Monday, February 27, 2012

'ಕೇಂದ್ರ ಸರ್ಕಾರದ ಯೋಜನೆಗಳನ್ನು ತ್ವರಿತವಾಗಿ ಅನುಷ್ಠಾನಕ್ಕೆ ತನ್ನಿ'

ಮಂಗಳೂರು,ಫೆಬ್ರವರಿ.27:ಕೇಂದ್ರ ಸರ್ಕಾರದಿಂದ ದಕ್ಷಿಣ ಕನ್ನಡ ಜಿಲ್ಲೆಗೆ ವಿವಿಧ ಯೋಜನೆಗಳ ಮೂಲಕ ಬಿಡುಗಡೆಯಾಗಿರುವ ಅನುದಾನವನ್ನು ತ್ವರಿತಗತಿಯಲ್ಲಿ ಬಳಸಿಕೊಂಡು ಯೋಜನೆಗಳು ಸದುಪಯೋಗವಾಗುವಂತೆ ಕ್ರಮ ಕೈಗೊಳ್ಳಬೇಕೆಂದು ದ.ಕ.ಲೋಕಸಭಾ ಕ್ಷೇತ್ರದ ಸಂಸದರಾದ ನಳಿನ್ ಕುಮಾರ್ ಕಟೀಲ್ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಅವರು ಇಂದು ಜಿಲ್ಲಾ ಪಂಚಾ ಯತ್ ನೇತ್ರಾವತಿ ಸಭಾಂಗ ಣದಲ್ಲಿ ನಡೆದ ಜಿಲ್ಲಾ ಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆ ಅಧ್ಯಕ್ಷತೆ ವಹಿಸಿದ್ದರು.ಕುಡಿಯುವ ನೀರು ಯೋಜನೆಗಳು, ರಸ್ತೆಗಳು, ಸರ್ವ ಶಿಕ್ಷಣ ಅಭಿಯಾನದಡಿ ಶಾಲಾ ಕೊಠಡಿಗಳ ನಿರ್ಮಾಣ, ಇಂದಿರಾ ಆವಾಜ್ ಯೋಜನೆ ವಸತಿ, ಬಸವ ವಸತಿ ಯೋಜನೆ ಮುಂತಾದ ಯೋಜನೆಗಳ ಅನುಷ್ಠಾನ ಕುರಿತಂತೆ ಪ್ರಗತಿ ಪರಿಶಿಲನೆ ಮಾಡಿದರು.ಸಾಮಾಜಿಕ ಭದ್ರತಾ ಯೋಜನೆಗಳ ಫಲಾನುಭವಿಗಳಿಗೆ ವಿಶೇಷವಾಗಿ ವೃದ್ದಾಪ್ಯ ವೇತನದಾರರಿಗೆ ಕ್ಲಪ್ತ ಸಮಯದಲ್ಲಿ ಮಾಸಾಶನ ದೊರಕುವಂತೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ವಿಧಾನಸಭಾ ಉಪಸಭಾಪತಿಗಳಾದ ಎನ್.ಯೋಗೀಶ್ ಭಟ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ವಿಜಯಪ್ರಕಾಶ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.