Thursday, December 13, 2012

ಆಧಾರ್ ಪ್ರಕ್ರಿಯೆ ದೇಶಕಟ್ಟುವ ಕೆಲಸ:ಅಪರ ಜಿಲ್ಲಾಧಿಕಾರಿ ದಯಾನಂದ

ಮಂಗಳೂರು,ಡಿಸೆಂಬರ್.1: ಆಧಾರ್ ನೋಂದಣಿ ಕಾರ್ಯವೆಂಬುದು ದೇಶ ಕಟ್ಟುವ ಕೆಲಸ; ಈ ಕೆಲಸವನ್ನು ಇಷ್ಟಪಟ್ಟು ಮಾಡಬೇಕೆಂದು ಅಪರ ಜಿಲ್ಲಾಧಿಕಾರಿ ಕೆ ಎ ದಯಾನಂದ ಅವರು ಹೇಳಿದರು.
ಬುಧವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಆಯೋಜಿಸಲಾದ ಆಧಾರ ದ್ವಿತೀಯ ಹಂತದ ನೋಂದಣಿ ಕಾರ್ಯದ ಯೋಜನೆ ಜಿಲ್ಲೆಯಲ್ಲಿ ಅನುಷ್ಠಾನಗೊಳ್ಳುತ್ತಿರುವ ಹಿನ್ನಲೆಯಲ್ಲಿ 'ಪರಿಶೀಲಕರಿಗಾಗಿ' ಆಯೋಜಿಸಲಾಗಿದ್ದ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಆಧಾರ್ ನಡಿ ನೋಂದಣಿಕರಿಸುವುದನ್ನು ಸಮಗ್ರವಾಗಿಸಲು ನಿವೃತ್ತ ಅಧಿಕಾರಿಗಳನ್ನು ಪರಿಶೀಲಕರನ್ನಾಗಿ ನೇಮಿಸಲಾಗಿದ್ದು, ಅವರಿಗಾಗಿ ತರಬೇತಿಯನ್ನು ಆಯೋಜಿಸಲಾಗಿದೆ. ಇದನ್ನು ಮನಸ್ಸಿಟ್ಟು ಮಾಡಬೇಕು. ಪರಿಶೀಲಕರ ಜವಾಬ್ದಾರಿ ಮತ್ತು ಕರ್ತವ್ಯ ಬಹುಮುಖ್ಯವಾಗಿದ್ದು, ಪರಿಶೀಲನೆಯ ನಂತರದ ಪರಿಶೀಲಿಸಿದ ಮಾಹಿತಿಯ ದೋಷಗಳಿಗೆ ಪರಿಶೀಲಕರೇ ಜವಾಬ್ದಾರರು. ಹಾಗಾಗಿ ಕಾರ್ಯಾಗಾರವನ್ನು ಗಂಭೀರವಾಗಿ ತೆಗೆದುಕೊಂಡು ಎಲ್ಲ ಪ್ರಶ್ನೆಗಳಿಗೆ ಉತ್ತರಪಡೆಯುವ ಪ್ರಕ್ರಿಯೆಯು ಇದೇಸಂದರ್ಭದಲ್ಲಾಗಬೇಕು ಎಂದು ಹೇಳಿದರು.
ಪರಿಶೀಲನಾ ಕ್ರಮ, ದಾಖಲಾತಿಗಳ ಪರಿಶೀಲನೆ, ದಾಖಲೆಗಳ ಬಗ್ಗೆ ಸಮಗ್ರ ಮಾಹಿತಿಯನ್ನು ಸಂಪನ್ಮೂಲ ವ್ಯಕ್ತಿಗಳಿಂದ ಪಡೆಯಿರಿ ಎಂದು ಅಪರ ಜಿಲ್ಲಾಧಿಕಾರಿಗಳು ಹೇಳಿದರು.
ವೇದಿಕೆಯಲ್ಲಿ ಮಂಗಳೂರು ಮಹಾನಗರಪಾಲಿಕೆಯ ಆಯುಕ್ತರಾದ ಡಾ ಹರೀಶ್ ಕುಮಾರ್, ಮಂಗಳೂರು ವಿಭಾಗದ ಸಹಾಯಕ ಆಯುಕ್ತರಾದ ಡಾ ವೆಂಕಟೇಶ್ ಉಪಸ್ಥಿತರಿದ್ದರು. ಸಂಪನ್ಮೂಲ ವ್ಯಕ್ತಿಗಳಾಗಿ ಸತ್ಯಮೂರ್ತಿ, ಇಸಾಕ್ ಅವರು ಕಾರ್ಯಾಗಾರ ನಡೆಸಿಕೊಟ್ಟರು. ಸಂಧ್ಯಾ ಅವರು ಧನ್ಯವಾದ ಸಮರ್ಪಿಸಿದರು.