Friday, January 8, 2010

ಕರಾವಳಿಯಲ್ಲಿ ಕಾನೂನು ಸುವ್ಯವಸ್ಥೆಗೆ ವಿಶೇಷ ನಿಗಾ: ಐಜಿಪಿ ಗೋಪಾಲ್ ಹೊಸೂರು

ಮಂಗಳೂರು ಜ.08: 315 ಕಿ.ಮೀ ಕರಾವಳಿ ಪ್ರದೇಶವಿರುವ 4 ಜಿಲ್ಲೆಗಳ 26 ತಾಲೂಕುಗಳನ್ನು ಒಳಗೊಂಡಿರುವ ಪಶ್ಚಿಮ ವಲಯದ ಭಾಗದಲ್ಲಿ ಕಾನೂನು ಸುವ್ಯವಸ್ಥೆಗೆ ವಿಶೇಷ ಆದ್ಯತೆಯನ್ನು ಪೋಲಿಸ್ ಇಲಾಖೆ ನೀಡುತ್ತಿದೆ. ಕಳೆದ ವರ್ಷ ಈ ಭಾಗದಲ್ಲಿ ಕಾನೂನು ಪರಿಪಾಲನೆಗಾಗಿ ಪೋಲಿಸರು ಮಾಡಿದ ಕೆಲಸ ತೃಪ್ತಿ ತಂದಿದೆ ಎಂದು ಪಶ್ಚಿಮ ವಲಯ ಪೋಲಿಸ್ ಮಹಾ ನಿರೀಕ್ಷಕ ಗೋಪಾಲ್ ಹೊಸೂರು ಹೇಳಿದ್ದಾರೆ.

ಮಂಗಳೂರಿನಲ್ಲಿ ಮಾದ್ಯಮಾ ಗೋಷ್ಟಿಯಲ್ಲಿ ಈ ಬಗ್ಗೆ ವಿವರಗಳನ್ನು ನೀಡಿದ ಐಜಿಪಿ ಹೊಸೂರು ಅವರು ತಮ್ಮ ವ್ಯಾಪ್ತಿಗೆ ಒಳಪಡುವ ಪಶ್ಚಿಮ ವಲಯ ಪ್ರದೇಶ 25,837 ಚದರ ಕೀ.ಮೀ ವಿಸ್ತಾರ ಹೊಂದಿದ್ದು 55 ಲಕ್ಷ ಜನಸಂಖ್ಯೆ,14,785 ಚದರ ಅಡಿ ಅರಣ್ಯ ಪ್ರದೇಶ ಹೊಂದಿದೆ. ಕರ್ನಾಟಕದ 315 ಕೀ.ಮೀಟರ್ ಹಾಗೂ ನೆರೆಯ ಗಡಿ ರಾಜ್ಯಗಳಾದ ಕೇರಳ 108 ಮತ್ತು ಗೋವಾದ 20 ಕೀ.ಮೀ ಗಡಿ ಪ್ರದೇಶವು ಸೇರಿದೆ. ಈ ಹಿನ್ನಲೆಯಲ್ಲಿ ಈ ಭಾಗದ ಪೋಲಿಸರ ಜವಾಬ್ದಾರಿ ಅತೀ ಹೆಚ್ಚಾಗಿದೆ. 3,590 ವಿವಿಧ ಧಾರ್ಮಿಕ ಕೇಂದ್ರಗಳು, 100 ವಿಶೇಷ ಸಂರಕ್ಷಿತ ಪ್ರದೇಶಗಳ ರಕ್ಷಣೆಯ ಜವಾಬ್ದಾರಿ ಕೂಡ ಇಲ್ಲಿನ ಪೋಲಿಸರ ಮೇಲಿದ್ದು ಒಟ್ಟಾರೆಯಾಗಿ ಇವೆಲ್ಲವನ್ನೂ ಕಳೆದ 2009- 2010 ರಲ್ಲಿ ಯಶಸ್ವಿಯಾಗಿ ನಿಭಾಯಿಸಲಾಗಿದೆ ಎಂದರು.

