Wednesday, January 20, 2010

ಅನುದಾನ ಸದ್ಬಳಕೆ ಮಾಡಿ ಕ್ರಿಯಾವರ್ಧಕಗಳಂತೆ ಕರ್ತವ್ಯನಿರ್ವಹಿಸಿ: ಸಂಸದ ನಳಿನ್ ಕುಮಾರ್

ಮಂಗಳೂರು,ಜ.20:ಕೇಂದ್ರ ಸರ್ಕಾರದಿಂದ ರೂಪಿಸಲಾಗಿರುವ ಜನಪರ ಯೋಜನೆಗಳನ್ನು ಕೇಂದ್ರ ಸ್ಥಾನದಲ್ಲಿ ಕುಳಿತ ಅನುಷ್ಠಾನಕ್ಕೆ ತರಲು ಯತ್ನಿಸದೆ ಸ್ಥಳಗಳಿಗೆ ಭೇಟಿ ನೀಡಿ ಕಾರ್ಯಕ್ರಮದ ಪರಿಣಾಮಕಾರಿ ಅನುಷ್ಠಾನಕ್ಕೆ ಕಾರ್ಯೋನ್ಮುಖರಾಗಿ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.

ಅವರಿಂದು ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಏರ್ಪಡಿಸಲಾಗಿದ್ದ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.ಕೇಂದ್ರ ಸರ್ಕಾರದ ಯೋಜನೆಯಡಿ ರೂಪಿಸಲ್ಪಟ್ಟ ಗ್ರಾಮೀಣ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದ ಅವರು, ತಾಲೂಕು ಮತ್ತು ಗ್ರಾಮ ಪಂಚಾಯತಿ ಮಟ್ಟದಲ್ಲಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ, ಇಂದಿರಾ ಆವಾಸ್ ಯೋಜನೆ,ಸ್ವರ್ಣಜಯಂತಿ ಗ್ರಾಮ ಸ್ವರೋಜ್ ಗಾರ್ ಯೋಜನೆ,ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ,ಗ್ರಾಮೀಣ ನೀರು ಸರಬರಾಜು ಯೋಜನೆ,ಸಂಪೂರ್ಣ ಸ್ವಚ್ಛತೆಯಲ್ಲಾದ ಪ್ರಗತಿ ಪರಿಶೀಲನೆ ನಡೆಸಿ ಸಲಹೆ ಹಾಗೂ ಸೂಚನೆಗಳನ್ನು ನೀಡಿದರು.
ಜಿಲ್ಲೆಯಲ್ಲಿ ಉದ್ಯೋಗ ಖಾತರಿ ಯೋಜನೆಯಡಿ ಕೆಲವು ತಾಲೂಕು ಮುಂಚೂಣಿಯಲ್ಲಿರುವುದಕ್ಕೆ ಮತ್ತೆ ಕೆಲವು ಹಿಂದುಳಿದಿರುವುದರ ಕುರಿತು ವಿವರವಾದ ಮಾಹಿತಿಯನ್ನು ತಾಲೂಕು ಕಾರ್ಯನಿರ್ವಹಣಾಧಿಕಾರಿಗಳಿಂದ ಪಡೆದ ಅವರು, ಈ ಬಗ್ಗೆ ಜನರಿಗೆ ಸೂಕ್ತ ಮಾಹಿತಿ ನೀಡುವಂತೆ ಹೇಳಿದರು. ಜಿಲ್ಲೆಯಲ್ಲಿ ಮನೆ ನಿರ್ಮಾಣ ಕಾಮಗಾರಿ ಕುಂಠಿತಗೊಂಡಿದ್ದು, ನಿಗದಿತ ಗುರಿ ಮತ್ತು ಸಾಧನೆಗಳ ಅವಲೋಕನ ಮಾಡಿ ಗುರಿ ತಲುಪುವಲ್ಲಿ ವಿಫಲರಾದರೆ ಕಠಿಣ ಕ್ರಮ ತೆಗೆದುಕೊಳ್ಳುವ ಎಚ್ಚರಿಕೆ ನೀಡಿದರು. ಮಾಹಿತಿಗಳನ್ನು ಸ್ಪಷ್ಟವಾಗಿ ಮತ್ತು ಸತ್ಯ ಮಾಹಿತಿ ನೀಡಬೇಕೆಂದೂ ಈ ಸಂದರ್ಭದಲ್ಲಿ ಅಧಿಕಾರಿಗಳಿಗೆ ಸೂಚಿಸಿದರು. ಎಲ್ಲ ತಾಲೂಕುಗಳಿಗೂ ಸಮಾನವಾಗಿ ಅಭಿವೃದ್ಧಿ ಯೋಜನೆಗಳನ್ನು ಹಂಚಿ ಅನುಷ್ಠಾನಕ್ಕೆ ತರುವಂತೆ ಸೂಚಿಸಿದ ಅವರು, ರಸ್ತೆ ಕಾಮಗಾರಿಗಳ ಸಂಪೂರ್ಣ ವಿವರ ಪಡೆದರಲ್ಲದೆ, ಕಾಮಗಾರಿಗಳ ಬಗ್ಗೆ ಅಧಿಕಾರಿಗಳು ಹೆಚ್ಚಿನ ಆಸಕ್ತಿ ವಹಿಸಿ ಅನುಷ್ಠಾನಕ್ಕೆ ತರಲು ಸೂಚನೆ ನೀಡಿದರು.ಜಿ.ಪಂ. ಅಧ್ಯಕ್ಷ ಸಂತೋಷ್ ಕುಮಾರ್ ಭಂಡಾರಿ,ಉಪಾಧ್ಯಕ್ಷ ಜಗನ್ನಾಥ್ ಸಾಲಿಯಾನ್, ಯೋಜನಾ ನಿರ್ದೇಶಕರಾದ ಸೀತಮ್ಮ ವೇದಿಕೆಯಲ್ಲಿದ್ದರು. ಸಭೆಯಲ್ಲಿ ಅಧಿಕಾರಿಗಳು, ತಾ.ಪಂ. ಇ.ಒ ಗಳು, ತಾಲೂಕು ಪಂಚಾಯತ್ ಅಧ್ಯಕ್ಷರು, ನಾಮನಿರ್ದೇಶಿತ ಸದಸ್ಯರು ಉಪಸ್ಥಿತರಿದ್ದರು.