Saturday, January 16, 2010

'ಗ್ರಾಹಕರ ಜಾಗೃತಿ ಪ್ರಸಕ್ತ ಅಗತ್ಯ'

ಮಂಗಳೂರು,ಜ.16:ಗ್ರಾಹಕ ರಕ್ಷಣೆ ಕಾಯಿದೆ ಕುರಿತು ಗ್ರಾಹಕರಲ್ಲಿ ಅದರಲ್ಲೂ ಮುಖ್ಯವಾಗಿ ಗ್ರಾಮೀಣರಲ್ಲಿ ಅರಿವು ಮೂಡಿಸುವ ಅಗತ್ಯವಿದೆ ಎಂದು ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ನ್ಯಾಯಮೂರ್ತಿ ಕೆ.ರಾಮಣ್ಣ ಅವರು ಹೇಳಿದರು. ದ.ಕ.ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಯು ಜಿಲ್ಲಾ ಆಹಾರ ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಮತ್ತಿತರ ಸಂಘಸಂಸ್ಥೆಗಳ ಸಹಕಾರದೊಂದಿಗೆ ಆಯೋಜಿಸಿದ್ದ ಗ್ರಾಹಕ ಜಾಗೃತಿ ಮತ್ತು ಕಾನೂನು ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ರಾಜ್ಯದ ಇತರೆಡೆಗಳಿಗೆ ಹೋಲಿಸಿದರೆ ದ.ಕ.ಜಿಲ್ಲೆಯಲ್ಲಿ ಪ್ರಕರಣ ದಾಖಲು ಕಡಿಮೆಯಾಗುತ್ತಿದ್ದು,1992ರಿಂದ ಡಿಸೆಂಬರ್ 2009ರವರೆಗೆ 9500 ಪ್ರಕರಣಗಳು ದಾಖಲಾಗಿದ್ದು, 9351 ಪ್ರಕರಣಗಳು ಇತ್ಯರ್ಥಗೊಂಡಿವೆ. 149 ದೂರುಗಳು ಮಾತ್ರ ಬಾಕಿ ಉಳಿದಿವೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಜೆ.ಕೃಷ್ಣ ಪಾಲೇಮಾರ್ ಅವರು ಮಾತನಾಡಿ, ಗ್ರಾಹಕ ಜಾಗೃತಿ ಅಗತ್ಯವನ್ನು ಪ್ರತಿಪಾದಿಸಿದರು.ವಂಚನೆಗೊಳಗಾದ ಗ್ರಾಹಕರು ದೂರು ನೀಡಿ ನ್ಯಾಯ ಪಡೆಯುವಂತೆ ಸಲಹೆ ಮಾಡಿದರು.ಜಿಲ್ಲಾ ಸತ್ರ ನ್ಯಾಯಾಧೀಶ ಎಚ್.ಆರ್.ದೇಶಪಾಂಡೆ,ಪಶ್ಚಿಮ ವಲಯ ಐಜಿಪಿ ಗೋಪಾಲ್ ಹೊಸೂರ್ ಮುಖ್ಯ ಅತಿಥಿಗಳಾಗಿದ್ದರು. ಹಲವು ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.