Monday, November 19, 2012

ವಿಕೇಂದ್ರಿಕೃತ ವ್ಯವಸ್ಥೆಯಿಂದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ: ಸಿಇಒ


ಮಂಗಳೂರು, ನವೆಂಬರ್. 19 :-  ಸಬಲ ವಿಕೇಂದ್ರಿಕೃತ ವ್ಯವಸ್ಥೆಯಲ್ಲಿ ಆಡಳಿತಗಾರರು ಅಭಿವೃದ್ಧಿ, ಸೇವೆ, ಸಬಲೀಕರಣವೆಂಬ ಧ್ಯೇಯವನ್ನು ಪಾಲಿಸುವುದರಿಂದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ದೊರಕಿಸಿಕೊಡಲು ಸಾಧ್ಯ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ ಕೆ ಎನ್ ವಿಜಯಪ್ರಕಾಶ್ ಹೇಳಿದರು.
ಅವರಿಂದು ಜಿಲ್ಲಾ ಪಂಚಾಯತ್ ನ ನೇತ್ರಾವತಿ ಸಭಾಂಗಣದಲ್ಲಿ ಮೈಸೂರಿನ ಅಬ್ದುಲ್ ನಜೀರ್ ಸಾಬ್  ರಾಜ್ಯ ಗ್ರಾಮೀಣಾಭಿವೃದ್ಧಿ ಸಂಸ್ಥೆ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸಹಯೋಗದೊಂದಿಗೆ ಆಯೋಜಿಸಲಾದ ರಾಜೀವ್ಗಾಂಧಿ ಪಂಚಾಯತ್ ಸಶಕ್ತೀಕರಣ ಅಭಿಯಾನದಡಿ ಪಂಚಾಯತ್ ರಾಜ್ ಸಂಸ್ಥೆಗಳ ವ್ಯಾಪ್ತಿಗೆ ಬರುವ ಅಧಿಕಾರಿಗಳು ಹಾಗೂ ಚುನಾಯಿತ ಪ್ರತಿನಿಧಿಗಳ ತರಬೇತಿ ಅವಶ್ಯಕತೆಗಳ ವಿನ್ಯಾಸ ಕಾರ್ಯಾಗಾರ ಉದ್ಘಾಟಿಸಿ ಮಾತನಾಡುತ್ತಿದ್ದರು.
ಗ್ರಾಮಸಭೆಗಳು ಸಮಗ್ರವಾಗಿ ಹಾಗೂ ಪಾರದರ್ಶಕವಾಗಿ ನಡೆಯುವುದರಿಂದ ನಮ್ಮ ಇಡೀ ವ್ಯವಸ್ಥೆಯಲ್ಲಿ ಉತ್ತಮ ಸಕಾರಾತ್ಮಕ ಬದಲಾವಣೆ ಸಾಧ್ಯ. ದಕ್ಷಿಣ ಕನ್ನಡ ಈ ನಿಟ್ಟಿನಲ್ಲಿ ಉತ್ತಮ ಹೆಜ್ಜೆಯನ್ನಿಟ್ಟಿದ್ದು ಹಲವು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ. ನಮ್ಮ ಎಲ್ಲಾ ಇಲಾಖೆಗಳು ಯೋಜನೆಗಳನ್ನು ಜನರಿಗೆ ತಲುಪಿಸುವಲ್ಲಿ ಕಾರ್ಯೋನ್ಮುಖವಾಗಿದೆ.
