Tuesday, February 21, 2012

ಕ್ರಿಯಾ ಯೋಜನೆಗೆ ಅನುಮತಿ ದ.ಕ. ಜಿಲ್ಲಾ ಯೋಜನಾ ಸಮಿತಿ ಸಭೆ

ಮಂಗಳೂರು,ಫೆಬ್ರವರಿ.21:2011-12ನೆ ಸಾಲಿಗೆ ಜಿಲ್ಲಾ ಯೋಜನಾ ಸಮಿತಿಗೆ ಬಿಡುಗಡೆಯಾದ ಆರು ಲಕ್ಷ ರೂ.ಗಳಲ್ಲಿ 2,15,082 ರೂ.ಗಳು ಖರ್ಚಾಗಿದ್ದು, 3,84,918 ರೂ.ಗಳು ಉಳಿಕೆಯಾಗಿದೆ ಎಂದು ಜಿ.ಪಂ. ಮುಖ್ಯ ಯೋಜನಾಧಿಕಾರಿ ಮುಹಮ್ಮದ್ ನಝೀರ್ ತಿಳಿಸಿದರು. ಇಂದು ಜಿಲ್ಲಾ ಪಂಚಾಯತ್ ನಲ್ಲಿ ಆಯೋಜಿಸಿದ್ದ ದಕ್ಷಿಣ ಕನ್ನಡ ಜಿಲ್ಲಾ ಯೋಜನಾ ಸಮಿತಿ ಸಭೆಯಲ್ಲಿ ಮಾತನಾಡುತ್ತಿದ್ದ ಅವರು, ಸಮಿತಿಯ ಎದುರು ಖರ್ಚು ವೆಚ್ಚದ ವಿವರ ಮಂಡಿಸಿದರು.
ಸಭೆಯಲ್ಲಿ ಮಾತನಾಡಿದ ಸಿಇಒ ಡಾ ಕೆ ಎನ್ ವಿಜಯಪ್ರಕಾಶ್ ಅವರು, ಪ್ರತೀ ಮೂರು ತಿಂಗಳಿಗೊಮ್ಮೆ ನಿಯಮಿತವಾಗಿ ಯೋಜನಾ ಸಮಿತಿ ಸಭೆ ಕರೆಯುವ ಹಾಗೂ ಇಂದಿನ ಕೃಷಿ ಕಾರ್ಯಾಗಾರದಂತೆ, ಆರೋಗ್ಯ ಮತ್ತು ಶಿಕ್ಷಣ ಕಾರ್ಯಾಗಾರಗಳನ್ನು ನಡೆಸುವುದಾಗಿ ಸಭೆಗೆ ಮಾಹಿತಿ ನೀಡಿದರು.
ಜಿಲ್ಲೆಯಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರದಿರಲು ಬಹುಗ್ರಾಮ ಕುಡಿಯುವ ನೀರು ಯೋಜನೆ ಹಾಗೂ ಕಿಂಡಿ ಅಣೆಕಟ್ಟುಗಳ ಯೋಜನೆಯ ಸಮಗ್ರ ಅನುಷ್ಠಾನಕ್ಕೆ ಯೋಜನೆ ರೂಪಿಸಿರುವುದಾಗಿ ಸಮಿತಿ ಸದಸ್ಯರ ಪ್ರಶ್ನೆಗೆ ಉತ್ತರಿಸಿದರು.
ಸರ್ವ ಶಿಕ್ಷಾ ಅಭಿಯಾನದಡಿ ದ.ಕ. ಜಿಲ್ಲೆಯಲ್ಲಿ ಸರಕಾರಿ ಶಾಲೆಗಳಿಗೆ ಆವರಣಗೋಡೆ ಹಾಗೂ ಆಟದ ಮೈದಾನಗಳನ್ನು ನಿರ್ಮಿಸುವ ಕುರಿತಂತೆ ಕ್ರಿಯಾ ಯೋಜನೆ ತಯಾರಿಸಿ ಸೂಕ್ತ ಕ್ರಮ ಕೈಗೊಳ್ಳುವಲ್ಲಿ ಪಿಡಿಒಗಳು ಹಾಗೂ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ಎನ್. ವಿಜಯಪ್ರಕಾಶ್ ಸೂಚನೆ ನೀಡಿದ್ದಾರೆ.
ಜಿಲ್ಲೆಯಾದ್ಯಂತ ಕಳೆದ ಸೆಪ್ಟಂಬರ್ ಅಂತ್ಯಕ್ಕೆ ಸಂಗ್ರಹಿಸಲಾದ ಮಾಹಿತಿಯ ಪ್ರಕಾರ 118 ಶಾಲೆಗಳಿಗೆ ಆಟದ ಮೈದಾನಗಳ ಅಗತ್ಯವಿದ್ದು, 407 ಶಾಲೆಗಳಿಗೆ ಆವರಣ ಗೋಡೆಯ ಅಗತ್ಯವಿರುವುದಾಗಿ ಸರ್ವ ಶಿಕ್ಷಣ ಅಭಿಯಾನ ಅಧಿಕಾರಿ ಶಿವಪ್ರಕಾಶ್ ಸಭೆಯಲ್ಲಿ ಮಾಹಿತಿ ನೀಡಿದರು.
ಜಿಲ್ಲೆಯ ಪ್ರತಿಯೊಂದು ಶಾಲೆಗಳಲ್ಲಿಯೂ ಶೌಚಾಲಯಗಳನ್ನು ಕಡ್ಡಾಯಗೊಳಿಸುವ ಕುರಿತಂತೆ ಕಳೆದ ಡಿಸೆಂಬರ್ 31ಕ್ಕೆ ಅಂತಿಮ ಗಡುವು ನೀಡಲಾಗಿದ್ದರೂ ಮತ್ತೆ ಮಾರ್ಚ್ 31ಕ್ಕೆ ಅಧಿಕಾರಿಗಳು ಗಡುವು ಕೋರಿದರು. ಈ ಸಂದರ್ಭ ಪ್ರತಿಕ್ರಿಯಿಸಿದ ಸಿಇಒ ಡಾ. ವಿಜಯಪ್ರಕಾಶ್, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಎಲ್ಲಾ ಗ್ರಾ.ಪಂ. ಪಿಡಿಒ ಮತ್ತು ಕಾರ್ಯದರ್ಶಿಗಳಿಗೆ ಸೂಚನೆ ನೀಡಿದರಲ್ಲದೆ, ಶಾಲಾ ಶೌಚಾಲಯಗಳಲ್ಲಿ ಸ್ವಚ್ಛತೆ, ಆರೋಗ್ಯವನ್ನು ಕಾಪಾಡುವಲ್ಲಿಯೂ ಜಾಗೃತಿ ವಹಿಸಬೇಕೆಂದರು.
ಸಭೆಯಲ್ಲಿ ಜಿ.ಪಂ. ಅಧ್ಯಕ್ಷೆ ಶೈಲಜಾ ಭಟ್, ಮನಪಾ ಆಯುಕ್ತ ಡಾ. ಹರೀಶ್ ಕುಮಾರ್, ಉಪಕಾರ್ಯದರ್ಶಿ ಶಿವರಾಮೇಗೌಡ ಉಪಸ್ಥಿತರಿದ್ದರು.