನ್ನು ಮಾಡಿಸುತ್ತಿರಬೇಕು. ಸರ್ಕಾರ ಹಿರಿಯ ನಾಗರಿಕರಿಗೆ ವಿವಿಧ ಯೋಜನೆಗಳನ್ನು ಜಾರಿ ಮಾಡಿದೆ. ಪಿಂಚಣಿ,ಆರೋಗ್ಯ ವಿಮೆ, ಉಚಿತ ಚಿಕಿತ್ಸಾ ಕೇಂದ್ರ ಸೇರಿವೆ. ಮಾನಸಿಕವಾಗಿ ಜರ್ಜರಿತರಾಗಿರುವವರಿಗೆ ಕೌನ್ಸಿಲಿಂಗ್,ಫಿಜಿಯೋಥರಪಿ ಇನ್ನಿತರ ಸೌಲಭ್ಯಗಳನ್ನು ನೀಡಲಾಗುವುದು.
ಸಂಪನ್ಮೂಲ ವ್ಯಕ್ತಿಗಳಾಗಿ ಮಾತನಾಡಿದ ವಕೀಲರಾದ ಉದಯಾನಂದ ಕುಲಾಲ್ ಇವರು ಹಿರಿಯರಿಗೆ ಮಕ್ಕಳು ಅನ್ಯಾಯ ಮಾಡಿದಲ್ಲಿ ಕಾನೂನು ರೀತ್ಯ ಕ್ರಮ ಜರುಗಿಸಬಹುದಾಗಿದೆಯೆಂದು ಹೇಳಿದರು.
ಸಮಾರಂಭದಲ್ಲಿ ಮಹಾನಗರಪಾಲಿಕೆ ಉಪಮೇಯರ್ ಶ್ರೀಮತಿ ಗೀತಾ ಎಸ್.ನಾಯಕ್, ಜಿಲ್ಲಾ ಪಂಚಾಯತ್ ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷರಾದ ಜನಾರ್ಧನ ಗೌಡ,ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಕೆ.ಎನ್.ವಿಜಯಪ್ರಕಾಶ್, ಉಳ್ಳಾಲ ಪುರಸಭಾ ಸದಸ್ಯ ದಿನೇಶ್ ರೈ,ಸಿಡಿಪಿಒ ಪುಟ್ಟಸ್ವಾಮಿ ಮುಂತಾದವರು ಉಪಸ್ಥಿತರಿದ್ದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿದರ್ೇಶಕರಾದ ಶ್ರೀಮತಿ ಶಕುಂತಳಾರವರು ಅತಿಥಿಗಳನ್ನು ಸ್ವಾಗತಿಸಿದರು. ಅಂಗವಿಕಲರ ಕಲ್ಯಾಣಾಧಿಕಾರಿ ಗಂಗಾಧರ ಎಂ.ವಂದಿಸಿದರು.ಬಳಿಕ ಮನೋರಂಜನಾ ಕಾರ್ಯಕ್ರಮವನ್ನು ಎರ್ಪಡಿಸಲಾಯಿತು.