Saturday, December 29, 2012

ವಿದೇಶಿ ವಿನಿಮಯ ಗಳಿಸಲು ಜೈವಿಕ ಇಂಧನ ಸಸಿ ಬೆಳೆಸಿ: ಸಿ.ಟಿ.ರವಿ

ಮಂಗಳೂರು, ಡಿಸೆಂಬರ್. 29: ಸಾಂಪ್ರದಾಯಿಕ ಇಂಧನ ಮೂಲಗಳಾದ ಪಟ್ರೋಲ್, ಡೀಸೆಲ್, ಮುಂತಾದ ಇಂಧನಗಳ ಆಮದಿಗಾಗಿ ನಮ್ಮ ದೇಶ ಪ್ರತಿ ವರ್ಷ ರೂ.5ಲಕ್ಷ ಕೋಟಿಗೂ  ಅಧಿಕ ವಿದೇಶಿ ವಿನಿಮಯವನ್ನು ವೆಚ್ಚ ಮಾಡುತ್ತಿದೆ, ಈ ಅಮೂಲ್ಯವಾದ ವಿದೇಶಿ ವಿನಿಮಯವನ್ನು ಉಳಿಸಲು ನಮ್ಮ ರೈತರು ತಮ್ಮ ಹೊಲ, ಗದ್ದೆ,ತೋಟಗಳ ಬದುಗಳಲ್ಲಿ ಹೊಂಗೆ, ಸುರಹೊನ್ನೆ, ಜತ್ರೋಪ, ಬೇವು ಮುಂತಾದ ಗಿಡಗಳನ್ನು ಬೆಳಸಬೇಕೆಂದು ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಸಚಿವರು ಹಾಗೂ ದ.ಕ. ಜಿಲ್ಲಾ ಉಸ್ತುವಾರಿ ಸಚಿವರೂ ಆದ ಸಿ.ಟಿ.ರವಿ ಅವರು ರೈತರಿಗೆ ಕರೆ ನೀಡಿದ್ದಾರೆ.
       ಅವರು ಇಂದು ಸುರತ್ಕಲ್ ಎನ್.ಐ,ಟಿ.ಕೆ. ಯಲ್ಲಿ ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ದಿ ಮಂಡಲಿ, ಬೆಂಗಳೂರು ಹಾಗೂ ಎನ್.ಐ.ಟಿ.ಕೆ. ಸಹಯೋಗದೊಂದಿಗೆ ದಕ್ಷಿಣ ಕನ್ನಡ ಜಿಲ್ಲಾ ಜೈವಿಕ ಇಂಧನ ಮಾಹಿತಿ ಹಾಗೂ ಪ್ರಾತ್ಯಕ್ಷಿಕೆ ಕೇಂದ್ರದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
     ಒಂದು ಅಂದಾಜಿನ ಪ್ರಕಾರ ಒಂದು ಎಕರೆಯಲ್ಲಿ ಹೊಂಗೆ ಬೆಳೆಸಿದರೆ ಈಗಿನ ಮಾರುಕಟ್ಟೆ ದರದಲ್ಲಿ 3ವರ್ಷದ ನಂತರ 30,000/ರೂ ಸಂಪಾದನೆ ಆದರೆ ಅದೇ ಒಂದು ಎಕರೆ ಪ್ರದೇಶದ ಹೊಂಗೆ ಮರಗಳಿಂದ 15ವರ್ಷಗಳ ನಂತರ ರೂ.3ಲಕ್ಷಕ್ಕೂ ಅಧಿಕ ಲಾಭ ಗಳಿಸಬಹುದೆಂದರು. ದೇಶಕ್ಕೂ ಒಳಿತಾಗುವ ರೈತರ ಆರ್ಥಿಕ ಸಂಕಷ್ಟಗಳನ್ನೂ ದೂರ ಮಾಡಬಲ್ಲ ಜೈವಿಕ ಇಂಧನ ಮೂಲ ಸಸ್ಯಗಳನ್ನು ಬೆಳೆಸುವುದು ಅವಶ್ಯಕತೆಗಿಂತ ಅನಿವಾರ್ಯವಾಗಿದೆ ಎಂದು ತಿಳಿಸಿದರು.
     ಕರಾವಳಿ ಪ್ರದೇಶದಲ್ಲಿ ದೊರಕುವ ಬೂತಾಯ ಮಿನಿನಿಂದ ತೆಗೆದ 20ಸಾವಿರ ಟನ್ ಎಣ್ಣೆಯನ್ನು ಬೇರೆ ದೇಶಗಳಿಗೆ ರಫ್ತು ಮಾಡುವ ಬದಲು ಅದರಲ್ಲಿರುವ ಒಮೇಗಾ 3ಫ್ಯಾಟನ್ನು ಬೇರ್ಪಡಿಸಿ ಇಂಧನವನ್ನಾಗಿ ಬಳಕೆ ಮಾಡುವ ಕುರಿತು ಚಿಂತನೆಗಳು ನಡೆಯುತ್ತಿವೆ ಎಂದು ಅವರೆಂದರು.
        ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ದಿ ಮಂಡಳಿಯ ಕಾರ್ಯಕಾರಿ ಅಧ್ಯಕ್ಷರಾದ ವೈ.ಬಿ.ರಾಮಕೃಷ್ಣ ಅವರು ಮಾತನಾಡಿ ಸಂಪ್ರದಾಯ ಇಂಧನಗಳಿಗೆ ಪಯರ್ಾಯವಾಗಿ ಅಸಂಪ್ರದಾಯ ಇಂಧನಗಳನ್ನು ಉತ್ಪಾದಿಸಿ ಬಳಕೆ ಮಾಡುವ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ದಿಸೆಯಲ್ಲಿ ಎಲ್ಲಾ ಜಿಲ್ಲೆಗಳಲ್ಲಿ ಜೈವಿಕ ಇಂಧನ ಮಾಹಿತಿ ಹಾಗೂ ಪ್ರಾತ್ಯಕ್ಷಿಕೆ ಕೇಂದ್ರಗಳನ್ನು ತೆರೆಯಲಾಗಿದೆ, ಪ್ರತಿ ಗ್ರಾಮದಲ್ಲೂ ಇಂತಹ ಕೇಂದ್ರಗಳನ್ನು ತೆರೆಯುವ ಆಲೋಚನೆ ಇದೆ ಎಂದು ತಿಳಿಸಿ ಜೈವಿಕ ಇಂಧನ ಕಾರ್ಯಕ್ರಮಗಳಿಗಾಗಿ ರಾಜ್ಯದಲ್ಲಿ 235ಕೋಟಿಗೂ ಹೆಚ್ಚು ಹಣ ವೆಚ್ಚ ಮಾಡಲಾಗುತ್ತಿದೆ  ಕೆ.ಎಸ್.ಆರ್.ಟಿ.ಸಿ. ಬಸ್ಸುಗಳಲ್ಲಿ ಹೊಂಗೆ ಬೀಜಗಳಿಂದ ತಯಾರಿಸಲಾದ ಜೈವಿಕ ಡಿಸೆಲ್ನ್ನು ಬಳಸಲಾಗುತ್ತಿದ್ದು, ದೊಡ್ಡಬಳ್ಳಾಪುರದ ಜೈವಿಕ ಇಂಧನ  ಘಟಕದಲ್ಲಿ ಉತ್ಪಾದನೆಯಾಗುತ್ತಿರುವ 30,000 ಲೀಟರ್ ಬಯೋ ಡೀಸೆಲ್ನ್ನು ಅಲ್ಲಿಯ ಕೆ.ಎಸ್.ಆರ್.ಟಿ.ಸಿ. ಬಸ್ಸುಗಳಲ್ಲಿ ಶೇ.100ರಷ್ಠು ಬಳಸಲಾಗುತ್ತಿದೆ ಎಂದರು.
ಕರಾವಳಿ ಜಿಲ್ಲೆಗಳಲ್ಲಿ ದೊರಕುವ ಗೇರು ಹಣ್ಣಿನಿಂದ ಇಂಧನ ಉತ್ಪಾದಿಸುವ ಬಗ್ಗೆ ಯೋಜನೆ ತಯಾರಿಯಲ್ಲಿದೆ ಎಂದರು.
     ಸಮಾರಂಭದ ಅಧ್ಯಕ್ಷತೆಯನ್ನು ಮಂಗಳೂರು ಉತ್ತರ ಕ್ಷೇತ್ರ ಶಾಸಕರಾದ ಕೃಷ್ಣ ಜೆ. ಪಾಲೆಮಾರ್ ಅವರು ವಹಿಸಿದ್ದರು. ಕನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ದಿ ಮಂಡಳಿ ವ್ಯವಸ್ಥಾಪಕ ನಿರ್ದೇಶಕರಾದ ಎ.ಕೆ.ಮೊನ್ನಪ್ಪ, ಸದಸ್ಯರಾದ ಅತ್ತಿಹಳ್ಳಿ ದೇವರಾಜ್, ಮುಂತಾದವರು ಭಾಗವಹಿಸಿದ್ದರು.
     ಜೈವಿಕ ಇಂಧನ ಸಸಿಗಳನ್ನು ನೆಟ್ಟು ,ಮಾನ್ಯ ಸಚಿವರು ಹಾಗೂ ಇತರೆ ಗಣ್ಯರು ಈ ಸಂದರ್ಭದಲ್ಲಿ ವಾಹನಗಳಿಗೆ ಜೈವಿಕ ಇಂಧನವನ್ನು  ತುಂಬಿದರು.