Thursday, January 7, 2010

ಅಲ್ಪಸಂಖ್ಯಾತರಿಗೆ ಅರಿವು ಶಿಬಿರ: ಅಹವಾಲು ಸ್ವೀಕಾರ

ಮಂಗಳೂರು,ಜ.7:ರಾಜ್ಯ ಸರ್ಕಾರ ಅಲ್ಪಸಂಖ್ಯಾತರ ಅಭಿವೃದ್ಧಿಗೆ 187ಕೋಟಿ ರೂ.ಗಳ ಸವಲತ್ತನ್ನು ನೀಡಿದ್ದು,ಅವರಿಗಾಗಿ ಹಲವು ಯೋಜನೆಗಳನ್ನು ರೂಪಿಸಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಜೆ.ಕೃಷ್ಣ ಪಾಲೇಮಾರ್ ಅವರು ಹೇಳಿದರು.

ಅವರಿಂದು ನಗರದ ಪುರ ಭವನದಲ್ಲಿ ರಾಜ್ಯ ಅಲ್ಪ ಸಂಖ್ಯಾತರ ಆಯೋಗ,ದ.ಕ.ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ಸಹಭಾಗಿತ್ವದಲ್ಲಿ ಅಲ್ಪಸಂಖ್ಯಾತರ ಸಮುದಾಯದವರಿಗೆ ಅರಿವು ಮೂಡಿಸುವ ಶಿಬಿರ ಉದ್ಘಾಟಿಸಿ ಮಾತನಾಡುತ್ತಿದ್ದರು.ಯೋಜನೆಗ ಸಮರ್ಪಕ ಅನುಷ್ಟಾನಕ್ಕೆ ಫಲಾನುಭವಿಗಳಿಗೆ ಅರಿವು ಮೂಡಿಸುವ ಪ್ರಯತ್ನಗಳಾಗಬೇಕು.ಕಾರ್ಯಾಗಾರಗಳ ಬಳಿಕ ಶಿಬಿರದ ಸದುಪಯೋಗವಾದ ಬಗ್ಗೆಯೂ ಮೌಲ್ಯಮಾಪನ ಮಾಡುವಂತಾಗಬೇಕು. ಅಧಿಕಾರಿಗಳು ತಮ್ಮ ಕರ್ತವ್ಯವನ್ನು ಸೇವೆಯೆಂದು ಪರಿಗಣಿಸಿ ಪ್ರೀತಿಯಿಂದ ಕೆಲಸಮಾಡಬೇಕು ಎಂದು ಸಚಿವರು ಹೇಳಿದರು.

ಶಾಸಕ ಯೋಗಿಶ್ ಭಟ್ ಅವರು ಮಾತ ನಾಡಿ,ರಾಜ್ಯ ಸರ್ಕಾರ ಆಯೋಗ, ನಿಗಮಗಳಿಗೆ ಸಾಕಷ್ಟು ಅನುದಾನ ನೀಡಿದ್ದು, ಇದರಿಂದ ಸ್ವಾವಲಂಬಿ, ಸ್ವ ಉದ್ಯೋಗಗಳು ಹೆಚ್ಚಿ ಜನರಿಗೆ ಲಾಭವಾಗಬೇಕು.ನಿಗದಿತ ಗುರಿ ಸಾಧನೆಗೆ ಎಲ್ಲರೂ ಒಂದಾಗಿ ಶ್ರಮಿಸಬೇಕಲ್ಲದೆ,ಹೆಚ್ಚಿನ ತಿಳುವಳಿಕೆ ನೀಡುವ ಕಾರ್ಯವಾಗಬೇಕು ಎಂದರು. ರಾಜ್ಯ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷ ಖುಸ್ರೋ ಖರೈಷಿ,ಇದುವರೆಗೆ 10ಜಿಲ್ಲೆಗಳಲ್ಲಿ ಶಿಬಿರವನ್ನು ಆಯೋಜಿಸಿದ್ದು,ಅಲ್ಪಸಂಖ್ಯಾತರು ಇದರ ಸದುಪಯೋಗವನ್ನು ಪಡೆಯಬೇಕೆಂದರು.ಸಭೆಯಲ್ಲಿ ರಾಜ್ಯ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಎನ್.ಬಿ.ಅಬೂಬಕ್ಕರ್, ಎಪಿಎಂಸಿ ಅಧ್ಯಕ್ಷ ಕೆ.ಕೃಷ್ಣರಾಜ ಹೆಗ್ಡೆ, ರಾಜ್ಯ ಅಲ್ಪಸಂಖ್ಯಾತ ಆಯೋಗದ ಸದಸ್ಯರಾದ ಪೀರ್ ಖಾನ್,ಪದ್ಮಾ ಜೈನ್, ಶಾಹಿದಾ ಬೇಗಂ,ಅಂತೊನಿ ವಿ.ಫರ್ನಾಂಡಿಸ್, ಬಂತೆಬೋದಿದತ್ತ,ಜಗದೀತ್ ಸಿಂಘ್ ಶೇಟಿ,ಶಿಕ್ಷಣ ಹಾಗೂ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ರಾಜಶ್ರೀ ಹೆಗಡೆ, ಪ್ರಧಾನಮಂತ್ರಿ 15ಅಂಶ ಕಾರ್ಯಕ್ರಮ ಅನುಷ್ಠಾನ ಸದಸ್ಯ ಜೆ.ಮಹಮ್ಮದ್,ಲಾರೆನ್ಸ್ ಪಿಂಟೊ,ಅಪರಜಿಲ್ಲಾಧಿಕಾರಿ ಪ್ರಭಾಕರ ಶರ್ಮಾ, ಅಡಿಷನಲ್ ಎಸ್ ಪಿ ರಮೇಶ್,ಬಿಸಿಎಂ ಅಧಿಕಾರಿ ಎಸ್.ಎಸ್.ಕಾಳೆ ಅವರು ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ಬಳಿಕ ಅಹವಾಲು ಸ್ವೀಕಾರ,ಮೌಖಿಕ ದೂರುಗಳಿಗೆ ಅಧಿಕಾರಗಳ ಉತ್ತರ ನೀಡಿದರು.ಅಲ್ಪಸಂಖ್ಯಾತ ನಿಗಮ ಮತ್ತು ಇಲಾಖೆಯ ಸೌಲಭ್ಯಗಳ ಬಗ್ಗೆ,ಪೊಲೀಸ್ ದೌರ್ಜನ್ಯದ ಬಗ್ಗೆ ಹೆಚ್ಚಿನ ದೂರುಗಳಿದ್ದು, ಸಭೆಯಲ್ಲಿ ಅಧಿಕಾರಿಗಳು ಉತ್ತರಿಸಿದರು.