ಜಿಲ್ಲೆಯ 116 ಪಂಚಾಯತ್ ನೂತನ ಕಟ್ಟಡಗಳನ್ನು ನಿರ್ಮಿಸಲು ತಲಾ 12 ಲಕ್ಷದಂತೆ, 87 ಗ್ರಾಮಪಂಚಾಯತ್ ಕಟ್ಟಡಗಳ ದುರಸ್ತಿಗೆ ತಲಾ 3 ಲಕ್ಷದಂತೆ, ಒಟ್ಟು 21.73 ಕೋಟಿ ರೂ.ಗಳ ಪ್ರಸ್ತಾವನೆ ಕಳುಹಿಸಲಾಗಿದೆ. ಇದರಲ್ಲಿ ಜಿಲ್ಲೆಗೊಂದು ಜಿಲ್ಲಾ ಮಟ್ಟದ ಸಂಪನ್ಮೂಲ ಕೇಂದ್ರ, ತಾಲೂಕಿಗೊಂದರಂತೆ 5 ತಾಲೂಕು ಮಟ್ಟದ ಸಂಪನ್ಮೂಲ ಕೇಂದ್ರ, ಗ್ರಾಮಪಂಚಾಯತ್ ಗೆ ಒಬ್ಬರಂತೆ ಫೆಸಿಲಿಟೇಟರ್ ನೇಮಕ, ಯೋಜನಾ ಮತ್ತು ಉಸ್ತುವಾರಿಗೆ ವ್ಯವಸ್ಥೆ ಸೇರಿದಂತೆ ಸಮಗ್ರ ಪ್ರಸ್ತಾವನೆ ಸಲ್ಲಿಸಲಾಗಿದೆ.  ನಮ್ಮಲ್ಲಿ ಸಾಧನೆಗಳನ್ನು ನೋಡಿ ಅನುದಾನ ಬಿಡುಗಡೆ ಮಾಡಲಾಗುತ್ತದೆ. ಹಲವು ವಿನೂತನ ಮಾದರಿಗಳನ್ನು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ನೀಡಿದೆ. ಅಕ್ಷರದಾಸೋಹ ಯೋಜನೆಯಡಿ ಅಡುಗೆ ಕೋಣೆಯಲ್ಲಿ ಕರ್ತವ್ಯ ನಿರ್ವಹಿಸುವವರಿಗೆ ಸ್ವಚ್ಛ ಹಾಗೂ ಸುಂದರವಾಗಿ ಕಾಣಲು ಸಮವಸ್ತ್ರ, ತಲೆಗೆ ಹಾಗೂ ಕೈಗಳಿಗೆ ಗ್ಲೌಸ್ಗಳನ್ನು ಒದಗಿಸಲಾಗುವುದು. 231 ಅಂಗನವಾಡಿಗಳಿಗೆ ವಿದ್ಯುದೀಕರಣ ಸಂಪೂರ್ಣಗೊಳ್ಳಲಿದೆ. ಅಗ್ರಿ ವಿಷನ್ 2020 ಸಿದ್ಧವಾಗಿದ್ದು ಶೀಘ್ರವೇ ಸಕರ್ಾರಕ್ಕೆ ಕಳುಹಿಸಲಾಗುವುದು. ಮಹಾತ್ಮಗಾಂಧೀ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಗುಣಮಟ್ಟದ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ ಎಂದು ಸಿಇಒ ಹೇಳಿದರು. ವೇದಿಕೆಯಲ್ಲಿ ಪುತ್ತೂರಿನ ಮುಂಡೂರು ಪಂಚಾಯತ್ ಸದಸ್ಯರಾದ  ವಸಂತ, ಮೈಸೂರಿನಿಂದ ಸಂಪನ್ಮೂಲ ವ್ಯಕ್ತಿಗಳಾದ ವಿಲ್ಫ್ರೆಡ್ ಡಿ ಸೋಜಾ, ಮನೋಜ್ ಕುಮಾರ್, ಶ್ರೀಮತಿ ಮನೋರಮಾ ಭಟ್, ಜನಶಿಕ್ಷಣ ಸಂಸ್ಥೆಯ ಕೃಷ್ಣ ಮೂಲ್ಯ ಉಪಸ್ಥಿತರಿದ್ದರು. ಉಪಕಾರ್ಯದರ್ಶಿ ಶಿವರಾಮೇಗೌಡರು ಸ್ವಾಗತಿಸಿದರು.
ಕಾರ್ಯಾಗಾರದಲ್ಲಿ ಗುಂಪು ಚಟುವಟಿಕೆ ಮತ್ತು ಸಾಮಥ್ರ್ಯ ಅಭಿವೃದ್ಧಿ ತರಬೇತಿ ಕಾರ್ಯಕ್ರಮಕ್ಕೆ ಪೂರಕವಾಗಿ ತರಬೇತಿ ಅವಶ್ಯಕತೆಗಳ ವಿನ್ಯಾಸ, ಗುರಿ ಮತ್ತು ಉದ್ದೇಶ, ವಿಷಯ ಮತ್ತು ಅವಧಿ, ಮೇಲ್ವಿಚಾರಣೆ ಕುರಿತು ಚರ್ಚೆಗಳು ನಡೆದವು. ಉತ್ತಮ ಗ್ರಾಮಪಂಚಾಯತ್ ಮಾದರಿಗಳ ಬಗ್ಗೆ ಸಂಪನ್ಮೂಲ ವ್ಯಕ್ತಿಗಳು ಮಾಹಿತಿ ನೀಡಿದರು.