Saturday, January 2, 2010

10 ಲಕ್ಷ ಉದ್ಯೋಗಸೃಷ್ಟಿ ಯೋಜನೆ:ಕಾರ್ಮಿಕ ಸಚಿವ ಬಚ್ಚೇಗೌಡ

ಮಂಗಳೂರು,ಜ.2:ರಾಜ್ಯ ಸರ್ಕಾರ ತನ್ನ ಅಧಿಕಾರವಧಿಯಲ್ಲಿ 10ಲಕ್ಷ ಉದ್ಯೋಗ ಸೃಷ್ಟಿ ಯೋಜನೆಯನ್ನು ಹಮ್ಮಿಕೊಂಡಿದ್ದು, ಈ ನಿಟ್ಟಿನಲ್ಲಿ ಉದ್ಯೋಗ ವಿನಿಮಯ ಕೇಂದ್ರಗಳನ್ನು ಮಾನವ ಸಂಪನ್ಮೂಲ ಕೇಂದ್ರಗಳನ್ನಾಗಿ ಪರಿವರ್ತಿಸುವ ಮೂಲಕ ನಿರುದ್ಯೋಗಿಗಳಿಗೆ ಉದ್ಯೋಗ ಮತ್ತು ಸೂಕ್ತ ತರಬೇತಿ ನೀಡುವ ಕಾರ್ಯಕ್ರಮಗಳನ್ನು ರೂಪಿಸಿದೆ ಎಂದು ಕಾರ್ಮಿಕ ಸಚಿವ ಬಚ್ಚೇಗೌಡ ಅವರು ತಿಳಿಸಿದರು.
ಅವರು ಇಂದು ಸುಳ್ಯದ ನಿಂತಿಕಲ್ ನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ರಾಜ್ಯ ಮಟ್ಟದ ನಾಯಕತ್ವ ತರಬೇತಿ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ಈಗಾಗಲೇ 8ಜಿಲ್ಲೆಗಳಲ್ಲಿ ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿದ್ದು, 1,74,000ನಿರುದ್ಯೋಗಿಗಳ ನೋಂದಾವಣೆ ಮಾಡಲಾಗಿದೆ. ಮಾನವ ಸಂಪನ್ಮೂಲ ಕೇಂದ್ರಗಳನ್ನು ರಾಜ್ಯದೆಲ್ಲೆಡೆ ವಿಸ್ತರಿಸಲಾಗುವುದು. ಕಾರ್ಮಿಕ ಇಲಾಖೆಗೆ ಸರ್ಕಾರ ಬಹಳಷ್ಟು ಆದ್ಯತೆ ನೀಡಿದ್ದು, 165 ಕೋಟಿ ರೂ.ಗಳಿದ್ದ ಅನುದಾನ 350 ಕೋಟಿಗೆ ಏರಿಸಲಾಗಿದೆ ಎಂದು ಅವರು ಹೇಳಿದರು.