Sunday, October 23, 2011

ವೇಣೂರು ಮಹಾಮಸ್ತಕಾಭಿಷೇಕ ಪೂರ್ವಭಾವಿ ಸಭೆ

ಮಂಗಳೂರು,ಅಕ್ಟೋಬರ್.23: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ವೇಣೂರಿನಲ್ಲಿ ಜನವರಿ 28 ರಿಂದ ಫೆಬ್ರವರಿ 5ರವರೆಗೆ ನಡೆಯಲಿರುವ ಬಾಹುಬಲಿ ಸ್ವಾಮಿಯ ಮಹಾಮಸ್ತಕಾಭಿಷೇಕಕ್ಕೆ ಸುಮಾರು 2ಲಕ್ಷ ಭಕ್ತಾದಿಗಳು ದೇಶದೆಲ್ಲೆಡೆಯಿಂದ ಆಗಮಿಸುವ ನಿರೀಕ್ಷೆಯಿದ್ದು ಈ ಸಂಬಂಧ ಅ.22 ಶನಿವಾದಂದು ಜಿಲ್ಲಾ ಉಸ್ತುವಾರಿ ಸಚಿವರಾದ ಜೆ ಕೃಷ್ಣ ಪಾಲೇಮಾರ್ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಭೆ ನಡೆಸಲಾಯಿತು.ಸರ್ಕಾರ ಪ್ರವಾಸೋದ್ಯಮ ಇಲಾಖೆಯಿಂದ ಅಗತ್ಯ ಮೂಲಭೂತ ಸೌಕರ್ಯ ಒದಗಿಸಲು ಎರಡು ಕೋಟಿ ರೂ. ಬಿಡುಗಡೆಗೆ ಆದೇಶಿಸಿದ್ದು ಎಲ್ಲ ನೆರವನ್ನು ನೀಡುವುದಾಗಿ ಉಸ್ತುವಾರಿ ಸಚಿವರು ಹೇಳಿದರು. ಇಲ್ಲಿನ ಸಂಪರ್ಕ ರಸ್ತೆಗಳ ಸುಸ್ಥಿತಿಗೆ 23 ಕೋಟಿ ರೂ. ಗಳ ಪ್ರಸ್ತಾವನೆಯನ್ನು ಸಕರ್ಾರಕ್ಕೆ ಸಲ್ಲಿಸಲಾಗಿದ್ದು, ಮುಖ್ಯಮಂತ್ರಿಗಳು ಮಂಜೂರು ಮಾಡುವ ನಿರೀಕ್ಷೆಯನ್ನು ಜಿಲ್ಲಾ ಉಸ್ತುವಾರಿ ಸಚಿವರು ವ್ಯಕ್ತಪಡಿಸಿದರು. ಬೀದಿ ದೀಪಗಳ ನಿರ್ವಹಣೆ, ಕುಡಿಯುವ ನೀರು ಒದಗಿಸುವ ಬಗ್ಗೆ ಅಗತ್ಯ ನೆರವು ನೀಡುವುದಾಗಿ ಜಿಲ್ಲಾಧಿಕಾರಿ ಡಾ ಎನ್ ಎಸ್ ಚನ್ನಪ್ಪಗೌಡ ಹೇಳಿದರು.ವಸತಿ ಹಾಗೂ ಆಹಾರದ ಶುಚಿತ್ವಕ್ಕೆ ಸಂಬಂಧಿಸಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡುವ ಕುರಿತು ಮಸ್ತಕಾಭಿಷೇಕ ಸಮಿತಿಯ ಜೊತೆಗೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಪಾಲ್ಗೊಳ್ಳುವಿಕೆಯನ್ನು ಖಚಿತಪಡಿಸುವುದರಿಂದ ಜಿಲ್ಲಾಡಳಿತ ಪೂರಕ ನೆರವು ಒದಗಿಸುವುದಾಗಿ ಜಿಲ್ಲಾಧಿಕಾರಿಗಳು ಹೇಳಿದರು. ಸಮಿತಿ ಮತ್ತು ಜಿಲ್ಲಾಡಳಿತ ನಡುವೆ ಸಮನ್ವಯ ಸಾಧಿಸಲು ಸಾರ್ವಜನಿಕ ಸಂಪರ್ಕಧಿಕಾರಿಯನ್ನು ನೀಡುವುದಾಗಿಯೂ ಜಿಲ್ಲಾಧಿಕಾರಿಗಳು ಹೇಳಿದರು.
ಫೆಬ್ರವರಿ ಮೂರು ಮತ್ತು ನಾಲ್ಕರಂದು ಶಾಲೆಗಳಿಗೆ ರಜೆ ಘೋಷಿಸುವ ಬಗ್ಗೆ, ಹೆಚ್ಚುವರಿ ಬಸ್ ಸಂಪರ್ಕ ಕಲ್ಲಿಸುವ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಯಿತು. ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಕೆ ಟಿ ಶೈಲಜಾ ಭಟ್, ಶಾಸಕರಾದ ಅಭಯ ಚಂದ್ರ ಜೈನ್, ಯು ಟಿ ಖಾದರ್, ಪದ್ಮಪ್ರಸಾದ್ ಅಜಿಲರು, ಕೃಷ್ಣ ರಾಜ ಹೆಗಡೆ, ಧರಣೇಂದ್ರ ಕುಮಾರ್ ಉಪಸ್ಥಿತರಿದ್ದರು. ಸಮಿತಿಯ ಇತರ ಪದಾಧಿಕಾರಿಗಳು, ತಹಸೀಲ್ದಾರರು, ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.