Saturday, October 22, 2011

'ಮರಣ ಕಾರಣ ನಮೂದಿಸಿ'

ಮಂಗಳೂರು,ಅಕ್ಟೋಬರ್.22: ವೈದ್ಯಾಧಿಕಾರಿಗಳು ಮರಣ ಕಾರಣ ವೈದ್ಯಕೀಯ ಪ್ರಮಾಣಪತ್ರದ ನಮೂನೆ-4, 4-ಎ ಯಲ್ಲಿ ಮರಣ ಹೊಂದಿರುವ ವ್ಯಕ್ತಿಯ ಮರಣಕ್ಕೆ ಸಂಬಂಧಿಸಿದ ತಕ್ಷಣ ಹಾಗೂ ಮೂಲ ಕಾರಣಗಳ ಬಗ್ಗೆ ಸರಿಯಾಗಿ ಮಾಹಿತಿ ಭರ್ತಿ ಮಾಡಬೇಕು ಎಂದು ಡಾ. ಜಯಪ್ರಕಾಶ್ ಕೆ. ಹೇಳಿದರು.ಇಂದು ನಗರದ ಮಂಗ ಳಾದೇವಿ ದೇವ ಸ್ಥಾನದ ಬಳಿ ಇರುವ ದೇವಿ ಕೃಪಾ ಸಭಾ ಭವನ ದಲ್ಲಿ ಭಾರ ತೀಯ ಜನನ ಮರಣ ಮಹಾ ನೋಂದ ಣಾಧಿ ಕಾರಿಗಳು ಭಾರತ ಸರ್ಕಾರ ಇವರ ಸೂಚನೆ ಯಂತೆ ಜಿಲ್ಲಾ ಸಂಖ್ಯಾ ಸಂಗ್ರ ಹಣಾ ಧಿಕಾರಿ ಹಾಗೂ ಅಪರ ಜಿಲ್ಲಾ ಜನನ ಮರಣ ಗಳ ರಿಜಿಸ್ಟ್ರಾರ್ ಅವರು ಆಯೋಜಿಸಿದ್ದ 2011-12 ನೇ ಸಾಲಿನ ಮರಣ ಕಾರಣ ವೈದ್ಯಕೀಯ ಪ್ರಮಾಣಪತ್ರ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡುತ್ತಿದ್ದರು.
ವೈದ್ಯಕೀಯ ಪ್ರಮಾಣ ಪತ್ರ ನೀಡುವಾಗ ಸರಿಯಾದ ಕಾರಣ ನೀಡಬೇಕಲ್ಲದೆ ಯಾವುದೇ ಅಥವಾ ಯಾರದೇ ಒತ್ತಡಕ್ಕೆ ಮಣಿಯಬಾರದು ಎಂದ ಅವರು, ಮುಂದಿನ ಎರಡು ವರ್ಷಗಳಲ್ಲಿ ಈ ಅಂಕಿ ಅಂಶಗಳು ಸಮಗ್ರವಾಗಿ ಆನ್ ಲೈನ್ ನಲ್ಲಿ ಲಭ್ಯವಾಗಲಿದೆ ಎಂದು ಕಾರ್ಯಾಗಾರದ ಮುಖ್ಯ ತರಬೇತುದಾರರೂ ಆದ ಡಾ. ಜಯಪ್ರಕಾಶ್ ವಿವರಿಸಿದರು.ರಾಷ್ಟ್ರದಲ್ಲಿ ಮರಣ ಕಾರಣ ವೈದ್ಯಕೀಯ ಪ್ರಮಾಣ ಪತ್ರ ಮರಣಕಾರಣಗಳ ಬಗ್ಗೆ ವೈಜ್ಞಾನಿಕವಾಗಿ ಸಂಗ್ರಹಿಸುವಂತಹ ಮಾಹಿತಿಯಾಗಿರುತ್ತದೆ. 1967ರಿಂದ ರಾಜ್ಯದಲ್ಲಿ ಇದನ್ನು ಆರಂಭಿಸಲಾಗಿದ್ದು, 1969ರ ನಂತರ ಜನನ ಮರಣ ನೋಂದಣಿಯ ಅಧಿನಿಯಮದಡಿ ರೋಗಿಗೆ ಶುಶ್ರೂಷೆ ನೀಡಿದ ವೈದ್ಯರು ಮರಣದ ನಂತರ ಮರಣ ಕಾರಣ ವೈದ್ಯಕೀಯ ಪ್ರಮಾಣ ಪತ್ರ ನೀಡುವುದನ್ನು ಕಡ್ಡಾಯ ಮಾಡಲಾಗಿದೆ. ಮರಣ ಕಾರಣಕ್ಕೆ ಸಂಬಂಧಿಸಿದ ಅಂಕಿ ಅಂಶಗಳನ್ನು ಅಧಿನಿಯಮದ ಪ್ರಕಾರ ವಾರ್ಷಿಕವಾಗಿ ಸಂಗ್ರಹಿಸಲಾಗುತ್ತದೆ. ಇದರಿಂದ ಯೋಜನಾ ಕಾರ್ಯಕ್ರಮಗಳನ್ನು ರೂಪಿಸಲು ನೆರವಾಗುವುದು ಎಂದು ಜನನ ಮರಣ ಮುಖ್ಯ ನೋಂದಣಾಧಿಕಾರಿ ಬಿ.ಜಿ. ಕೃಷ್ಣ ಮೂರ್ತಿ ಅವರು ವಿವರಿಸಿದರು.ಜಾಗತಿಕ ವೈದ್ಯಕೀಯ ಸಂಸ್ಥೆಯ ಆಶ್ರಯದಲ್ಲಿ ಬರುವ ಅಂತಾರಾಷ್ಟ್ರೀಯ ವೈದ್ಯಕೀಯ ಸಮೂಹ ರೋಗಗಳನ್ನು ಅಂತರ ರಾಷ್ಟ್ರೀಯ ರೋಗಗಳ ವರ್ಗೀಕರಣ ಪ್ರಕಾರ ವರ್ಗೀಕರಿಸುತ್ತಾರೆ. ಭಾರತದಲ್ಲಿ ಇದನ್ನು ಮರಣ ಕಾರಣ ವೈದ್ಯಕೀಯ ಪ್ರಮಾಣ ಪತ್ರದ ಕಾರ್ಯಕ್ರಮದಡಿಯಲ್ಲಿ ಅಳವಡಿಸಲಾಗುತ್ತಿದೆ.
ಭಾರತದ ಮಹಾ ನೋಂದಣಾಧಿಕಾರಿಗಳು ಗೊತ್ತುಪಡಿಸಿರುವ ಮರಣ ಕಾರಣ ವೈದ್ಯಕೀಯ ಪ್ರಮಾಣಪತ್ರಗಳ ಕೋಷ್ಟಕಗಳನ್ನು ತಯಾರಿಸಲು ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯ ನಿಗದಿತ ನಮೂನೆ-4, 4-ಎ ಯಲ್ಲಿ ಮರಣ ಕಾರಣಗಳ ಮಾಹಿತಿಯನ್ನು ಸಂಗ್ರಹಿಸುತ್ತದೆ. ಮತ್ತೆ ಈ ಮಾಹಿತಿಗಳನ್ನು ಅಂತರರಾಷ್ಟ್ರೀಯ ರೋಗಗಳ ವರ್ಗೀಕರಣ, ಹತ್ತನೇ ಪರಿಷ್ಕೃತ ಸಂಕೇತ ಪ್ರಕಾರ ಕ್ರೂಢೀಕರಿಸಲಾಗುವುದು. ಪ್ರಮುಖ ಜನಸಂಖ್ಯಾ ಶಾಸ್ತ್ರದ ಸೂಚಿಗಳಾದ ಶಿಶುಮರಣ ಪ್ರಮಾಣ,ತಾಯಂದಿರ ಮರಣ ಪ್ರಮಾಣ ಹಾಗೂ ಮಕ್ಕಳ ಮರಣ ಪ್ರಮಾಣ ಇವುಗಳನ್ನು ಈ ಮಾಹಿತಿಯಿಂದ ತಯಾರಿಸಲಾಗುತ್ತಿದೆ ಎಂದೂ ಅವರು ವಿವರಿಸಿದರು.
ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಕೆ. ರಮೇಶ ಉಪಾಧ್ಯ ಅಧ್ಯಕ್ಷತೆ ವಹಿಸಿದ್ದರು. ಸಹಾಯಕ ನಿರ್ದೇಶಕರಾದ ಪ್ರದೀಪ್ ಡಿ ಸೋಜಾ ಸ್ವಾಗತಿಸಿದರು. ಸಹಾಯಕ ಸಾಂಖ್ಯಿಕ ಅಧಿಕಾರಿ ಎನ್. ಗಣಪತಿ ಭಟ್ ಧನ್ಯವಾದ ಗೈದರು. ನೀತಾ ಅಂಜಲಿನ್ ಡೇಸಾ ಕಾರ್ಯಕ್ರಮ ನಿರೂಪಿಸಿದರು.