Friday, August 19, 2011

ಗ್ರಾಮೀಣ ಪ್ರದೇಶದಲ್ಲೂ ಶಾಲಾ ಮಕ್ಕಳೇ ಸ್ವಚ್ಛತಾ ಸಂದೇಶಕ್ಕೆ ವಿಶೇಷ ರಾಯಭಾರಿಗಳು:ಸಿಇಒ

ಮಂಗಳೂರು,ಆಗಸ್ಟ್.19:ನರಿಂಗಾನ, ಲಾಯಿಲಾದಂತಹ ಗ್ರಾಮಗಳನ್ನು ಮಾದರಿಯಾಗಿಸಿ ಮಾಹಿತಿ, ಶಿಕ್ಷಣ ಮತ್ತು ಸಂವಹನದ ಮೂಲಕ ಮುಖ್ಯಮಂತ್ರಿಗಳ ಜಿಲ್ಲೆಯನ್ನು ರಾಜ್ಯದಲ್ಲೇ ಸ್ವಚ್ಛತೆಯಲ್ಲಿ ಮಾದರಿಯಾಗಿಸುವ ಕೆಲಸವಾಗಬೇಕಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಕೆ.ಎನ್ ವಿಜಯಪ್ರಕಾಶ್ ಹೇಳಿದರು.ಅವರಿಂದು ಜಿಲ್ಲಾ ಪಂಚಾಯತ್ ನ ಮಿನಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸಂಪೂರ್ಣ ನೈರ್ಮಲ್ಯ ಆಂದೋಲನದಡಿ ಸುಸ್ಥಿರತೆ ಕಾಯ್ದುಕೊಳ್ಳಲು ಜನಜಾಗೃತಿ ಮೂಡಿಸುವ ಕಾರ್ಯಕ್ರಮ ಕುರಿತ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದರು.
ಸ್ವಚ್ಛತೆಯಲ್ಲಿ ಜನರ ಪಾಲ್ಗೊಳ್ಳುವಿಕೆ ಮತ್ತು ವಿದ್ಯಾರ್ಥಿಗಳ ಮೂಲಕ ಪ್ರೇರಪಣೆ ನೀಡುವ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡಿದ ಅವರು, ಇಂತಹ ಆಂದೋಲನಗಳಲ್ಲಿ ಸರ್ಕಾರೇತರ ಸಂಘ ಸಂಸ್ಥೆಗಳನ್ನು ಗುರುತಿಸಿ ತೊಡಗಿಸಿಕೊಳ್ಳುವ ಹೊಣೆಯೂ ಜಿಲ್ಲಾಡಳಿತದ್ದು ಎಂದರು. ಸಮಯಮಿತಿ ನಿಗದಿಯೊಂದಿಗೆ ಕಾರ್ಯಕ್ರಮಗಳ ರೂಪುರೇಷೆಗಳಾಗ ಬೇಕು; ಜಿಲ್ಲಾ ಪಂಚಾಯತ್ ನಿಂದ ಎಲ್ಲ ಗ್ರಾಮಪಂಚಾಯತ್ ಗಳಿಗೆ ಮಾರ್ಗಸೂಚಿಗಳು ಹೋಗಬೇಕು; ತಳಮಟ್ಟದಲ್ಲಿ ಅನುಷ್ಠಾನ ಹೊಣೆ ಪಿಡಿಒ ಗಳ ಜೊತೆ ತಾಲೂಕು ಕಾರ್ಯನಿರ್ವಹಣಾಧಿಕಾರಿಗಳದ್ದು. ಕಾರ್ಯಕ್ರಮ ಅನುಷ್ಠಾನ ಸಂದರ್ಭದಲ್ಲಿ ಸ್ಥಳೀಯ ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕೆಂದ ಅವರು, ಗ್ರಾಮಪಂಚಾಯತಿ ಅಧ್ಯಕ್ಷ, ಉಪಾಧ್ಯಕ್ಷರಿಗೆ ವಿಶೇಷ ಕಾರ್ಯಾಗಾರ ಏರ್ಪಡಿಸಲು ಸೂಚನೆ ನೀಡಿದರು. ಮಾರ್ಗಸೂಚಿಯ ಜೊತೆಗೆ ಕಾನೂನು ಉಲ್ಲಂಘಿಸಿದರೆ ದಂಡ ಹಾಕುವ ಕ್ರಮವನ್ನೂ ಪಂಚಾಯತ್ ಆರಂಭಿಸಬಹುದು. ಈ ಎಲ್ಲ ವ್ಯವಸ್ಥೆಗಳನ್ನೂ ತಾನು ಖುದ್ದಾಗಿ ತಿಂಗಳಿಗೊಂದು ಬಾರಿ ಮಾನಿಟರ್ ಮಾಡಲಿರುವೆ ಎಂದು ಸಿಇಒ ಅಧಿಕಾರಿಗಳಿಗೆ ಹೇಳಿದರು. ಪ್ಲಾಸ್ಟಿಕ್ ನಿಷೇಧಕ್ಕೆ ಪರ್ಯಾಯ ಕುರಿತ ಚರ್ಚೆ ಸಭೆಯಲ್ಲಿ ನಡೆಯಿತು. ಆಂದೋಲನ ಮಾದರಿ ತಿಳುವಳಿಕೆಯಿಂದ ಶಾಲಾ ಮಕ್ಕಳ ಮೂಲಕ ಹೆತ್ತವರಿಗೆ ಹಸಿ ಕಸ, ಒಣ ಕಸ, ಶೌಚಾಲಯ ಬಳಕೆಯ ಮಹತ್ವ ತಿಳಿಸುವುದು ಹೆಚ್ಚು ಪರಿಣಾಮಕಾರಿ ಎಂದ ಅವರು, ನಗರದ ಹಲವು ಕಾಲೇಜುಗಳು ಮಹಾನಗರಪಾಲಿಕೆಯೊಂದಿಗೆ ಘನತ್ಯಾಜ್ಯ ವಿಲೇಯಲ್ಲಿ ಸಕ್ರಿಯ ಪಾತ್ರ ವಹಿಸುತ್ತಿದ್ದು, ರೋಶನಿ, ಆಗ್ನಸ್, ಎಂ ವಿ ಶೆಟ್ಟಿ ಕಾಲೇಜು, ಬೆಸೆಂಟ್, ಎಸ್ ಡಿ ಎಂ ಕಾಲೇಜುಗಳ ನೆರವನ್ನೂ, ಪಾಲಿಕೆಯ ಪರಿಸರ ಇಂಜಿನಿಯರ್ ಗಳ ನೆರವನ್ನು ಪಡೆದುಕೊಳ್ಳುವ ಮೂಲಕ ಕಸದಿಂದ ರಸ ಹಾಗೂ ಪುನರ್ ಬಳಕೆಯ ಬಗ್ಗೆಯೂ ನಿರಂತರ ಮಾಹಿತಿ ನೀಡುವ ಕೆಲಸವಾಗಬೇಕಿದೆ ಎಂದರು.
ಪ್ರತೀ ತಾಲೂಕಿನಲ್ಲಿ 5 ಗ್ರಾಮಪಂಚಾಯಿತಿಗಳಂತೆ ಆರಿಸಿ ಮಾದರಿ ನೀಡಿ. ಬಳಿಕ ಎಲ್ಲ ಗ್ರಾಮಪಂಚಾಯಿತಿಗಳು ತಂತಾನೆ ಕಾರ್ಯಪ್ರವೃತ್ತವಾಗುವ ಸಾಧ್ಯತೆಯನ್ನು ಸಿಇಒ ಸಭೆಯಲ್ಲಿ ಹೇಳಿದರು. ಜೊತೆಗೆ ಸಸಿ ನೆಡುವ, ಪರಿಸರ ಪ್ರೀತಿಯನ್ನು ಮಕ್ಕಳಲ್ಲಿ ಬೆಳೆಸುವ ಕೆಲಸವಾಗಬೇಕಿದೆ ಎಂದರು.ರಾಷ್ಟ್ರೀಯ ಹೆದ್ದಾರಿ ಅದರಲ್ಲೂ ಮುಖ್ಯವಾಗಿ ಗುಂಡ್ಯದಲ್ಲಿ ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸಿ, ನಿರ್ವಹಿಸುವ ಕುರಿತು ಹಾಗೂ ಈ ಸಂಬಂಧ ಜಾಗ ಗುರುತಿಸಲು ಪಂಚಾಯಿತಿಗಳಿಗೆ ಸಿಇಒ ಸೂಚಿಸಿದರು.
ಸಭೆಯಲ್ಲಿ ಉಪಕಾರ್ಯದರ್ಶಿ ಶಿವರಾಮೇಗೌಡ, ಮುಖ್ಯ ಯೋಜನಾಧಿಕಾರಿ ನಝೀರ್, ಯೋಜನಾ ನಿರ್ದೇಶಕರು ಸೀತಮ್ಮ, ಜನಶಿಕ್ಷಣ ಸಂಸ್ಥೆಯ ಕೃಷ್ಣ ಮೂಲ್ಯರು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶ್ರೀಮತಿ ಮನೋರಮಾ, ಜಯಶಂಕರ್ ಶರ್ಮಾ,ನಾಗರೀಕ ಸೇವಾ ಟ್ರಸ್ಟ್ ನ ನಾರಾಯಣ ನೀಲಂಗೋಳಿ, ಎಲ್ಲಾ ತಾಲೂಕು ಇಒಗಳು, ಪಿಡಿಒ ಗಳು, ಜಿಲ್ಲಾ ನೆರವು ಘಟಕದ ಮಂಜುಳಾ, ಇಂಜಿನಿಯರ್ ಅರುಣ್, ವಿದ್ಯಾಂಗ ಇಲಾಖೆ ಉಪನಿರ್ದೇಶಕ ಮೋಸೆಸ್ ಜಯಶೇಖರ್, ಸರ್ವಶಿಕ್ಷಣ ಅಭಿಯಾನದ ಅಧಿಕಾರಿ ಶಿವಪ್ರಕಾಶ್, ಆರೋಗ್ಯ ಇಲಾಖೆಯಿಂದ ಜ್ಯೋತಿ ಅವರು ಪಾಲ್ಗೊಂಡಿದ್ದರು.