Wednesday, January 13, 2010

21ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹಕ್ಕೆ ಚಾಲನೆ

ಮಂಗಳೂರು,ಜ.13:ನಗರದ ವಾಹನದಟ್ಟಣೆ ಮತ್ತು ಅಪಘಾತಗಳನ್ನು ಕಡಿಮೆ ಮಾಡಲು,ರಸ್ತೆ ನಿಯಮ ಪಾಲನೆಗೆ ಆದ್ಯತೆ ನೀಡಲು ಜಿಲ್ಲಾಡಳಿತ ಸಮಗ್ರ ಅಧ್ಯಯನ ನಡೆಸಿ ಸ್ಟೇಟ್ ಬ್ಯಾಂಕ್ ನ ಖಾಸಗಿ ಬಸ್ ನಿಲ್ದಾಣವನ್ನು ಸ್ಥಳಾಂತರಿಸಲು ಮತ್ತು ಜಿಪಿಎಸ್ ವ್ಯವಸ್ಥೆ ಅಳವಡಿಸಲು ನಿರ್ಧರಿಸಿದ್ದು,ಸಾರ್ವಜನಿಕರು ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ವಿ.ಪೊನ್ನುರಾಜ್ ತಿಳಿಸಿದರು.

ಸುರಕ್ಷಿತ ಚಾಲನೆ ಜೀವನ ರಕ್ಷೆ ಎಂಬ ಧ್ಯೇಯದೊಂದಿಗೆ ಜಿಲ್ಲಾ ಪೊಲೀಸ್ ಅತಿಥಿಗೃಹದಲ್ಲಿ 21ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ, ಜಿಲ್ಲಾಧಿಕಾರಿ ಇಂತಹ ಆಚರಣೆಗಳಿಂದ ಆಗುವ ಅನುಭವಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರಲು,ಕಾರ್ಯಕ್ರಮದ ಫೀಡ್ ಬ್ಯಾಕ್ ಪಡೆಯಲು ಈ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಲು ಜಿಲ್ಲಾಡಳಿತ ನಿರ್ಧರಿಸಿದೆ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾ ಧಿಕಾರಿ ಡಾಎ. ಸುಬ್ರಹ್ಮಣ್ಯೇಶ್ವರ ರಾವ್ ಮಾತನಾಡಿ, ಅಪಘಾತದ ಆಘಾತಗಳ ತೀವ್ರತೆಯ ಬಗ್ಗೆ ಹೇಳಿದರು. ಟ್ರಾಫಿಕ್ ವಿಭಾಗಕ್ಕೆ 50 ಲಕ್ಷ ರೂ.ಗಳು ಬಿಡುಗಡೆಯಾಗಿದ್ದು,ಇದರಿಂದ ಟ್ರಾಫಿಕ್ ಗೆ ಅಗತ್ಯವಿರುವ ಪರಿಕರಗಳನ್ನು ಖರೀದಿಸುವುದಾಗಿ ಹೇಳಿದರಲ್ಲದೆ,ರಸ್ತೆ ಸುರಕ್ಷೆ,ಸುವ್ಯವಸ್ಥೆ ಬಗ್ಗೆ ಸಾರ್ವಜನಿಕರು 2424204 ನ್ನು ಸಂಪರ್ಕಿಸಿ ತಮ್ಮ ಸಲಹೆಗಳನ್ನು ದಾಖಲಿಸಬಹುದು ಎಂದರು.

ಅಧ್ಯಕ್ಷತೆ ವಹಿಸಿದ್ದ ಪಶ್ಚಿಮ ವಲಯ ಐಜಿಪಿ ಗೋಪಾಲ್ ಬಿ.ಹೊಸೂರ್ ಅವರು,ಹೆಚ್ಚಿನ ಅಪಘಾತಗಳು ಚಾಲಕರ ನಿರ್ಲಕ್ಷ್ಯದಿಂದಾಗುತ್ತದೆ ಎಂದರು.ಟ್ರಾಫಿಕ್ ಕಾನ್ಸಟೇಬಲ್ ಗಳ ಕಾರ್ಯವೈಖರಿಯನ್ನು ಶ್ಲಾಘಿಸಿದ ಅವರು,ನಮ್ಮಲ್ಲಿ ನಾಗರೀಕ ಪ್ರಜ್ಞೆ ಜಾಗೃತವಾಗಿರಬೇಕು ಎಂದರು.ಆರ್ ಟಿ ಒ ಪುರುಷೋತ್ತಮ ಜೆ ಉಪಸ್ಥಿತರಿದ್ದರು. ಮಂಜುನಾಥ್ ಶೆಟ್ಟಿ ವಂದಿಸಿದರು.