ಭೂಗತ ಪಾತಕಿಗಳ ಬಂಧನಕ್ಕೆ ಕ್ರಮ: ದೇಶದ ಹೊರಗಿದ್ದು, ಕರಾವಳಿ ಭಾಗದಲ್ಲಿ ಭೂಗತ ಚಟುವಟಿಕೆಗಳನ್ನು ನಡೆಸುವ ಮೂಲಕ ಸಮಾಜದಲ್ಲಿ ಅಂಶಾತಿಯನ್ನು ಉಂಟುಮಾಡುತ್ತಿರುವ ಭೂಗತ ಪಾತಕಿಗಳನ್ನು ಮಟ್ಟಹಾಕಲು ಪೋಲಿಸ್ ಇಲಾಖೆ ಕ್ರಮ ಕೈಗೊಂಡಿದ್ದು, ಈ ಹಿನ್ನೆಲೆಯಲ್ಲಿ ಭೂಗತ ಪಾತಕಿಗಳಾದ ರವಿ ಪೂಜಾರಿ, ಬನ್ನಂಜೆ ರಾಜಾ,ಕೊರಗ ವಿಶ್ವನಾಥ ಶೆಟ್ಟಿ,ಮತ್ತು ಮಾಡೂರು ಯೂಸುಫ್ ಅವರುಗಳ ಬಂಧನಕ್ಕೆ ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡಲಾಗಿದೆ.ಕರಾವಳಿ ಭಾಗದಲ್ಲಿ 25 ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಬೇಕಾದ ಮತ್ತು ಈಗಾಗಲೇ ದುಬೈ ಪೋಲಿಸರಿಂದ ಬಂಧನಕ್ಕೆ ಒಳಪಟ್ಟ ಬನ್ನಂಜೆ ರಾಜಾ ಅವನ ಹಸ್ತಾಂತರಕ್ಕೆ ಅಲ್ಲಿನ ಅಧಿಕಾರಿಗಳೊಂದಿಗೆ ಯಶಸ್ವಿ ಮಾತುಕತೆ ನಡೆದಿದ್ದು, ಶೀಘ್ರದಲೇ ಈ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದರು.
ಕರಾವಳಿಯ ಜನರ ಸಾಮಾಜಿಕ ನೆಮ್ಮದಿ ಹಾಳು ಮಾಡುತ್ತಿದ್ದ 1827 ಜನರ ಮೇಲೆ ರೌಡಿ ಶೀಟ್ ಹಾಕಲಾಗಿದೆ. 1233 ಜನ ಕಮ್ಯುನಲ್ ಗೂಂಡಾಗಳನ್ನು ಗುರ್ತಿಸಲಾಗಿದ್ದು, ಪೋಲಿಸ್ ಇಲಾಖೆ ಇವರುಗಳ ಮೇಲೆ ಕ್ರಮಕ್ಕೆ ಮುಂದಾಗಿದೆ, ಅಲ್ಲದೇ ಈ ಭಾಗದಲ್ಲಿ ಮತೀಯ ಸೌಹಾರ್ದತೆಯನ್ನು ಕಾಯ್ದುಕೊಳ್ಳುವಲ್ಲಿ ಆನೇಕ ಕ್ರಮಗಳನ್ನು ಜಾರಿಗೆ ತಂದಿದೆ. ಯುವ ಸಮಾಜದಲ್ಲಿ ಕಂಟಕವಾಗಿದ್ದ ಮಾದಕ ದ್ರವ್ಯಗಳ ತಡೆಗೂ ಇಲಾಖೆ ವಿಶೇಷ ಗಮನ ನೀಡಿದ್ದು 3/4 ಟನ್ ಗಾಂಜಾವನ್ನು ವಶಪಡಿಸಿಕೊಂಡಿದೆ ಎಂದು ಮಾಹಿತಿ ನೀಡಿದರು.
ನಕ್ಸಲ್ ಸಮಸ್ಯೆಗೆ ಪರಿಹಾರ: ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಸ್ಥಳೀಯ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪೋಲಿಸರು ನಡೆಸಿದ ಕಾರ್ಯಾಚರಣೆಯಿಂದ ನಕ್ಸಲರ ಕಾರ್ಯ ಚಟುವಟಿಕೆಗಳಿಗೆ ತೀವ್ರ ಹಿನ್ನಡೆ ಉಂಟಾಗಿದೆ ಎಂದ ಐಜಿಪಿ ಅವರು ನಕ್ಸಲಿಸಂ ನಿಂದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಿಲ್ಲ ಎಂಬ ಭಾವನೆ ಅಲ್ಲಿನ ಜನರಲ್ಲಿ ಮೂಡಿದೆ ಎಂದು ಅವರು ಹೇಳಿದರು.
ದಕ್ಷಿಣ ಕನ್ನಡ ಎಸ್ಪಿ ಡಾ. ಸುಬ್ರಹ್ಮಣ್ಯೇಶ್ವರ ರಾವ್, ಎಡಿಷನಲ್ ಎಸ್ಪಿ ಆರ್. ರಮೇಶ್ ಪತ್ರಿಕಾಗೋಷ್ಟಿಯಲ್ಲಿ ಉಪಸ್ಥಿತರಿದ್ದರು.