Monday, January 11, 2010

ಮುಚ್ಚೂರು: 2.78 ಕೋಟಿ ರೂ. ಗಳ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಸಚಿವರಿಂದ ಚಾಲನೆ

ಮಂಗಳೂರು,ಜ.11:ಮುಂದಿನ 3ವರುಷಗಳಲ್ಲಿ ಜಿಲ್ಲೆಯ ಗ್ರಾಮೀಣ ಪ್ರದೇಶಗಳ ಸರ್ವಾಂಗೀಣ ಅಭಿವೃದ್ಧಿಗೆ ಯೋಜನೆಗಳನ್ನು ರೂಪಿಸಲಾಗಿದ್ದು,ಜನರು ಸೌಲಭ್ಯಗಳ ಸದುಪಯೋಗ ಪಡೆದುಕೊಳ್ಳಬೇಕಿದೆ ಎಂದು ಜೀವಿಶಾಸ್ತ್ರ,ಪರಿಸರ,ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಜೆ.ಕೃಷ್ಣ ಪಾಲೇಮಾರ್ ಅವರು ಹೇಳಿದರು.

ಅವರು ಇಂದು ಮುಚ್ಚೂರು ಗ್ರಾಮದ ಗುಂಡಾವು ಎಂಬಲ್ಲಿ 43.81 ಲಕ್ಷ ರೂ.ಗಳ ಕಿಂಡಿ ಅಣೆಕಟ್ಟು ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡುತ್ತಿದ್ದರು. ನಂದಿನಿ ನದಿಗೆ ಕಟ್ಟಲಾಗಿರುವ 2.22ಮಿಲಿಯನ್ ಘನ ಅಡಿ ಸಂಗ್ರಹಣಾ ಸಾಮರ್ಥ್ಯದ 22.50 ಮೀಟರ್ ಎತ್ತರದ,10 ಕಿಂಡಿಗಳನ್ನು ಹೊಂದಿರುವ 116ಎಕರೆ ಅಚ್ಚುಕಟ್ಟು ಪ್ರದೇಶಕ್ಕೆ ನೀರುಣಿಸುವ ಸಾಮರ್ಥ್ಯ ಹೊಂದಿರುವ ಅಣೆಕಟ್ಟಿನ ಪ್ರಯೋಜನ ಕೃಷಿಕರಿಗಾಗಲೀ ಎಂದು ಸಚಿವರು ಹೇಳಿದರು.
ಮುಚ್ಚೂರು ಕೀಳೆಯಲ್ಲಿ 8 ಲಕ್ಷ ರೂ.ಗಳ ಬೋರ್ ವೆಲ್ ಗೂ ಇದೇ ಸಂದರ್ಭದಲ್ಲಿ ಚಾಲನೆ ನೀಡಲಾಯಿತು. ಕೊಂಪ ದವಿನಲ್ಲಿ ಪರಿಶಿಷ್ಟ ವರ್ಗ ದವರಿಗೆ ನೀರಾವರಿ ಗಾಗಿ 15ಲಕ್ಷ ರೂ. ಮೀಸಲಿರಿಸಿದೆ. ನಬಾರ್ಡ್,ಸಂಸದರ ನಿಧಿ,ಮುಖ್ಯಮಂತ್ರಿ ಗ್ರಾಮಸಡಕ್ ಯೋಜನೆಯಡಿ ನೆರವು ದೊರೆತಿದ್ದು,ಯೋಜನೆಗಳ ಅನುಷ್ಠಾನಕ್ಕೆ ಕ್ರಮಕೈಗೊಳ್ಳಲಾಗಿದೆ ಎಂದರು.

ಜಿಲ್ಲೆಯ ಕೊರಗರ ಅಭಿವೃದ್ಧಿಗೆ 5 ಕೋಟಿ ರೂ. ಬಿಡುಗಡೆ ಯಾಗಿದ್ದು, ಕೊರಗ ಸಮುದಾಯದ ಅರ್ಹ ಫಲಾನುಭವಿಗಳು ಯೋಜನೆಯನ್ನು ಸದ್ಬಳಕೆ ಮಾಡಲು ಈ ಸಂದರ್ಭದಲ್ಲಿ ಸಚಿವರು ಸಲಹೆ ನೀಡಿದರು.ಅಕ್ರಮ ಮರಳು ಸಾಗಾಣಿಕೆ ತಡೆಗೆ ವಿಶೇಷ ತಂಡವೊಂದನ್ನು ರಚಿಸಿ ಕಾನೂನು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು. ಕಾಮಗಾರಿ ಶಂಕುಸ್ಥಾಪನೆ ಸಂದರ್ಭದಲ್ಲಿ ಸಂಸದರಾದ ನಳಿನ್ ಕುಮಾರ್ ಕಟೀಲ್, ಜಿ.ಪಂ.ಅಧ್ಯಕ್ಷ ಸಂತೋಷ್ ಕುಮಾರ್ ಭಂಡಾರಿ,ಜಿ.ಪಂ.ಸದಸ್ಯರಾದ ಕೃಷ್ಣ ಅಮೀನ್, ಗ್ರಾಮಪಂಚಾಯತ್ ಅಧ್ಯಕ್ಷರಾದ ಜನಾರ್ಧನ ಉಪಸ್ಥಿತರಿದ್ದರು.