Thursday, January 7, 2010

ಸಾಂಸ್ಕೃತಿಕ ಪುನಶ್ಚೇತನಕ್ಕೆ ರಾಜ್ಯ ಸರ್ಕಾರದಿಂದ ನೆರವು:ಸಿ ಎಂ

ಮಂಗಳೂರು,ಜ.7:ಭಾರತದ ಬಹುರೂಪಿ ಸಂಸ್ಕೃತಿಯಲ್ಲಿ ನಮ್ಮ ಶಕ್ತಿ ಅಡಗಿದ್ದು,ಸಂಸ್ಕೃತಿ ಪಲ್ಲಟಗೊಳ್ಳುತ್ತಿರುವ ಪ್ರಸಕ್ತ ಸನ್ನಿವೇಶದಲ್ಲಿ ಇದರ ರಕ್ಷಣೆಗೆ ರಾಜ್ಯ ಸರ್ಕಾರ ಬದ್ಧವಾಗಿದ್ದು, ವಿಜಯನಗರ ಉತ್ಸವ, ಕರಾವಳಿ ಉತ್ಸವ,ಕದಂಬೋತ್ಸವಗಳಂತಹ ಉತ್ಸವಗಳ ಮೂಲಕ ನಮ್ಮ ಸಂಸ್ಕೃತಿ,ಕಲಾವಿದರನ್ನು ಪೋಷಿಸಲು ಹೆಚ್ಚಿನ ಅನುದಾನ ಮತ್ತು ನೆರವನ್ನು ನೀಡುತ್ತಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಹೇಳಿದರು.

ಆಳ್ವಾಸ್ ವಿರಾಸತ್ 2010 ನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆಯ ರೀತಿ ಅವರ್ಣನೀಯ ಆನಂದವನ್ನು ನೀಡಿದೆ ಎಂದರು.21ನೇ ಶತಮಾನ ಭಾರತೀಯರದ್ದಾಗಿದ್ದು,ನಮ್ಮ ಯುವಶಕ್ತಿ ಪ್ರಪಂಚದೆಲ್ಲೆಡೆ ಮಾನ್ಯತೆಯನ್ನು ಪಡೆಯುತ್ತಿದೆ.ಅಭಿವೃದ್ಧಿಯೊಂದನ್ನೇ ಮೂಲಮಂತ್ರವಾಗಿರಿಸಿ ಮುನ್ನಡೆಯುತ್ತಿರುವ ನಮ್ಮ ಸರ್ಕಾರ ಅವಿರತವಾಗಿ ರಾಜ್ಯದ ಎಲ್ಲ ಜನರ ಸರ್ವಾಂಗೀಣ ಅಭಿವೃದ್ಧಿಗೆ ಯೋಜನೆಗಳನ್ನು ರೂಪಿಸಿ ಅನುಷ್ಠಾನಕ್ಕೆ ತರುತ್ತಿದೆ.ಇದಕ್ಕೆ ಪೂರಕವಾಗಿ ಆಳ್ವಾರಂತಹ ವೈಯಕ್ತಿಕ ಶಕ್ತಿಗಳು ಅತ್ಯುತ್ತಮ ಶೈಕ್ಷಣಿಕ ಸಂಸ್ಥೆಯ ಮುಖಾಂತರ ಯುವಶಕ್ತಿಯನ್ನು ರೂಪಿಸುತ್ತಿರುವುದನ್ನು ಅಭಿನಂದಿಸಿದರು.ಮಹಾತ್ಮ ಗಾಂಧಿಯವರು ಹೇಳಿದಂತೆ'ಬೇರೆ ಸಂಸ್ಕೃತಿಯನ್ನು ಪ್ರೀತಿಸು;ಆದರೆ ನಿನ್ನ ಸಂಸ್ಕೃತಿಯಲ್ಲೇ ಜೀವಿಸು'ಎಂಬ ನುಡಿಯನ್ನು ಪಾಲಿಸುವುದರಿಂದ ಸೌಹಾರ್ದ ಬದುಕು ಸಾಧ್ಯ ಎಂದು ಮುಖ್ಯಮಂತ್ರಿಗಳು ನುಡಿದರು.ಕರಾವಳಿ ಸಂಸ್ಕೃತಿಯ ಶ್ರೀಮಂತ ಕಲೆಗಳೂ ಅಂತಾ ರಾಷ್ಟ್ರೀಯ ಖ್ಯಾತಿ ಪಡೆಯಲು ಇಂತಹ ಸಾಂಸ್ಕೃತಿಕ ಮೇಳ ದಿಂದ ಸಾಧ್ಯ ವಾಗಿದೆ ಎಂದರು.ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಧರ್ಮಾಧಿಕಾರಿ ವೀರೇಂದ್ರ ಹೆಗಡೆಯವರು,ಕರಾವಳಿಗರಿಗೆ ಕಲೆಯ ಬಗ್ಗೆ ಅಭಿರುಚಿ,ಆರಾಧನೆಯನ್ನು ಕಲಿಸಿದವರು ಡಾ.ಮೋಹನ್ ಆಳ್ವ ಅವರು ಎಂದು ಪ್ರಶಂಸಿಸಿದರಲ್ಲದೆ,ಆಳ್ವಾಸ್ ಶಿಕ್ಷಣ ಸಂಸ್ಥೆ,ಪಠ್ಯೇತರ ಚಟುವಟಿಕೆಗೆ ಸಾಕಷ್ಟು ಆದ್ಯತೆ ನೀಡಿದ್ಚು, ಇದರಿಂದ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆ ಸಾಧ್ಯ ಎಂಬ ಸಂದೇಶವನ್ನು ನೀಡಿದೆ ಎಂದರು.
ಈ ಬಾರಿಯ ಆಳ್ವಾಸ್ ವಿರಾಸತ್ ಪ್ರಶಸ್ತಿಯನ್ನು ಸಂಗೀತ ವಿದ್ವಾಂಸ ಬಾಲಮುರಳಿ ಕೃಷ್ಣ ಅವರಿಗೆ ಪ್ರದಾನ ಮಾಡಲಾಯಿತು.

ದಕ್ಷಿಣ ಕನ್ನಡ ಜಿಲ್ಲೆ ಉಸ್ತುವಾರಿ ಸಚಿವರಾದ ಜೆ.ಕೃಷ್ಣ ಪಾಲೇಮಾರ್, ಸಂಸದರಾದ ನಳಿನ್ ಕುಮಾರ್ ಕಟೀಲ್, ಶಾಸಕರಾದ ಕೆ.ಅಭಯಚಂದ್ರ ಜೈನ್, ಎನ್.ಯೋಗೀಶ್ ಭಟ್, ಕ್ಯಾ.ಗಣೇಶ್ ಕಾರ್ಣಿಕ್, ಕೋಟ ಶ್ರೀನಿವಾಸ ಪೂಜಾರಿ, ಕೆ.ಅಮರನಾಥ ಶೆಟ್ಟಿ,ಜಿ.ಪಂ.ಅಧ್ಯಕ್ಷರಾದ ಸಂತೋಷ್ ಕುಮಾರ್ ಭಂಡಾರಿ, ಡಾ.ಎಸ್.ರಮಾನಂದ ಶೆಟ್ಟಿ, ಡಾ.ಬಿ.ಆರ್.ಶೆಟ್ಟಿ, ಎನ್.ಆರ್.ಶೇಟ್,ಉಪಕುಲಪತಿ ಕಾವೇರಿಯಪ್ಪ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.ಡಾ. ಎಂ. ಮೋಹನ ಆಳ್ವ ಸ್ವಾಗತಿಸಿದರು.