Tuesday, January 5, 2010

ಸ್ಥಳೀಯವಾಗಿ ಘನತ್ಯಾಜ್ಯ ವಿಲೇವಾರಿ:ಡಿ ಸಿ ಸಲಹೆ

ಮಂಗಳೂರು,ಜ.5:ಘನತ್ಯಾಜ್ಯ ವಿಲೇವಾರಿ ಪ್ರಸಕ್ತ ಸನ್ನಿವೇಶದಲ್ಲಿ ಸವಾಲಾಗಿದ್ದು,ತ್ಯಾಜ್ಯ ವಿಲೇವಾರಿಗೆ ಜಾಗ ಮೀಸಲಿಡಲು ಎಲ್ಲೂ ಜನರು ಅವಕಾಶ ನೀಡದ ಪರಿಸ್ಥಿತಿ ಇದೆ ಎಂದು ಜಿಲ್ಲಾಧಿಕಾರಿ ವಿ.ಪೊನ್ನುರಾಜ್ ಹೇಳಿದರು.

ಅವರು ಇಂದು ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿಯ ಪೌರಾಡಳಿತ ಸಂಸ್ಥೆಗಳು ಮತ್ತು ಸ್ವಯಂಸೇವಾ ಸಂಸ್ಥೆಗಳ ಪ್ರತಿನಿಧಿಗಳಿಗೆ ಘನತ್ಯಾಜ್ಯ ನಿರ್ವಹಣೆ ಕಾರ್ಯಾಗಾರ:ಕಲಿಕೆ ಕಾರ್ಯಕ್ರಮವನ್ನು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡುತ್ತಿದ್ದರು.ಸಮುದಾಯ ಕೇಂದ್ರಿತ ಪರಿಸರ ಸಂರಕ್ಷಣೆಯನ್ನು ಸ್ಥಳೀಯವಾಗಿ ರೂಪಿಸಿ ಅಳವಡಿಸಿಕೊಂಡರೆ ಘನತ್ಯಾಜ್ಯ ವಿಲೇವಾರಿ ಯಶಸ್ವಿಯಾಗಲಿದೆ ಎಂದು ಅಭಿಪ್ರಾಯಪಟ್ಟ ಅವರು, ಇಂದು ನಮ್ಮಲ್ಲಿ ಘನತ್ಯಾಜ್ಯ ವಿಲೇವಾರಿ ಅಂದರೆ ನಿಗದಿತ ಪ್ರದೇಶದಲ್ಲಿ ಕಸವನ್ನು ಸುರಿದು ಅದು ಶೇ100ರಷ್ಟು ಪರಿಣಾಮಕಾರಿಯಾಗಿ ಕರ್ತವ್ಯ ನಿರ್ವಹಿಸದೆ ಪರಿಸರ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ದುರ್ನಾತ ಬೀರುವ ಸ್ಥಳವಾಗಿ ಪರಿಣಮಿಸಿದೆ. ಇದರಿಂದ ಪರಿಸರ ಕಲುಷಿತ ಗೊಳ್ಳುವುದಲ್ಲದೆ,ನಗರ ಹಾಗೂ ಗ್ರಾಮೀಣರ ನಡುವಿನ ಸಾಮರಸ್ಯದ ಬದುಕಿನ ಮೇಲೂ ಪರಿಣಾಮ ಬೀರಿದೆ.

ನಮ್ಮ ಕಸ ಸಂಗ್ರಹ ವ್ಯವಸ್ಥೆ ಯಲ್ಲೇ ಅಮೂಲಾಗ್ರ ಬದಲಾವಣೆ ತರಬೇಕಲ್ಲದೆ, ಮನೆಮನೆಯಿಂದ ಕಸ ಸಂಗ್ರಹಿಸಿ,ಸ್ಥಳೀಯವಾಗಿಯೇ ಅದನ್ನು ವಿಭಜಿಸಿ ಕಸದಿಂದ ರಸ ತೆಗೆಯುವುದಲ್ಲದೆ,ಲಾಭವನ್ನು ಗಳಿಸುವ ಬಗ್ಗೆ ತರಬೇತಿ ಮತ್ತು ಈ ಕುರಿತು ಕಲಿತುದನ್ನು ಅನುಷ್ಠಾನಕ್ಕೆ ತರಲು ಆದ್ಯತೆ ನೀಡಬೇಕೆಂದು ಜಿಲ್ಲಾಧಿಕಾರಿಗಳು ಹೇಳಿದರು
ಇಡೀ ಜಿಲ್ಲೆಯ ಕಸವನ್ನು ಒಂದೆಡೆ ಅಥವಾ ಗ್ರಾಮೀಣ,ಗಡಿ ಪ್ರದೇಶಕ್ಕೆ ಸಾಗಿಸುವುದರಿಂದ ಹಲವು ಸಮಸ್ಯೆಗಳು ಉದ್ಭವವಾಗಿದ್ದು, ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ ದೈನಂದಿನ ಕಸವಿಲೇವಾರಿಯಲ್ಲಿ ಆದ ತೊಂದರೆಯಿಂದಾಗಿ ಜನರು ಇಂತಹ ಘಟಕಗಳ ಸ್ಥಾಪನೆಯನ್ನೇ ವಿರೋಧಿಸುವಂತಾಗಿದೆ ಎಂದರು.

ಉದ್ಘಾಟನಾ ಸಮಾರಂಭದಲ್ಲಿ ಪ್ರತಿಜ್ಞಾ ವಿಧಿ ಬೋಧನೆಯ ಬಳಿಕ ರಾಜ್ಯ ನಗರಾಭಿವೃದ್ಧಿ ಸಂಸ್ಥೆಯ ಹುಡ್ಕೊ ಪೀಠದ ಪ್ರಾಧ್ಯಾಪಕರಾದ ಪ್ರೊ.ವಿ.ಜಗನ್ನಾಥ್ ಅವರು ಕಸವನ್ನು ಸಂಪನ್ಮೂಲವಾಗಿ ಪರಿವರ್ತಿಸುವ ವಿವರ ನೀಡಿದರು.ಮಂಗಳೂರು ಮಹಾ ನಗರ ಪಾಲಿಕೆ ಮೇಯರ್ ಶಂಕರ್ ಭಟ್, ಉಪಮೇಯರ್ ಶ್ರೀಮತಿ ರಜನೀ ದುಗ್ಗಣ್ಣ, ನಗರ ಪಾಲಿಕೆ ಆಯುಕ್ತ ಡಾ.ವಿಜಯಪ್ರಕಾಶ್ ಸಮಾರಂಭದಲ್ಲಿ ಪಾಲ್ಗೊಂಡರು. ಜಿಲ್ಲಾ ತರಬೇತಿ ಸಂಸ್ಥೆಯ ಉಪಪ್ರಾಚಾರ್ಯ ಎನ್. ದೇವೇಂದ್ರ ಪ್ರಭು ಸ್ವಾಗತಿಸಿದರು. ಎರಡು ದಿನಗಳ ಕಾಲ ಕಾರ್ಯಾಗಾರ ನಡೆಯಲಿದೆ.